ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ ವಿಷಯ ಸರ್ಕಾರಕ್ಕೆ ಇಷ್ಟು ವರ್ಷ ಗೊತ್ತಿರಲಿಲ್ಲವೇ: ವಿಪಕ್ಷಗಳ ಪ್ರಶ್ನೆ

'ಪ್ರಭಾವಿಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ?'
Last Updated 20 ಸೆಪ್ಟೆಂಬರ್ 2022, 4:45 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿ 2,626 ಜಾಗಗಳು ಒತ್ತುವರಿಯಾಗಿವೆ ಎಂದು ಗುರುತಿಸಲಾಗಿದೆ. ಇಷ್ಟು ವರ್ಷ ಈ ವಿಷಯ ಗೊತ್ತಿರಲಿಲ್ಲವೇ? 5–6 ವರ್ಷಗಳ ಹಿಂದೆಯೇ ಗುರುತಿಸಿದ್ದರೂ ತೆರವುಗೊಳಿಸಲು ಹಿಂದೇಟು ಹಾಕಿದ್ದು ಏಕೆ’ ಎಂದು ವಿಧಾನ ಪರಿಷತ್‌ ಸದಸ್ಯ, ಜೆಡಿಎಸ್‌ನ ಎಸ್.ಎಲ್‌. ಭೋಜೇಗೌಡ ಪ್ರಶ್ನಿಸಿದರು.

ಸೋಮವಾರ ವಿಧಾನ ಪರಿಷತ್‌ನಲ್ಲಿ ನಿಯಮ 68ರ ಅಡಿಯಲ್ಲಿ ಅತಿವೃಷ್ಟಿ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ‘ಮನೆಗಳನ್ನು ನಿರ್ಮಿಸಲು ಲೈಸನ್ಸ್‌ ನೀಡಿದ್ದು ಯಾರು? ಸರ್ಕಾರಿ ಜಾಗ, ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಪ್ರಭಾವಿಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ. ಪಾಪಿ ಪರದೇಶಿಗಳ ಮನೆಗಳನ್ನು ಮಾತ್ರ ಒಡೆದು ಹಾಕಿದ್ದೀರಿ ಹೊರತು ಪ್ರಭಾವಿಗಳದ್ದಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ನಿಯಮಗಳನ್ನು ಪಾಲಿಸದ ಯಾವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳಿಗೂ ನಾಚಿಕೆಯಾಗಬೇಕು. ರಾಜಕಾರಣ ಮಾಡುವುದಾದರೆ ರಾಜೀನಾಮೆ ನೀಡಿ ಎಂಎಲ್‌ಎಗಳಾಗಿ’ ಎಂದು ಕಿಡಿಕಾರಿದರು.

‘ಕೆರೆ ಮತ್ತು ರಾಜಕಾಲುವೆಗಳು ಒತ್ತುವರಿಯಾಗಿವೆ ಎಂದು ಸಿಎಜಿ ವರದಿಯಲ್ಲೂ ಉಲ್ಲೇಖವಾಗಿದೆ. ಬಾಗಮಾನೆ ಟೆಕ್‌ ಪಾರ್ಕ್‌, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ದಿವ್ಯಾ ಸ್ಕೂಲ್‌, ನಲಪಾಡ್‌, ಗೋಪಾಲನ್‌ ಸೇರಿದಂತೆ ಹಲವು ಪ್ರಮುಖ ಕಂಪನಿಗಳೇ ಒತ್ತುವರಿ ಮಾಡಿಕೊಂಡಿವೆ’ ಎಂದು ವಿವರಿಸಿದರು.

‘ಬೆಂಗಳೂರು ನಗರದಲ್ಲಿ 1452ಕ್ಕೂ ಹೆಚ್ಚು ಕೆರೆಗಳಿದ್ದವು. ಇವುಗಳಲ್ಲಿ 35 ಟಿಎಂಸಿ ನೀರು ಸಂಗ್ರಹವಾಗುತ್ತಿತ್ತು. ಈ ಅಪಾರ ಪ್ರಮಾಣದ ನೀರಿನಿಂದ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಹುದಿತ್ತು. ಆದರೆ, ಈಗ 215 ಕೆರೆಗಳು ಮಾತ್ರ ಉಳಿದುಕೊಂಡಿದ್ದು, 2.5ಟಿಎಂಸಿ ನೀರಷ್ಟೆ ಸಂಗ್ರಹವಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಮಳೆ ನೀರು ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸಿದರು.

ಜೆಡಿಎಸ್‌ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಮಾತನಾಡಿ, ‘ರಾಜ್ಯದಲ್ಲಿ ಸಂಭವಿಸಿರುವ ಪ್ರವಾಹ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಇದರಿಂದ ಮಾತ್ರ ರಾಜ್ಯಕ್ಕೆ ಹೆಚ್ಚಿನ ನೆರವು ದೊರೆಯಲಿದೆ’ ಎಂದರು.

‘ಕೆಲಸ ಮಾಡದ ಬಿಬಿಎಂಪಿ’
‘ಬಿಬಿಎಂಪಿ ಕೆಲಸ ಮಾಡುತ್ತಿಲ್ಲ.ಹೊರವಲಯದ ಕಂಪನಿಗಳು ಇರುವ ಪ್ರದೇಶಕ್ಕೆ ಪ್ರತ್ಯೇಕ ಪಾಲಿಕೆ ಸ್ಥಾಪಿಸಿ ಎಂದು ಮನವಿ ಮಾಡಿರುವುದೇ ಇದಕ್ಕೆ ಸಾಕ್ಷಿ. ಬೆಂಗಳೂರು ನಗರದಲ್ಲಿನ ಗುಂಡಿಗಳಿರುವ ರಸ್ತೆಗಳು ದುರಸ್ತಿಯಾಗಬೇಕಾದರೆ ದೇಶದ ಪ್ರಧಾನಿಯೇ ಬರಬೇಕೇ?’ ಎಂದು ಕಾಂಗ್ರೆಸ್‌ ಸದಸ್ಯ ನಾಗರಾಜ್‌ ಅವರು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

‘ಟ್ರ್ಯಾಕ್ಟರ್‌, ಬೋಟ್‌ಗಳಲ್ಲಿ ಜನ ಸಂಚರಿಸಬೇಕಾದ ಪರಿಸ್ಥಿತಿ ತಲುಪಿದೆ. ಹೀಗಾದರೆ ಬೆಂಗಳೂರು ಬ್ರ್ಯಾಂಡ್‌ ಪರಿಸ್ಥಿತಿ ಏನು? ಬಿಬಿಎಂಪಿ ತೆರಿಗೆ ಸಂಗ್ರಹಕ್ಕೆ ಮಾತ್ರ ಸೀಮಿತವಾಗಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT