ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಸಂಪನ್ಮೂಲ ಇಲಾಖೆ: ನೂರಾರು ಕೋಟಿ ಗುಳುಂ?

ಎಂಟು ಬೃಹತ್‌ ನೀರಾವರಿ ಕಾಮಗಾರಿಗಳ ಸಮಗ್ರ ತನಿಖೆಗೆ ಸತ್ಯಶೋಧನಾ ತಂಡ ರಚನೆ
Last Updated 16 ಡಿಸೆಂಬರ್ 2020, 19:53 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಜಲ ಸಂಪನ್ಮೂಲ ಇಲಾಖೆಯ ವಿವಿಧ ನೀರಾವರಿ ನಿಗಮಗಳಡಿ 2015 ರಿಂದ 2019ರ ಮಧ್ಯೆ ₹ 17,685.53 ಕೋಟಿ ವೆಚ್ಚದಲ್ಲಿ ಕೈಗೊಂಡ ಎಂಟು ಬೃಹತ್‌ ಕಾಮಗಾರಿಗಳಲ್ಲಿ ನೂರಾರು ಕೋಟಿ ಮೊತ್ತದ ಅಕ್ರಮ ನಡೆದಿದೆ ಎಂಬ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ. ತನಿಖಾ ವರದಿ ನೀಡಲು ಇಲಾಖೆಯ ನಿವೃತ್ತ ಕಾರ್ಯದರ್ಶಿ ಎಸ್‌.ಜೆ. ಚನ್ನಬಸಪ್ಪ ಮತ್ತು ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರಾಗಿದ್ದ ಎಂ.ಕೆ. ವೆಂಕಟರಾಮ್‌ ಅವರನ್ನೊಳಗೊಂಡ ಸತ್ಯಶೋಧನಾ ತಂಡವನ್ನು ರಾಜ್ಯ ಸರ್ಕಾರ ರಚಿಸಿದೆ.

ಈ ಕಾಮಗಾರಿಗಳಲ್ಲಿ ದೋಷಪೂರಿತ ಅಂದಾಜು ಮತ್ತು ನಿರ್ಮಾಣ ಹಂತದಲ್ಲಿ ನಿಯಮ ಪಾಲಿಸದೆ ಹೆಚ್ಚುವರಿ ಕಾಮಗಾರಿ ನಿರ್ವಹಿಸಲು ಅವಕಾಶ ನೀಡಿದ್ದರಿಂದ ಸರ್ಕಾರಕ್ಕೆ ಭಾರಿ ಮೊತ್ತದ ನಷ್ಟ ಉಂಟಾಗಿದೆ. ಇದಕ್ಕೆ ಕಾರಣರಾದ ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸಿ, ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ಸರ್ಕಾರ, ಸಮಗ್ರವಾಗಿ ಪರಿಶೀಲಿಸಿ ಮೂರು ತಿಂಗಳ ಒಳಗೆ ವರದಿ ನೀಡುವಂತೆ ತಂಡಕ್ಕೆ ಆದೇಶಿಸಿದೆ.

ಈ ಪೈಕಿ, ಕರ್ನಾಟಕ ನೀರಾವರಿ ನಿಗಮ (ಕೆಎನ್‌ಎನ್‌ಎಲ್‌) ಮತ್ತು ಕಾವೇರಿ ನೀರಾವರಿ ನಿಗಮದ (ಸಿಎನ್‌ಎನ್‌ಎಲ್‌) ತಲಾ ಮೂರು, ಕೃಷ್ಣಾ ಭಾಗ್ಯ ಜಲ ನಿಗಮ (ಕೆಬಿಜೆಎನ್ಎಲ್) ಮತ್ತು ವಿಶ್ವೇಶ್ವರಯ್ಯ ಜಲ ನಿಗಮ (ವಿಜೆಎನ್ಎಲ್‌) ತಲಾ ಒಂದು ಕಾಮಗಾರಿಯನ್ನು ಅನುಷ್ಠಾನಗೊಳಿಸಿದೆ. ಈ ಕಾಮಗಾರಿಗಳ ಗುತ್ತಿಗೆಯನ್ನು ಡಿ.ವೈ.ಉಪ್ಪಾರ್‌ ಸಹಭಾಗಿತ್ವದಲ್ಲಿ ‘ಅದು ಇನ್ರ್ಫಾ’ ಎಂಬ ಕಂಪನಿ ವಹಿಸಿಕೊಂಡಿದೆ. ಇದೀಗ, ಈ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ (ಡಬ್ಲ್ಯೂಆರ್‌ಡಿಒ) ಮುಖ್ಯ ಎಂಜಿನಿಯರ್‌ಗೆ ಪತ್ರ ಬರೆದಿರುವ ಸತ್ಯಶೋಧನ ತಂಡ, ಆರೋಪಗಳಿಗೆ ಸಂಬಂಧಿಸಿದಂತೆ ಸಮರ್ಪಕ ಮಾಹಿತಿಗಳ ಸಹಿತ ಹತ್ತು ದಿನಗಳ ಒಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ.‌

‘ನೈಜ ದರಕ್ಕಿಂತ ಹೆಚ್ಚಿನ ಮೊತ್ತ ದಾಖಲಿಸಿ ಆಡಳಿತಾತ್ಮಕ ಅನುಮೋದನೆ ಪಡೆದು ಬಳಿಕ, ಯಾವುದೇ ಆಧಾರ ಇಲ್ಲದೆ ಈ ಕಾಮಗಾರಿಗಳ ಟೆಂಡರ್‌ ಮೊತ್ತವನ್ನು ಹೆಚ್ಚಿಸಿ ಪರಿಷ್ಕರಿಸಲಾಗಿದೆ. ಆ ಮೂಲಕ, ಹೆಚ್ಚಿನ ಮೊತ್ತಕ್ಕೆ ಕಾಮಗಾರಿ ಪೂರ್ಣಗೊಳಿಸಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆರ್ಥಿಕ ಹೊರೆ ಉಂಟಾಗಿದೆ. ಕಾಮಗಾರಿಗಳಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವ ಅನುಮಾನವಿದ್ದು, ಈ ಅಕ್ರಮಗಳಲ್ಲಿ ಸಂಬಂಧಪಟ್ಟ ನಿಗಮಗಳ ಹಲವು ಅಧಿಕಾರಿಗಳೂ ಶಾಮೀಲಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ಕತ್ರಿಗುಪ್ಪೆಯ ಚಂದ್ರಶೇಖರ್‌ ಎಂಬುವರು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರಿಗೆ ದಾಖಲೆಗಳ ಸಮೇತ ದೂರು ನೀಡಿದ್ದರು.

ನಕಲಿ ದರ ಪಟ್ಟಿ, ಬೋಗಸ್‌ ದಾಖಲೆ!: ‘ಈ ಬೃಹತ್‌ ಕಾಮಗಾರಿಗಳಿಗೆ ಅಗತ್ಯವಿರುವ ಸಾಮಗ್ರಿಗಳ ನಕಲಿ ದರ ಪಟ್ಟಿಗಳನ್ನು ಖುದ್ದು ತಯಾರಿಸಿ, ನೈಜ ದರಕ್ಕಿಂತ ಹೆಚ್ಚುವರಿ ದರಗಳನ್ನು ಗುತ್ತಿಗೆದಾರರೇ ನಮೂದಿಸಿದ್ದಾರೆ. ಈ ನಕಲಿ ದರ ಪಟ್ಟಿಯನ್ನು ಆಧಾರವಾಗಿಟ್ಟು ಅಂದಾಜು ಪಟ್ಟಿ ತಯಾರಿಸಿ ಟೆಂಡರ್‌ನಲ್ಲಿ ಭಾಗಿಯಾಗಿದ್ದಾರೆ. ಬೋಗಸ್‌ ದಾಖಲೆ ತಯಾರಿಸಿ ಟೆಂಡರ್‌ನಲ್ಲಿ ಭಾಗಿಯಾಗಲು ಗುತ್ತಿಗೆದಾರರಿಗೆ ಕೆಲವು ಅಧಿಕಾರಿಗಳೂ ಸಾಥ್ ನೀಡಿದ್ದಾರೆ. ಕಾಮಗಾರಿಗಳಿಗೆ ತರಾತುರಿಯಲ್ಲಿ ಅಲ್ಪಾವಧಿ ಟೆಂಡರ್‌ ಆಹ್ವಾನಿಸಲಾಗುತ್ತದೆ. ಬಳಿಕ, ಯಾವುದೇ ಆಧಾರ ಇಲ್ಲದೆ ಮೊತ್ತವನ್ನು ಪರಿಷ್ಕರಿಸಿ ಟೆಂಡರ್‌ ಕರೆಯಲಾಗುತ್ತದೆ. ಆ ಮೂಲಕ, ಭಾರಿ ಅವ್ಯವಹಾರ ನಡೆಸಲಾಗಿದೆ’ ಎಂದೂ ಮುಖ್ಯ ಕಾರ್ಯದರ್ಶಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT