ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಮೈತ್ರಿ ಯೋಗ್ಯ ಪಕ್ಷವಲ್ಲ: ರಾಜಸ್ಥಾನ, ಮಹಾ ಉದಾಹರಣೆ ನೀಡಿದ ಎಚ್ಡಿಕೆ

Last Updated 1 ಅಕ್ಟೋಬರ್ 2020, 11:47 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ ಮೈತ್ರಿಗೆ ಯೋಗ್ಯ ಪಕ್ಷವಲ್ಲ.ಮೈತ್ರಿಧರ್ಮವನ್ನೂ ಧರ್ಮವೆಂದು ಒಪ್ಪದ ಕಾಂಗ್ರೆಸ್ ಜೊತೆ ಎಂದೂ ಮೈತ್ರಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಗುರುವಾರ ಖಂಡತುಂಡವಾಗಿ ಹೇಳಿದ್ದಾರೆ.

ರಾಜ್ಯದಲ್ಲಿ ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾಗಿದ್ದು, ಈ ಎರಡೂ ಕ್ಷೇತ್ರಗಳಲ್ಲೂ ಜೆಡಿಎಸ್‌ ಜೊತೆ ಮೈತ್ರಿ ಇಲ್ಲದೇ ಸ್ಪರ್ಧಿಸುವುದಾಗಿ ಕಾಂಗ್ರೆಸ್‌ ನಾಯಕರು ಬುಧವಾರ ಹೇಳಿದ್ದರು. ಮೈತ್ರಿ ವಿಚಾರದಲ್ಲಿ ಜೆಡಿಎಸ್‌ ಅನ್ನು ಉಲ್ಲೇಖಿಸಿದ್ದಕ್ಕೆ ಎಚ್‌.ಡಿ ಕುಮಾರಸ್ವಾಮಿ ಟ್ವೀಟ್‌ ಮಾಡಿ ಕಿಡಿ ಕಾರಿದ್ದಾರೆ.

‘ಜೆಡಿಎಸ್ ಜೊತೆ ಮೈತ್ರಿ ಇಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿರುವ ಪತ್ರಿಕೆ, ವಾಹಿನಿಗಳ ವರದಿಯನ್ನು ಗಮನಿಸಿದೆ. ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾವವನ್ನು ಜೆಡಿಎಸ್ನಿಂದ ಮುಂದಿಟ್ಟಿರುವುದಾದರೂ ಯಾರು? 2018ರ ಫಲಿತಾಂಶದ ಬಳಿಕ ದೇವೇಗೌಡರ ಮನೆ ಬಾಗಿಲಿಗೆ ಕಾಂಗ್ರೆಸ್ ಬಂದಂತೆ ನಾವ್ಯಾರೂ ಕಾಂಗ್ರೆಸ್ ಬಾಗಿಲಿಗೆ ಹೋಗಿಲ್ಲ,’ ಎಂದು ತಿಳಿಸಿದರು.

‘ಕಾಂಗ್ರೆಸ್ ಮೈತ್ರಿಗೆ ಯೋಗ್ಯ ಪಕ್ಷವಲ್ಲ. ರಾಜ್ಯದಲ್ಲಿ ನನ್ನ ನೇತೃತ್ವದ ಮೈತ್ರಿ ಸರ್ಕಾರ ಕೆಡವಿದ,ರಾಜಸ್ಥಾನದಲ್ಲಿ ಬೆಂಬಲ ನೀಡಿದ್ದ BSP ಶಾಸಕರನ್ನೇ ಸೆಳೆದ,ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ದಿನವೂ ಅಲುಗಾಡಿಸುತ್ತಿರುವ ಅದರ ವರ್ತನೆಯು, ಮೈತ್ರಿಗೆ ತಾನು ಯೋಗ್ಯವಲ್ಲ ಎಂಬುದರ ಸಂದೇಶ. ಅಷ್ಟಕ್ಕೂ ಕಾಂಗ್ರೆಸ್ ಮಿತ್ರ ಪಕ್ಷಗಳು ಬೇರೆಯೇ ಇವೆ,’ ಎಂದು ಅವರು ಹೇಳಿದ್ದಾರೆ.

‘ಮೈತ್ರಿಧರ್ಮವನ್ನೂ ಧರ್ಮವೆಂದು ಒಪ್ಪದ ಕಾಂಗ್ರೆಸ್ ಜೊತೆ ಎಂದೂ ಮೈತ್ರಿ ಇಲ್ಲ. ಮೈತ್ರಿ ವಿಷಯವಾಗಿ ಕಾಂಗ್ರೆಸ್ ಎದುರು ಜೆಡಿಎಸ್ನ ಅವಕಾಶವನ್ನು ಯಾರೂ ಮುಂದಿಡುವುದೂ ಬೇಡ. ರಾಜ್ಯದಲ್ಲಿ ಮೈತ್ರಿ ಎಂದರೆ ಕಾಂಗ್ರೆಸ್-ಜೆಡಿಎಸ್ ಎಂಬ ಭಾವನೆಯೂ ಬೇಡ. ಹಾಗೇ, ಜೆಡಿಎಸ್, ದೇವೇಗೌಡರ ಹೆಸರು ಬಳಸಿ ಆ ಪಕ್ಷದ 'ನಾಯಕ'ರು ಲಾಭ ಮಾಡಿಕೊಳ್ಳುವುದೂ ಬೇಡ‌,’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT