ಬುಧವಾರ, ಜನವರಿ 19, 2022
25 °C
ರಮೇಶ ಜಾರಕಿಹೊಳಿ ವಿರುದ್ಧ ಗುಡುಗು

ಬಿಜೆಪಿ, ಆರ್‌ಎಸ್ಎಸ್ ಗೋಡ್ಸೆ ಪಳಿಯುಳಿಕೆ: ಸಿದ್ದರಾಮಯ್ಯ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮಹಾತ್ಮ ಗಾಂಧೀಜಿ ಕೊಂದವರು ಆರ್‌‌ಎಸ್‌ಎಸ್‌ನವರು. ನಾಥೂರಾಮ್ ಗೋಡ್ಸೆ ಆರ್‌ಎಸ್‌ಎಸ್‌ನವನು. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ಗೋಡ್ಸೆ ಪಳಿಯುಳಿಕೆ ಮತ್ತು ವಂಶಸ್ಥರು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಕಲ್ಲೂರ ಹೊರವಲಯದ ಸಿದ್ದೇಶ್ವರ ದೇವಸ್ಥಾನದ‌ ಸಮುದಾಯ ಭವನದಲ್ಲಿ ಕಾಂಗ್ರೆಸ್‌ನಿಂದ ಭಾನುವಾರ ಆಯೋಜಿಸಿದ್ದ ಸವದತ್ತಿ ಹಾಗೂ ರಾಮದುರ್ಗ ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳ ಸದಸ್ಯರ ಸಮ್ಮಿಲನ‌ ಸಮಾವೇಶದಲ್ಲಿ ಅವರು ಮಾತನಾಡಿದರು.

ನರೇಂದ್ರ ಮೋದಿ ಆರ್‌ಎಸ್‌ಎಸ್‌ನವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್‌ಎಸ್‌‌ಎಸ್‌ನವರಲ್ಲ. ಬಿ.ಎಸ್. ಯಡಿಯೂರಪ್ಪ ಅವರನ್ನು ಕಿತ್ತು ಹಾಕಿದಾಗ ಲಾಟರಿ ಹೊಡೆದು ಮುಖ್ಯಮಂತ್ರಿ ಆಗಿ ಬಿಟ್ಟರು. ಅವರನ್ನೂ‌ ಕಿತ್ತು ಹಾಕಲು ಈಶ್ವರಪ್ಪ ಮಾತನಾಡುತ್ತಿದ್ದಾನೆ ಎಂದು ಟೀಕಿಸಿದರು.

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲು ಬಿಜೆಪಿ ಹೆದರುತ್ತಿದೆ. ಸೋಲಿನ‌ ಭಯ ಅವರನ್ನು ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರದ್ದು ಹಿಂದಿನಿಂದಲೂ ಇಬ್ಬಂದಿ ರಾಜಕಾರಣ. ನೇರವಾಗಿ ರಾಜಕೀಯ ಮಾಡಿ ಗೊತ್ತೇ ಇಲ್ಲ ಅವರಿಗೆ ಎಂದು ಟೀಕಿಸಿದರು.

ಹೋದ‌ ವಿಧಾನಪರಿಷತ್ ‌ಚುನಾವಣೆಯಲ್ಲಿ ಜಿಲ್ಲೆಯಲ್ಲಿ ರಮೇಶ ಜಾರಕಿಹೊಳಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯನ್ನೆ ಸೋಲಿಸಿದ್ದರು. ಈ ಬಾರಿಯೂ ತಮ್ಮ ಲಖನ್ ಜಾರಕಿಹೊಳಿಗಾಗಿ ಬಿಜೆಪಿ ಅಧಿಕೃತ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರನ್ನು ಸೋಲಿಸಿದರೆ ಆಶ್ಚರ್ಯವಿಲ್ಲ ಎಂದು ಭವಿಷ್ಯ ನುಡಿದರು.

ನಿಮ್ಮ ಪರವಾಗಿ ದನಿ ಎತ್ತುವವರನ್ನು ವಿಧಾನಪರಿಷತ್‌ಗೆ ಕಳುಹಿಸಿಕೊಡಬೇಕು. ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳುವವರನ್ನು ಕಳುಹಿಸಬಾರದು. ಪಂಚಾಯಿತಿ ವ್ಯವಸ್ಥೆಗೆ ಶಕ್ತಿ ತುಂಬಿದ ಪಕ್ಷವನ್ನು ಬೆಂಬಲಿಸಬೇಕು.

ಬಿ.ಎಸ್. ಯಡಿಯೂರಪ್ಪ ಅವರನ್ನು ನಾವೇನು ಕಿತ್ತು ಹಾಕಿಲ್ಲ. ಅವರೇ (ಬಿಜೆಪಿ) ಕಿತ್ತು ಹಾಕಿದ್ದಾರೆ. ಈ ಸರ್ಕಾರದವರು ಈವರೆಗೆ ಒಂದು ಅಭಿವೃದ್ಧಿ ಕೆಲಸವನ್ನಾದರೂ ಮಾಡಿದ್ದಾರೆಯೇ? ಮನೆ ಮಂಜೂರು ಮಾಡಿದ್ದಾರೆಯೇ? ಹೇಗೆ ಮತ ಕೇಳುತ್ತಾರೆ? ಮಾನ ಮರ್ಯಾದೆ ಇಲ್ಲವೇ? ನಮ್ಮ ಸರ್ಕಾರವಿದ್ದಾಗ 5 ವರ್ಷದಲ್ಲಿ 15 ಲಕ್ಷ ಮನೆಗಳನ್ನು ಮಂಜೂರು ಮಾಡಿಸಿದ್ದೆ. ಒಂದೂ ಮನೆ ಕೊಡದಿರುವ ಬಿಜೆಪಿಗೆ ಮತ ಹಾಕಬೇಕೇ? ಅವರ ಮುಖಕ್ಕೆ ಮಂಗಳಾರತಿ ಎತ್ತಿ ಮನೆಗೆ ಕಳುಹಿಸಬೇಕು ಎಂದು ಕೋರಿದರು.

ನಾನು 7 ಕೆ.ಜಿ. ಅಕ್ಕಿ ಕೊಡುತ್ತಿದ್ದೆ. ಈಗ 5 ಕೆ.ಜಿ.ಗೆ ಇಳಿಸಿದ್ದಾರೆ. ಅವರೇನು ಅವರ ಅಪ್ಪನ ಮನೆಯ ಹಣ ಖರ್ಚು ಮಾಡುತ್ತಿದ್ದರಾ? ಜನರ ದುಡ್ಡು ಜನರಿಗೆ ಕೊಡೋಕೆ ಅವರಿಗೇನು ತೊಂದರೆ ಎಂದು ಕೇಳಿದರು

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ರಾಜ್ಯದಾದ್ಯಂತ ಗಾಳಿ ಕಾಂಗ್ರೆಸ್ ಪರ ಬೀಸುತ್ತಿದೆ. ಇಡೀ ರಾಜ್ಯದ ಜನರು ಈ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಬಿಜೆಪಿಯ ಭ್ರಷ್ಟಾಚಾರ ಹಾಗೂ ದುರಾಡಳಿತದಿಂದ ಬೇಸತ್ತಿದ್ದಾರೆ ಎಂದರು.

ಉದ್ಯೋಗ ಖಾತ್ರಿ ಯೋಜನೆ ಕೊಟ್ಟವರು ನಾವು. ನರೇಂದ್ರ ಮೋದಿ ಕೊಡುಗೆ ಏನು? ಎಂದು ಕೇಳಿದರು.

ಸಾಲ‌ ಮನ್ನಾ ಹಾಗೂ ಆಹಾರ ಭದ್ರತಾ ಕಾಯ್ದೆ ಮಾಡಿದವರು ನರೇಂದ್ರ ಮೋದಿ ಎಂದು ಹೇಳಿದ ಅವರು, ನಂತರ ಮನಮೋಹನ್ ಸಿಂಗ್ ಮಾಡಿದರು ಎಂದು ತಿದ್ದಿಕೊಂಡರು.

ಮೂರು ಕೃಷಿ ಕಾಯ್ದೆಗಳನ್ನು ಮಾಡಿ ರೈತರನ್ನು ಬೀದಿಗೆ ನಿಲ್ಲಿಸಿದರು. ರೈತರ ಸಾವಿಗೆ ಮೋದಿ ಕಾರಣ. ರೈತರ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ? ಎಂದು ಕೇಳಿದರು.

ಕುರುಬ ಸಮಾಜದ ವಿವೇಕರಾವ್ ಪಾಟೀಲಗೆ ಟಿಕೆಟ್ ಕೊಡದೆ ಮೋಸ ಮಾಡಿದರು ಎಂದು ರಮೇಶ ಜಾರಕಿಹೊಳಿ ನನ್ನ ಬಗ್ಗೆ ಮಾತನಾಡಿದ್ದಾರೆ. ವಿವೇಕರಾವ್ ನಮ್ಮ ಪಕ್ಷಕ್ಕೆ ಸೇರಿಸಲೇ ಇಲ್ಲ. ಅವರಿಗೆ ಟಿಕೆಟ್ ಕೊಡಲಾಗುತ್ತದೆಯೇ? ರಮೇಶನ ಅನುಯಾಯಿ ಅವನು. ರಮೇಶನ ಬ್ಯಾಗ್ ಹಿಡಿದು ಓಡಾಡುತ್ತಿದ್ದ. ಅವನಿಗೆ ಹೇಗೆ ಟಿಕೆಟ್ ಕೊಡಬೇಕು? ಅಷ್ಟು ಪ್ರೀತಿ ಇದ್ದಿದ್ದರೆ ರಮೇಶ ತನ್ನ ಆಪ್ತ ವಿವೇಕ್‌ರಾವ್ ಅವರನ್ನೆ ಚುನಾವಣೆಯಲ್ಲಿ ನಿಲ್ಲಿಸಬೇಕಿತ್ತು. ನಾಟಕ ಮಾಡಿ, ಸುಳ್ಳು ಹೇಳಿ ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ಈ ಚುನಾವಣೆಯಲ್ಲಿ ನಾವು ಮೂವರು ಕುರುಬರಿಗೆ ಟಿಕೆಟ್ ಕೊಟ್ಟಿದ್ದೇವೆ. ನೀವ್ಯಾರಿಗೆ (ಬಿಜೆಪಿಯವರು) ಟಿಕೆಟ್ ಕೊಟ್ಟಿದ್ದೀರಿ. ನೀವು ಆಡಿದ್ದೇ ಆಟ ಅಂತ ಭಾವಿಸಿದ್ದೀರಾ? ಎಂದು ವಾಗ್ದಾಳಿ ನಡೆಸಿದರು.

ಸಿದ್ಧಾಂತದ ಮೇಲೆ ರಾಜಕಾರಣ ಮಾಡಬೇಕು. ಸ್ವಾರ್ಥಕ್ಕಾಗಿ ರಾಜಕಾರಣ ಮಾಡುವುದಲ್ಲ. ಜನರು ಪ್ರಭುಗಳೇ ಹೊರತು ಯಾರೋ ವ್ಯಕ್ತಿ ಅಲ್ಲ ಎಂದು ರಮೇಶಗೆ ತಿರುಗೇಟು ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ ಶಿವಕುಮಾರ್, ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ, ಎನ್.ಎ. ಹ್ಯಾರಿಸ್, ಮುಖಂಡರಾದ ಅಶೋಕ ಪಟ್ಟಣ, ವಿಶ್ವಾಸ ವೈದ್ಯ, ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ, ಪಕ್ಷದ ಗ್ರಾಮಾಂತರ ‌ಜಿಲ್ಲಾ ಘಟಕದ ಅಧ್ಯಕ್ಷ ‌ವಿನಯ ನಾವಲಗಟ್ಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು