ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಸಿ.ಡಿ ತಯಾರಿಸಿದ್ದು ಕಾಂಗ್ರೆಸಿನ ಕೆಲವು 'ಮನೆಹಾಳ' ನಾಯಕರು: ಸಚಿವ ಸೋಮಶೇಖರ್

‘ಸಿ.ಡಿ ತಯಾರಿಕೆ ಕಾಂಗ್ರೆಸ್‌ನದೇ ಪಿತೂರಿ’: ಸಚಿವ ಸೋಮಶೇಖರ್
Last Updated 10 ಮಾರ್ಚ್ 2021, 8:03 IST
ಅಕ್ಷರ ಗಾತ್ರ

ಬೆಂಗಳೂರು: ‘ಸಮ್ಮಿಶ್ರ ಸರ್ಕಾರ’ದ ಪತನಕ್ಕೆ ಕಾರಣರಾದವರ ರಾಜಕೀಯ ಜೀವನ ಮುಗಿಸಲು ಕಾಂಗ್ರೆಸ್‌ ಪಿತೂರಿ ಮಾಡಿದ್ದು, ಅದರ ಭಾಗವಾಗಿಯೇ ರಮೇಶ ಜಾರಕಿಹೊಳಿ ಅವರ ತೇಜೋವಧೆಯ ಸಿ.ಡಿ ಬಿಡುಗಡೆ ಆಗಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ದೂರಿದರು.

‘ನಕಲಿ ಸಿ.ಡಿ ತಯಾರಿಸಿದ್ದು ನೂರಕ್ಕೆ ನೂರರಷ್ಟು ಆ ಪಕ್ಷದಲ್ಲಿರುವ ಕೆಲವು ಮನೆಹಾಳ ನಾಯಕರೇ’ ಎಂದು ಹೇಳಿದ ಅವರು, ‘20 ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್‌ನಲ್ಲಿದ್ದ ನನಗೆ ಆ ಪಕ್ಷದ ಮಹಾನ್‌ ನಾಯಕರ ನೈತಿಕತೆ– ಅನೈತಿಕತೆಯ ಸಾಕಷ್ಟು ಮಾಹಿತಿ ನನ್ನ ಬಳಿಯೂ ಇದೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ಆಗಬೇಕು. ಇದರಿಂದ ಪಿತೂರಿಕೋರರು ಯಾರೆಂಬುದು ಬಯಲಿಗೆ ಬರುತ್ತದೆ. ಸಮ್ಮಿಶ್ರ ಸರ್ಕಾರ ಬಿರುಕು ಬಿಡಲು ಮೂಲ ಕಾರಣವೇ ಅನೈತಿಕತೆ. ಅದು ಮಹಾನ್‌ ನಾಯಕರಿಗೂ ಗೊತ್ತಿದೆ. ಈಗ ದೊಡ್ಡದಾಗಿ ನೈತಿಕ–ಅನೈತಿಕತೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ಮಾರ್ಮಿಕವಾಗಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

‘ಬಾಂಬೆ ಟೀಮ್‌’ ಟಾರ್ಗೆಟ್‌ ಮಾಡುತ್ತಾರೆ ಎಂಬ ಮಾಹಿತಿ ಮೊದಲೇ ಗೊತ್ತಿಲ್ಲ. ಬಿಜೆಪಿ ಸರ್ಕಾರದಲ್ಲಿ ಸಚಿವರಾದವರನ್ನೇ ರಾಜಕೀಯವಾಗಿ ಮುಗಿಸುವುದು ಅವರ ಉದ್ದೇಶವಾಗಿದೆ. ಹೀಗಾಗಿ ಸಚಿವರನ್ನೇ ಟಾರ್ಗೆಟ್‌ ಮಾಡುತ್ತಿದ್ದಾರೆ. ಧೈರ್ಯವಿದ್ದರೆ ರಾಜಕೀಯವಾಗಿ ಎದುರಿಸಬೇಕು. ಅದಕ್ಕೆ ನಾವೂ ಸಿದ್ಧ. ಇಂತಹ ಮನೆಹಾಳು ಕುತಂತ್ರ ಮಾಡುವುದಲ್ಲ’ ಎಂದು ಸೋಮಶೇಖರ್‌ ತರಾಟೆಗೆ ತೆಗೆದುಕೊಂಡರು.

‘ನಾವು ಕೆಲವರು ನ್ಯಾಯಾಲಯಕ್ಕೆ ಹೋದ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಇವರು ಷಡ್ಯಂತ್ರ ಮಾಡುತ್ತಿದ್ದಾರೆ ಎಂಬುದು ಗೊತ್ತು. ನಾವು ಹಲವು ದಶಕಗಳಿಂದ ಕಟ್ಟಿಕೊಂಡು ಬಂದ ರಾಜಕೀಯ ಜೀವನವನ್ನು ಐದು ನಿಮಿಷಗಳಲ್ಲಿ ಸರ್ವ ನಾಶ ಮಾಡುವ ಅಸಹ್ಯದ ರಾಜಕಾರಣ ಮಾಡುತ್ತಿದ್ದಾರೆ. ಇವರಿಗೆ ನಮ್ಮನ್ನು ರಾಜಕೀಯವಾಗಿ ಎದುರಿಸಲು ಶಕ್ತಿ ಇಲ್ಲ’ ಎಂದು ಹೇಳಿದರು.

‘ನಾವು ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲು ತಪ್ಪು ಮಾಡಿದ್ದೇವೆ ಎಂಬ ಕಾರಣವಲ್ಲ. ಆದರೆ, ಇವರ ಕುತಂತ್ರಕ್ಕೆ ಬಲಿಯಾಗಬಾರದು ಎಂಬ ಉದ್ದೇಶಕ್ಕೆ ನ್ಯಾಯಾಲಯದ ಮೆಟ್ಟಿಲು ಹತ್ತಿದೆವು. ಅದು ಅಪರಾಧವಲ್ಲ, ಇವರಲ್ಲೇ ಹಲವು ನಾಯಕರು ಜಾಮೀನು ಪಡೆದು ಹೊರಗೆ ಓಡಾಡುತ್ತಿದ್ದಾರಲ್ಲ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT