ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಬಲವರ್ಧನೆಗೆ ಮಾ. 3ರಿಂದ ಪಾದಯಾತ್ರೆ: ಡಿ.ಕೆ. ಶಿವಕುಮಾರ್‌

Last Updated 25 ಫೆಬ್ರುವರಿ 2021, 20:02 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಘಟನೆಯ ಜತೆಗೆ ಬಲವರ್ಧನೆಗೆ ಒತ್ತು ನೀಡುವ ಉದ್ದೇಶದಿಂದ ಪಕ್ಷದ ಶಾಸಕರಿಲ್ಲದ 100 ಕ್ಷೇತ್ರಗಳಲ್ಲಿ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಮಾರ್ಚ್‌ 3ರಂದು ಈ ಕಾರ್ಯಕ್ರಮ ಆರಂಭಿಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಮಾರ್ಚ್ 1ರಂದು ದೇವಾಲಯ ಹಾಗೂ ದರ್ಗಾಕ್ಕೆ ಭೇಟಿ ಮಾಡಿ ಪೂಜೆ, ಪ್ರಾರ್ಥನೆ ಸಲ್ಲಿಸಿ, 3ರಂದು ಕಾಂಗ್ರೆಸ್ ಕಚೇರಿಯಿಂದ ಬೆಳಿಗ್ಗೆ 5 ಗಂಟೆಗೆ ಹೊರಟು ದೇವನಹಳ್ಳಿಯಲ್ಲಿ ಮೊದಲ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸಂಜೆ 3 ಗಂಟೆಗೆ ಚಿಕ್ಕಬಳ್ಳಾಪುರದಲ್ಲಿ ಕಾರ್ಯಕ್ರಮ ನಡೆಯಲಿದೆ’ ಎಂದರು.

‘ಪ್ರತಿ ಕ್ಷೇತ್ರದಲ್ಲೂ ಜನರ ಮಧ್ಯೆ ಈ ಕಾರ್ಯಕ್ರಮ ಮಾಡುತ್ತೇವೆ. ಬಿಜೆಪಿ ಸರ್ಕಾರದಿಂದ ಎಲ್ಲ ವರ್ಗದ ಜನರಿಗೆ ತೊಂದರೆಯಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆಯಾಗಿದೆ. ವರ್ತಕರು, ರೈತರು, ಕಾರ್ಮಿಕರು ಎಲ್ಲ ವರ್ಗಕ್ಕೂ ಅನ್ಯಾಯವಾಗುತ್ತಿದೆ. ಈ ವಿಚಾರವಾಗಿ ಜನರಲ್ಲಿ ಎಚ್ಚರಿಸಿ, ಅವರ ಧ್ವನಿಯನ್ನು ಕೇಂದ್ರ – ರಾಜ್ಯ ಸರ್ಕಾರಕ್ಕೆ ಮುಟ್ಟಿಸುತ್ತೇವೆ. ಎಲ್ಲ ನಗರಗಳ ಮುಖ್ಯರಸ್ತೆಯಲ್ಲಿ ಪಾದಯಾತ್ರೆ ಹಮ್ಮಿಕೊಳ್ಳುತ್ತೇವೆ’ ಎಂದರು.

‘ಅಧಿವೇಶನದಲ್ಲಿ ಭಾಗವಹಿಸಲು ತೊಂದರೆ ಆಗದಂತೆ ಪಕ್ಷದ ಕಾರ್ಯಾಧ್ಯಕ್ಷರಿಗೆ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ಜಿಲ್ಲಾಧ್ಯಕ್ಷರ ಜತೆ ಸೇರಿ ಅವರು ಕಾರ್ಯಕ್ರಮದ ಸಿದ್ಥತೆ ನಡೆಸುತ್ತಾರೆ’ ಎಂದರು.

ಕಾಂಗ್ರೆಸ್‌ಗೆ ಪ್ರಸನ್ನಕುಮಾರ್: ‘ಪುಲಕೇಶಿನಗರದ ಕ್ಷೇತ್ರದ ಮಾಜಿ ಶಾಸಕ ಪ್ರಸನ್ನಕುಮಾರ್ ಅವರನ್ನು ಪಕ್ಷದ ಎಲ್ಲ ನಾಯಕರ ಒಪ್ಪಿಗೆ ಮೇರೆಗೆ ಪಕ್ಷಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ಶಿವಕುಮಾರ್‌ ಹೇಳಿದರು.

‘ಡಿ.ಜೆ ಹಳ್ಳಿ ಘಟನೆಯಲ್ಲಿ ಮಾಜಿ ಮೇಯರ್‌ ಸಂಪತ್ ರಾಜ್ ಭಾಗಿಯಾಗಿಲ್ಲ. ಬಿಜೆಪಿ ಸರ್ಕಾರ ಕಾಂಗ್ರೆಸ್ ಮೇಲೆ ಆರೋಪ ಮಾಡಲು ಈ ರೀತಿ ಹೇಳುತ್ತಿದೆ. ಈ ಘಟನೆಯಲ್ಲಿ ಯಾವುದೇ ಕಾಂಗ್ರೆಸ್ ನಾಯಕರು ಭಾಗಿಯಾಗಿಲ್ಲ. ಅಖಂಡ ಶ್ರೀನಿವಾಸಮೂರ್ತಿ ಅವರು ವೈಯಕ್ತಿಕ ವಿಚಾರವಾಗಿ ಮಾತನಾಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT