ಮಂಗಳವಾರ, ಸೆಪ್ಟೆಂಬರ್ 28, 2021
21 °C
ಖಾಸಗಿ ಆಸ್ಪತ್ರೆಗಳ ಮೂಲಕ ಕಾರ್ಮಿಕರಿಗೆ ಲಸಿಕೆ ಹಾಕಿಸಲು ಕಾರ್ಯಾದೇಶ

ಕೋವಿಡ್ ಲಸಿಕೆ ಕೊಡಿಸುವ ನೆಪದಲ್ಲಿ ಕಾರ್ಮಿಕ ನಿಧಿಯ ₹700 ಕೋಟಿ ವ್ಯಯ?

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕೆ ಮೀಸಲಿಟ್ಟಿರುವ ಕಾರ್ಮಿಕ ಕಲ್ಯಾಣ ನಿಧಿ ಮೇಲೆ ಸದಾ ಕಣ್ಣಿಟ್ಟಿರುವ ಕಾರ್ಮಿಕ ಇಲಾಖೆ, ಕೋವಿಡ್ ಲಸಿಕೆ ಕೊಡಿಸುವ ನೆಪದಲ್ಲಿ ₹700 ಕೋಟಿಯಷ್ಟು ಮೊತ್ತ ಕರಗಿಸಲು ಮುಂದಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲೇ ಉಚಿತವಾಗಿ ಲಸಿಕೆ ದೊರೆಯುತ್ತಿದ್ದರೂ, ಕಲ್ಯಾಣ ನಿಧಿಯ ಹಣ ಕೊಟ್ಟು ಖಾಸಗಿ ಆಸ್ಪತ್ರೆಗಳ ಮೂಲಕ ಲಸಿಕಾ ಅಭಿಯಾನ ನಡೆಸಲು ಕಾರ್ಮಿಕ ಇಲಾಖೆ ಈಗಾಗಲೇ ಕಾರ್ಯಾದೇಶವನ್ನೂ ನೀಡಿದೆ.

2006–07ರಿಂದ ಈವರೆಗೆ ಕಟ್ಟಡಗಳ ಮಾಲೀಕರಿಂದ ಸೆಸ್‌ (ಕರ) ರೂಪದಲ್ಲಿ ಸಂಗ್ರಹವಾದ ನಿಧಿಯಲ್ಲಿ ಸದ್ಯ ₹10 ಸಾವಿರ ಕೋಟಿಯಷ್ಟು ಹಣವಿದೆ. ಆ ಹಣವನ್ನು, ಸದಾ ಅಪಾಯದ ಮಧ್ಯೆಯೇ ದುಡಿಯುವ ಕಾರ್ಮಿಕರ ಕಲ್ಯಾಣಕ್ಕೆ ಬಳಸಬೇಕಿದೆ. ವಸತಿ, ಆರೋಗ್ಯ, ಶಿಕ್ಷಣ ಹಾಗೂ ಸೌಲಭ್ಯ ಕಲ್ಪಿಸಲು ಬಳಸಬೇಕಾದ ಕಾರ್ಮಿಕ ಇಲಾಖೆ, ಲಸಿಕೆ ಹೆಸರಿನಲ್ಲಿ ಅನಗತ್ಯವಾಗಿ ಖರ್ಚು ಮಾಡಲು ಯೋಜನೆ ರೂಪಿಸಿದೆ ಎಂದು ಕಾರ್ಮಿಕ ಸಂಘಟನೆಗಳೇ ಆಕ್ಷೇಪ ವ್ಯಕ್ತಪಡಿಸಿವೆ.

30 ಲಕ್ಷ ನೋಂದಾಯಿತ ಕಾರ್ಮಿಕರು ಸೇರಿ ರಾಜ್ಯದಲ್ಲಿ ಒಟ್ಟು 50 ಲಕ್ಷದಷ್ಟು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿದ್ದಾರೆ. ಎಲ್ಲರಿಗೂ ಕೆಲಸದ ಸ್ಥಳ, ನಿಗದಿತ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲು ವಿಶೇಷ ಅಭಿಯಾನ ಆಯೋಜಿಸಲು ಯೋಜನೆ ರೂಪಿಸಿದೆ. ಮಂಡಳಿಯಲ್ಲಿ ನೋಂದಣಿ ಆಗದಿದ್ದರೂ ವಲಸೆ ಕಾರ್ಮಿಕರು ಸೇರಿ ಎಲ್ಲರಿಗೂ ಕೆಲಸದ ಸ್ಥಳದಲ್ಲೇ ಲಸಿಕೆ ನೀಡಲು ಕಾರ್ಯಾದೇಶದಲ್ಲಿ ಸೂಚಿಸಲಾಗಿದೆ.

ಈ ಕಾರ್ಯಕ್ಕೆ ಕಾರ್ಮಿಕ ನಿಧಿಯಲ್ಲಿನ ಹಣವನ್ನು ಬಳಸಿಕೊಳ್ಳಲು ಸರ್ಕಾರದಿಂದ ಅನುಮತಿಯನ್ನೂ ಪಡೆಯಲಾಗಿದೆ. ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ 2 ಲಕ್ಷ ಡೋಸ್ ಲಸಿಕೆ ಕೊಡಿಸಲು ₹15.‌60 ಕೋಟಿ ನಿಗದಿ ಮಾಡಿ ಕಾರ್ಯಾದೇಶ ಹೊರಡಿಸಲಾಗಿದೆ.

ಇದರ ಭಾಗವಾಗಿ ಖಾಸಗಿ ಸಹಭಾಗಿತ್ವದಲ್ಲಿ ಸೆ.2ರಂದು ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಹಂತದ ರನ್‌ ವೇ ನಿರ್ಮಾಣ ಕಾಮಗಾರಿ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಲಸಿಕೆ ನೀಡಲಾಗಿದೆ. ಇದಕ್ಕೆ ಕಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

‘ರಾಜ್ಯದಲ್ಲಿನ ಎಲ್ಲ ಕಾರ್ಮಿಕರಿಗೆ ಎರಡು ಡೋಸ್ ಲಸಿಕೆ ನೀಡಲು ಕನಿಷ್ಠ ₹700 ಕೋಟಿ ವೆಚ್ಚವಾಗಲಿದೆ. ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಕಾರ್ಮಿಕರ ನಿಧಿ ದೋಚಲು ಸರ್ಕಾರ ಮುಂದಾಗಿದೆ’ ಎಂದು ಕಾರ್ಮಿಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಎಲ್ಲರಿಗೂ ಖಚಿತ ಮತ್ತು ಉಚಿತ ಲಸಿಕೆ ನೀಡಲಾಗುವುದು ಎಂದು ಸರ್ಕಾರ ಹೇಳುತ್ತಿದೆ. ಆದರೆ, ನಿರ್ಮಾಣ ಕಾರ್ಮಿಕರಿಗೆ ಖಾಸಗಿ ಆಸ್ಪತ್ರೆಗಳ ಮೂಲಕ ಹಣ ಕೊಟ್ಟು ಲಸಿಕೆ ಕೊಡಿಸುವುದು ಎಷ್ಟು ಸರಿ’ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ಪ್ರಶ್ನಿಸಿದರು.

‘ಕಾರ್ಮಿಕರಿಗೆ ಲಸಿಕೆ ಹಾಕಿಸಲು ನಮ್ಮ ವಿರೋಧ ಇಲ್ಲ. ಸರ್ಕಾರಿ ಆಸ್ಪತ್ರೆಗಳ ಮೂಲಕ ಅಭಿಯಾನ ನಡೆಸಬೇಕು. ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಬೇಕಾದ ಕಾರ್ಮಿಕ ನಿಧಿಯನ್ನು ಲಸಿಕೆಗೆ ವಿನಿಯೋಗಿಸಬಾರದು’ ಎಂದು ಒತ್ತಾಯಿಸಿದರು.

‘ಬೇರೆಲ್ಲಾ ವರ್ಗದ ನೌಕರರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಯಿತು. ಕಟ್ಟಡ ಕಾರ್ಮಿಕರಿಗೆ ಮಾತ್ರ ಅವರ ನಿಧಿಯ ಹಣ ಕೊಡಿ ಎಂದು ಕೇಳುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

ವಿನಿಯೋಗಿಸುತ್ತಿರುವುದು ಸಣ್ಣ ಮೊತ್ತ: ಹೆಬ್ಬಾರ್

‘ಖಾಸಗಿ ಆಸ್ಪತ್ರೆಗಳ ಮೂಲಕ ಕಾರ್ಮಿಕರಿಗೆ ಲಸಿಕೆ ಕೊಡಿಸಲು ವಿನಿಯೋಗಿಸುತ್ತಿರುವುದು ಸಣ್ಣ ಮೊತ್ತ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸ್ಪಷ್ಟಪಡಿಸಿದರು.

‘ಸರ್ಕಾರಿ ಕೋಟಾದಲ್ಲಿ 1.5 ಲಕ್ಷ ಕಾರ್ಮಿಕರಷ್ಟೇ ಲಸಿಕೆ ಪಡೆದಿದ್ದಾರೆ. ಸರ್ಕಾರಿ ಕೋಟಾದಲ್ಲೇ ಎಲ್ಲರಿಗೂ ಲಸಿಕೆ ನೀಡುವುದು ತಡವಾಗಬಹುದು. ಕಾರ್ಮಿಕರಿಗೆ ಲಸಿಕೆ ಕೊಡಿಸಲು ಕಾರ್ಮಿಕ ಇಲಾಖೆ ಮುಂದಾಗಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇಳಿವೆ’ ಎಂದರು.

‘ಸರ್ಕಾರಿ ಕೋಟಾಕ್ಕೆ ಹೆಚ್ಚಿನ ಲಸಿಕೆ ಲಭ್ಯವಾದರೆ, ಖಾಸಗಿ ಆಸ್ಪತ್ರೆಯಿಂದ ಲಸಿಕೆ ಪಡೆಯುವುದನ್ನು ಕ್ರಮೇಣ ಕಡಿಮೆ ಮಾಡುತ್ತೇವೆ’ ಎಂದು ಹೇಳಿದರು.

* ಖಾಸಗಿ ಆಸ್ಪತ್ರೆಗಳ ಮೂಲಕ ಕಾರ್ಮಿಕರಿಗೆ ಲಸಿಕೆ ಕೊಡಿಸಲು ಮುಖ್ಯ ಕಾರ್ಯದರ್ಶಿ ಅವರಿಂದ ನಿರ್ದೇಶನ ಬಂದಿತ್ತು. ಈಗ ಸರ್ಕಾರದಿಂದಲೇ ಉಚಿತವಾಗಿ ಕೊಡುವುದಾಗಿ ತಿಳಿಸಿದ್ದಾರೆ. ಇನ್ನೂ ಅಭಿಯಾನ ಆರಂಭವಾಗಿಲ್ಲ.

-ಅಕ್ರಂ ಪಾಷಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ

* ಕಾರ್ಮಿಕರಿಗೆ ಲಸಿಕೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಕಾರ್ಮಿಕ ಇಲಾಖೆ ಕಾರ್ಯಾದೇಶ ನೀಡಿದೆ. ಈಗ ಬೇರೆ ರೀತಿಯ ಮಾಹಿತಿ ಸಿಗುತ್ತಿದೆ. ಕಾರ್ಮಿಕ ಇಲಾಖೆ ಯಾವ ರೀತಿ ಮುಂದುವರಿಯಲಿದೆ ಎಂದು ಕಾಯುತ್ತಿದ್ದೇವೆ.

-ಎಚ್.ಎಂ.ಪ್ರಸನ್ನ, ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂ ಅಸೋಸಿಯೇಷನ್(ಫನಾ) ಅಧ್ಯಕ್ಷ
 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು