ಮಂಗಳವಾರ, ಏಪ್ರಿಲ್ 20, 2021
26 °C

ರೂಪಾಂತರ ವೈರಾಣು ಬೆಂಗಳೂರಿನಲ್ಲೇ ಹೆಚ್ಚು! ಐಐಎಸ್‌ಸಿ ನಡೆಸಿದ ಅಧ್ಯಯನದಲ್ಲಿ ಪತ್ತೆ

ಅಖಿಲ್‌ ಕಡಿದಾಳ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ವೈರಾಣುವಿನ ರೂಪಾಂತರ ಪ್ರಮಾಣ ಬೆಂಗಳೂರು ನಗರದಲ್ಲಿ ಅತ್ಯಧಿಕ ಮಟ್ಟದಲ್ಲಿದೆ ಎಂಬುದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಂಶೋಧಕರ ತಂಡ ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ.

ಐಐಎಸ್‌ಸಿ ಜೀವ ರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಉತ್ಪಲ್‌ ತಾತು ನೇತೃತ್ವದ ಸಂಶೋಧಕರ ತಂಡವು, ಕೋವಿಡ್‌ ಸೋಂಕು ದೃಢಪಟ್ಟ ವ್ಯಕ್ತಿಗಳ ಮೂಗಿನಿಂದ ಸಂಗ್ರಹಿಸಿದ ದ್ರವದ ಪ್ರತಿ ಮಾದರಿಯಲ್ಲಿ ಕೊರೊನಾ ವೈರಸ್‌ನ 11 ರೂಪಾಂತರಗಳು ಪತ್ತೆಯಾಗಿವೆ. ಜಾಗತಿಕ ಮಟ್ಟದಲ್ಲಿ ಈ ದರ ಶೇಕಡ 7.3ರಷ್ಟಿದ್ದರೆ, ರಾಷ್ಟ್ರೀಯ ಮಟ್ಟದಲ್ಲಿ ಶೇ 8.4ರಷ್ಟಿದೆ ಬೆಂಗಳೂರಿನಲ್ಲಿ ಕಂಡುಬಂದಿರುವ ಕೊರೊನಾ ವೈರಾಣು ರೂಪಾಂತರದ ದರ ಜಗತ್ತಿನಲ್ಲೇ ಅತ್ಯಧಿಕವಾಗಿದೆ ಎಂದು ಈ ಅಧ್ಯಯನ ಹೇಳಿದೆ.

‘ಕಳೆದ ವರ್ಷವೇ ಈ ಅಧ್ಯಯನ ನಡೆಸಲಾಗಿತ್ತು. ಆದ್ದರಿಂದ, ಕೊರೊನಾ ರೂಪಾಂತರದ ದರದಲ್ಲಿ ಬದಲಾವಣೆ ಇರಬಹುದು. ಈ ಅಧ್ಯಯನ ವರದಿ ಫೆಬ್ರುವರಿಯಲ್ಲಿ ‘ಪ್ರೊಟಿಯೋಮ್‌ ರೀಸರ್ಚ್‌’ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. 2020ರ ನವೆಂಬರ್‌ನಿಂದಲೂ ಈ ವರದಿ ಅಂತಿಮ ಹಂತದ ಪರಿಶೀಲನೆಗೆ ಬಾಕಿ ಇತ್ತು’ ಎಂದು ಪ್ರೊ. ಉತ್ಪಲ್‌ ಹೇಳುತ್ತಾರೆ.

‘ಬೆಂಗಳೂರಿನಲ್ಲಿ ಸೋಂಕಿತರಾದ ಹೆಚ್ಚು ಜನರಲ್ಲಿ ಕೊರೊನಾ ವೈರಾಣುವಿನ ರೂಪಾಂತರವಾಗಿರುವ D614G ಹೆಸರಿನ ವೈರಸ್‌ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಈಗ D614G ಸಾಮಾನ್ಯ ಎಂಬಂತಾಗಿದೆ. ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಾಣು ರೂಪಾಂತರವು ಕೋವಿಡ್‌ ಲಸಿಕೆಗಳ ಸಾಮರ್ಥ್ಯ ಕುಗ್ಗಿಸಲಿವೆಯೆ? ಅಥವಾ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಏರಿಕೆಗೆ ಕಾರಣವಾಗಲಿದೆಯೆ? ಎಂಬುದು ಇನ್ನಷ್ಟೇ ತಿಳಿಯಬೇಕಿದೆ’ ಎಂದರು.

ಇನ್‌ಸ್ಟಿಟ್ಯೂಟ್‌ ಆಫ್‌ ಜೆನೋಮಿಕ್ಸ್‌ ಅಂಡ್‌ ಇಂಟಿಗ್ರೇಟಿವ್‌ ಬಯಾಲಜಿ (ಸಿಎಸ್‌ಐಆರ್‌– ಐಜಿಐಬಿ) ಪ್ರಕಟಿಸಿರುವ ಮತ್ತೊಂದು ಸಂಶೋಧನಾ ಪ್ರಬಂಧದ ಪ್ರಕಾರ, ‘ವೈರಾಣುಗಳನ್ನು ಕೊಲ್ಲುವ ಶಕ್ತಿಯುಳ್ಳ ಪ್ರತಿಕಾಯಗಳಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯವುಳ್ಳ ಕೊರೊನಾ ವೈರಾಣು ರೂಪಾಂತರಗಳು ಹೆಚ್ಚುತ್ತಿವೆ. ಇಂತಹ 146 ಬಗೆಯೆ ‘ಎಸ್ಕೇಪ್‌ ರೂಪಾಂತರಿ’ ಕೊರೊನಾ ವೈರಾಣುಗಳ ಕುರಿತು ಇತ್ತೀಚೆಗೆ ಅಧ್ಯಯನ ನಡೆಸಲಾಗಿದೆ’.

‘ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ N440K ಹೆಸರಿನ ‘ಎಸ್ಕೇಪ್‌’ ರೂಪಾಂತರಿ ಕೊರೊನಾ ವೈರಾಣು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದೆ. ಇದು ಅತ್ಯಂತ ಕಳವಳಕ್ಕೆ ಎಡೆಮಾಡಿದೆ’ ಎನ್ನುತ್ತಾರೆ ಸಿಎಸ್‌ಐಆರ್‌– ಐಜಿಐಬಿ ಸಹ ಪ್ರಾಧ್ಯಾಪಕ ಪ್ರೊ. ವಿನೋದ್‌ ಸ್ಕಾರಿಯಾ.

ಉತ್ತಮ ಪರೀಕ್ಷಾ ವ್ಯವಸ್ಥೆ ಅಗತ್ಯ

ಕೊರೊನಾ ವೈರಾಣುವಿನ ರೂಪಾಂತರದ ವೇಗವನ್ನು ಗಮನಿಸಿದರೆ ಇನ್ನೂ ಅತ್ಯುತ್ತಮವಾದ ಪರೀಕ್ಷಾ ವ್ಯವಸ್ಥೆಯ ಅಗತ್ಯವಿದೆ ಎಂಬುದು ಮನದಟ್ಟಾಗುತ್ತದೆ ಎಂಬುದು ಪ್ರೊ. ಉತ್ಪಲ್‌ ಮತ್ತು ಅವರ ತಂಡದ ಅಭಿಪ್ರಾಯ.

ಈ ತಂಡ ‘ಪ್ರೋಟಿಯೋ– ಜೆನೋಮಿಕ್‌’ ಪರೀಕ್ಷಾ ವಿಧಾನವನ್ನು ಅಧ್ಯಯನಕ್ಕೆ ಆಯ್ದುಕೊಂಡಿತ್ತು. ವಂಶವಾಹಿ ಆಧಾರಿತ ‘ನೆಕ್ಸ್ಟ್ ಜೆನರೇಷನ್‌ ಸೀಕ್ವೆನ್ಸಿಂಗ್‌’ (ಎನ್‌ಜಿಎಸ್‌) ವಿಧಾನದ ಮೂಲಕ ಈ ಅಧ್ಯಯನ ನಡೆದಿದೆ.

ಕೊರೊನಾ ವೈರಾಣುವಿಗೆ ಮನುಷ್ಯರ ದೇಹ ಹೇಗೆ ಪ್ರತಿಕ್ರಿಯಿಸಿದೆ ಎಂಬುದನ್ನೂ ಐಐಎಸ್‌ಸಿ ತಜ್ಞರ ತಂಡ ಅಧ್ಯಯನ ಮಾಡಿದೆ. ಪ್ರೋಟೀನ್‌ ಆಧಾರದಲ್ಲಿ ಈ ಅಧ್ಯಯನ ಮಾಡಲಾಗಿದೆ. ಕೋವಿಡ್‌ ಪೀಡಿತರಲ್ಲಿ 441 ಬಗೆಯ ವಿಭಿನ್ನ ಪ್ರೋಟೀನ್‌ಗಳು ಪತ್ತೆಯಾಗಿವೆ ಎಂದು ವರದಿ ಹೇಳಿದೆ.

‘ಕೋವಿಡ್‌–19ನಂತಹ ಸೋಂಕುಗಳ ವಿಚಾರದಲ್ಲಿ ಪ್ರೋಟೀನ್‌ ಆಧಾರಿತ ಅಧ್ಯಯನಗಳು ಹೆಚ್ಚು ಖಚಿತವಾದ ವರದಿ ನೀಡುತ್ತವೆ. ಆರ್‌ಎನ್‌ಎ ಮಾಲಿಕ್ಯೂಲ್‌ಗಳನ್ನು ಆಧರಿಸಿದ ಆರ್‌ಟಿ–ಪಿಸಿಆರ್‌ ವಿಧಾನಕ್ಕಿಂತಲೂ ನಿಖರ ವರದಿ ಪಡೆಯುವುದು ಸಾಧ್ಯವಿದೆ’ ಎನ್ನುತ್ತಾರೆ ಸಂಶೋಧನಾ ಪ್ರಬಂಧದ ಮೊದಲ ಲೇಖಕಿಯೂ ಆಗಿರುವ ಪಿಎಚ್‌.ಡಿ ವಿದ್ಯಾರ್ಥಿನಿ ಶೀತಲ್‌ ತುಶಿರ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು