ಶುಕ್ರವಾರ, ಮೇ 7, 2021
21 °C

ಕೊರೊನಾ ಸಾಂತ್ವನ: ‘ಕೋವಿಡ್- ಸಾಮಾಜಿಕ ಜವಾಬ್ದಾರಿ ಮರೆತರೆ ಅಪಾಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಧುಮೇಹ, ಅಧಿಕ ರಕ್ತದೊತ್ತಡದಂತಹ ಕಾಯಿಲೆಯು ವ್ಯಕ್ತಿಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ, ಕೋವಿಡ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಹಾಗಾಗಿ, ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು. ಕೋವಿಡ್‌ ಬಗ್ಗೆ ಭಯ ಪಡುವ ಬದಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. 

ರೂಪಾಂತರಗೊಂಡ ಕೊರೊನಾ ವೈರಾಣು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಆದರೆ, ಅದರ ತೀವ್ರತೆ ಮೊದಲಿನಷ್ಟೇ ಇರಲಿದೆ. ಜನರು ಎಚ್ಚೆತ್ತುಕೊಂಡರೆ ಮುಂಬರುವ ಮೇ ಅಂತ್ಯಕ್ಕೆ ಪ್ರಕರಣಗಳು ಕಡಿಮೆಯಾಗಲಿವೆ. ಯಾವುದೇ ಸಾಂಕ್ರಾಮಿಕ ಕಾಯಿಲೆ ಎರಡು ವರ್ಷಗಳು ಮಾತ್ರ ಇರುತ್ತದೆ.

40 ವರ್ಷದ ವೈದ್ಯ ವೃತ್ತಿಯ ಅನುಭವದಲ್ಲಿ ಈ ರೀತಿ ಕಾಯಿಲೆಯನ್ನು ಮೊದಲ ಬಾರಿ ನೋಡುತ್ತಿದ್ದೇನೆ. 1959ರಲ್ಲಿ ಸ್ಪ್ಯಾನಿಶ್ ಫ್ಲೂ ಎಂಬ ಕಾಯಿಲೆ ಕಾಣಿಸಿಕೊಂಡಿತ್ತು. ಆ ಕಾಯಿಲೆಯು ಎರಡನೇ ಅಲೆಯ ಅವಧಿಯಲ್ಲಿ ಹೆಚ್ಚಿನ ಅಪಾಯ ಉಂಟುಮಾಡಿತ್ತು. ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯ ನಡುವೆ ಅಂತಹ ವ್ಯತ್ಯಾಸವಿಲ್ಲ. ವೈರಾಣುಗಳು ಯಾವಾಗಲೂ ರೂಪಾಂತರವಾಗುತ್ತವೆ. ಸೋಂಕಿತ ವ್ಯಕ್ತಿ ಕೆಮ್ಮಿದಾಗ ಮತ್ತು ಸೀನಿದಾಗ ಹೊರಹೊಮ್ಮುವ ತುಂತುರು ಹನಿಗಳಿಂದ ವೈರಾಣು ಮತ್ತೊಬ್ಬರ ದೇಹ ಸೇರುವ ಸಾಧ್ಯತೆ ಇರುತ್ತದೆ. ಹಾಗಾಗಿಯೇ, ಮುಖಗವಸು ಧರಿಸಲು ಹಾಗೂ ಪರಸ್ಪರ ಮೂರು ಅಡಿ ಅಂತರ ಕಾಯ್ದುಕೊಳ್ಳಲು ಸಾರಿ ಸಾರಿ ಹೇಳಲಾಗುತ್ತಿದೆ.

ಸೋಂಕು ನಿವಾರಕ ದ್ರಾವಣದಿಂದ ಆಗಾಗ ಕೈಗಳನ್ನು ಸ್ವಚ್ಛಪಡಿಸಿಕೊಳ್ಳಬೇಕು. ಮನೆಗೆ ಬಂದ ಬಳಿಕ ಕೈಗಳನ್ನು ಸೋಪು ನೀರಿನಿಂದ ತೊಳೆದುಕೊಳ್ಳಬೇಕು. ಮೊದಲನೆ ಅಲೆ ಬಂದಾಗ ಲಸಿಕೆ ಇರಲಿಲ್ಲ. ಆದರೆ, ಈಗ ನಮ್ಮ ಬಳಿ ಲಸಿಕೆ ಇದೆ. ಹಾಗಾಗಿ, ಫಲಾನುಭವಿಗಳು ಆದಷ್ಟು ಬೇಗ ಲಸಿಕೆಯನ್ನು ಪಡೆದುಕೊಳ್ಳಬೇಕು. ಸದ್ಯ ನೀಡಲಾಗುತ್ತಿರುವ ಲಸಿಕೆ ಸುರಕ್ಷಿತವಾಗಿವೆ.

ಕಳೆದ ವರ್ಷ ಕೋವಿಡ್ ಏರಿಕೆ ಕಂಡ ಬಳಿಕ ಮುದುವೆ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ಜನರು ನಿರ್ಬಂಧಗಳನ್ನು ಪಾಲಿಸಿದರು. ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡ ಬಳಿಕ ನಿರ್ಲಕ್ಷ್ಯ ತೋರಿ, ನಿಯಮಗಳನ್ನು ಗಾಳಿಗೆ ತೂರಿದರು. ಅದರ ಪರಿಣಾಮವನ್ನು ಈಗ ನಾವು ಕಾಣುತ್ತಿದ್ದೇವೆ.

ಪೊಲೀಸರು ದಂಡ ಹಾಕುತ್ತಾರೆ ಎಂಬ ಕಾರಣಕ್ಕೆ ಕೆಲವರು ಮುಖಗವಸು ಧರಿಸುತ್ತಾರೆ. ಕೋವಿಡ್‌ ಎಂಬುದು ಇಲ್ಲವೇ ಇಲ್ಲ. ಅದನ್ನು ಸೃಷ್ಟಿಸಲಾಗಿದೆ ಎನ್ನುವವರೂ ನಮ್ಮಲ್ಲಿ ಇದ್ದಾರೆ. ಇಂತಹ ಮನೋಭಾವದಿಂದಲೇ ಸಮಸ್ಯೆಯನ್ನು ನಾವು ತಂದೊಡ್ಡಿಕೊಂಡಿದ್ದೇವೆ. ವಿಜ್ಞಾನದಲ್ಲಿ ಅಡ್ಡದಾರಿಯಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು.

- ಡಾ.ಟಿ.ಎಚ್. ಆಂಜನಪ್ಪ, ಹಿರಿಯ ಶಸ್ತ್ರಚಿಕಿತ್ಸ ತಜ್ಞ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು