ಸೋಮವಾರ, ಅಕ್ಟೋಬರ್ 18, 2021
22 °C
ವಹಿವಾಟು ಶೇಕಡ 75ರಷ್ಟು ಇಳಿಕೆ l ದಿನದ ಖರ್ಚಿಗೆ ಹಣ ಸಿಕ್ಕರೆ ಸಾಕು ಎಂದು ಕೆಲಸ‌ ಮಾಡುತ್ತಿರುವ ಕಾರ್ಮಿಕರು

ಕುಸಿದುಬಿದ್ದ ನಿರ್ಮಾಣ ಕಾರ್ಮಿಕರ ಬದುಕು

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಟ್ಟಡಗಳ ಸೆಂಟ್ರಿಂಗ್ ಕೆಲಸದಲ್ಲಿ ತೊಡಗಿರುವ ಉಡುಪಿ ಜಿಲ್ಲೆಯ ರವಿ (ಹೆಸರು ಬದಲಾಯಿಸಲಾಗಿದೆ) ಅವರಿಗೆ ಲಾಕ್‌ಡೌನ್‌ ಶುರುವಾಗುವವರೆಗೆ ವೃತ್ತಿಯಲ್ಲಿ ದೊಡ್ಡ ಸಮಸ್ಯೆಗಳೇನೂ ಇರಲಿಲ್ಲ. ಆದರೆ ಕೋವಿಡ್ ಹರಡುವುದನ್ನು ತಡೆಯಲು ಜಾರಿಗೆ ತಂದ ಲಾಕ್‌ಡೌನ್‌ ಕ್ರಮದ ಪರಿಣಾಮವಾಗಿ ಇವರ ಆದಾಯದಲ್ಲಿ ಶೇಕಡ 60ರಷ್ಟು ಇಳಿಕೆ ಆಗಿದೆ.

‘2020ರಲ್ಲಿ ಜಾರಿಯಾದ ಮೊದಲ ಲಾಕ್‌ಡೌನ್‌ ಪೂರ್ವದಲ್ಲಿ ನನ್ನ ಜೊತೆ 12 ಜನ ಕೆಲಸ ಮಾಡುತ್ತಿದ್ದರು. ನಂತರ ಅವರ ಸಂಖ್ಯೆ ಒಂಬತ್ತಕ್ಕೆ ಇಳಿಯಿತು. ಎರಡನೇ ಲಾಕ್‌ಡೌನ್‌ ನಂತರ ನಾಲ್ಕು ಜನ ಮಾತ್ರ ಇದ್ದಾರೆ. ಮೊದಲು ನಾವು ವರ್ಷಕ್ಕೆ 10–12 ಮನೆಗಳ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದೆವು. ಈಗ ನಾಲ್ಕು ಸಿಕ್ಕಿದರೆ ಹೆಚ್ಚು’ ಎಂದು ರವಿ ಹೇಳುತ್ತಾರೆ.

ಅವರ ಮಾತುಗಳು, ಕಟ್ಟಡ ನಿರ್ಮಾಣ ಕೆಲಸಗಾರರ ಬದುಕು ಲಾಕ್‌ಡೌನ್‌ ಪರಿಣಾಮವಾಗಿ ಕಂಡಿರುವ ಬದಲಾವಣೆಗಳನ್ನು ಹೇಳುತ್ತಿವೆ. ಜನರಲ್ಲಿ ಹಣದ ಹರಿವು ಕಡಿಮೆಯಾಗಿದೆ. ಹಾಗಾಗಿ ಅವರು ಕಟ್ಟಡ ನಿರ್ಮಾಣ ಕೆಲಸಕ್ಕೆ ಮೊದಲಿನ ರೀತಿಯಲ್ಲಿ ಮುಂದಾಗುತ್ತಿಲ್ಲ. ಇದರಿಂದಾಗಿ ನಿರ್ಮಾಣ ಕೆಲಸಗಳನ್ನು ನೆಚ್ಚಿಕೊಂಡಿದ್ದವರ ಕಿಸೆಗೆ ಹಣ ಬರುತ್ತಿಲ್ಲ ಎಂದು ಈ ಕೆಲಸದಲ್ಲಿ ವರ್ಷಗಳಿಂದ ತೊಡಗಿಸಿಕೊಂಡವರು ವಿವರಿಸುತ್ತಾರೆ.

‘ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ನಮ್ಮ ಕಡೆ ಹೊಸದೊಂದು ಪ್ರವೃತ್ತಿ ಶುರುವಾಗಿದೆ. ಅವತ್ತಿನ ಖರ್ಚಿಗೆ ಹಣ ಸಿಕ್ಕರೆ ಸಾಕು ಎಂಬ ಪರಿಸ್ಥಿತಿ ಕೆಲವರಿಗೆ ಇದೆ. ಹಾಗಾಗಿ ಅವರು ಕಡಿಮೆ ಹಣಕ್ಕೆ ಕೆಲಸ ಮಾಡಿಕೊಡಲು ಶುರು ಮಾಡಿದ್ದಾರೆ. ನಾವು ಅವರಷ್ಟು ಕಡಿಮೆ ಶುಲ್ಕಕ್ಕೆ ಕೆಲಸ ಮಾಡಲು ಆಗದು, ನಮ್ಮ ಖರ್ಚುಗಳು ಹಲವು ಇವೆ. ಈಗ ಎದುರಾಗಿರುವ ಪರಿಸ್ಥಿತಿ ಸರಿಹೋಗಲು ಹತ್ತು ವರ್ಷವಾದರೂ ಬೇಕಾದೀತು. ಈಗ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಕೆಲವರ ದುಡಿಮೆಯ ಆಯಸ್ಸೇ ಅಷ್ಟೊತ್ತಿಗೆ ಮುಗಿದುಹೋಗಬಹುದು’ ಎಂದು ಅವರು ಹೇಳುತ್ತಾರೆ.

ಮೊದಲ ಲಾಕ್‌ಡೌನ್‌ ಸಂದರ್ಭದಲ್ಲಿ ತುಮಕೂರಿನ ಬಳಿ ಮನೆಯೊಂದರ ನಿರ್ಮಾಣ ಕೆಲಸದಲ್ಲಿ ತೊಡಗಿದ್ದ ಇಬ್ರಾಹಿಂ ಅವರು ಯುಗಾದಿಗೆ ತುಸು ಮೊದಲು ತಮ್ಮ ಊರಿಗೆ ಮರಳಿದ್ದರು. ಯುಗಾದಿ ಹಬ್ಬದ ವೇಳೆಗೆ ಲಾಕ್‌ಡೌನ್‌ ಜಾರಿಗೆ ಬಂತು. ಇಬ್ರಾಹಿಂ ಅವರಿಗೆ ತಿಂಗಳುಗಳ ಕಾಲ ತುಮಕೂರಿಗೆ ಮರಳಲು, ಹಿಡಿದಿದ್ದ ಮನೆ ಕೆಲಸವನ್ನು ಪೂರ್ಣಗೊಳಿಸಲು ಆಗಲೇ ಇಲ್ಲ.

‘ಲಾಕ್‌ಡೌನ್‌ಗೂ ಮೊದಲು ನನ್ನೊಂದಿಗೆ 22 ಜನ ಕೆಲಸ ಮಾಡುತ್ತಿದ್ದರು. ಈಗ ಅವರ ಸಂಖ್ಯೆ 12 ಮಾತ್ರ. ಲಾಕ್‌ಡೌನ್‌ ನಂತರದಲ್ಲಿ ನನ್ನ ಜೊತೆ ಕೆಲಸ ಮಾಡುವವರ ಸಂಬಳ ಕಡಿಮೆ ಮಾಡಬೇಕಾಯಿತು. ಕೆಲವರಿಗೆ ನಾನು ಇನ್ನೂ ಪೂರ್ತಿ ಹಣ ಪಾವತಿಸಿಲ್ಲ. ಈಗ ಕೆಲಸ ಸುಲಭಕ್ಕೆ ಸಿಗುತ್ತಿಲ್ಲ. ನಮ್ಮ ತಂಡವು ಬೆಂಗಳೂರಿನ ಸುತ್ತಮುತ್ತ ಮಾಡುತ್ತಿದ್ದ ಮೂರು–ನಾಲ್ಕು ಮನೆಗಳ ಕೆಲಸ ನಿಂತುಹೋಗಿದೆ. ಮನೆ ಕಟ್ಟಿಸುತ್ತಿದ್ದವರ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ. ಹಾಗಾಗಿ, ಮನೆ ಕೆಲಸಗಳೂ ಸ್ಥಗಿತವಾಗಿವೆ’ ಎಂದು ಇಬ್ರಾಹಿಂ ಅವರು ‘ಪ್ರಜಾವಾಣಿ’ ಜೊತೆ ಪರಿಸ್ಥಿತಿ ಹಂಚಿಕೊಂಡರು.

ಲಾಕ್‌ಡೌನ್‌ ನಂತರದಲ್ಲಿ ಇವರು ಎರಡು ತಿಂಗಳು ಕೆಲಸವಿಲ್ಲದೆ ಮನೆಯಲ್ಲೇ ಕುಳಿತಿದ್ದರು. ‘ಲಾಕ್‌ಡೌನ್‌ ನಂತರದಲ್ಲಿ ಈ ಕೆಲಸವೇ ಬೇಡ ಎಂದು ಅನಿಸಿದ್ದು ಇದೆ. ಆದರೆ ಬೇರೆ ಕೆಲಸ ಮಾಡಲು ನನಗೆ ಗೊತ್ತಿಲ್ಲ’ ಎಂದರು.

ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ನಾಗರಾಜ ಕೋಳ್ಕೆರೆ, ‘ಮೊದಲು ನನ್ನ ಜೊತೆ ಕೆಲಸ ಮಾಡುತ್ತಿದ್ದ ಎಲ್ಲರೂ ಈಗ ಕಟ್ಟಡ ನಿರ್ಮಾಣ ಕೆಲಸಕ್ಕೆ ಮರಳಿದರೆ ಅವರಿಗೆ ಕೆಲಸ ಕೊಡುವ ಸ್ಥಿತಿಯಲ್ಲಿ ನಾನಿಲ್ಲ’ ಎನ್ನುತ್ತಾರೆ.

‘ಮೊದಲು ನನ್ನ ಬಳಿ ಹಲವು ತಂಡಗಳಲ್ಲಿ ಒಟ್ಟು 50 ಜನ ಕೆಲಸ ಮಾಡುತ್ತಿದ್ದರು. ಈಗ ಹತ್ತು ಜನಕ್ಕೆ ಮಾತ್ರ ಕೆಲಸ ನೀಡಿದ್ದೇನೆ. ನನ್ನ ವಹಿವಾಟು ಕೋವಿಡ್‌ಗೂ ಮೊದಲಿನ ಸ್ಥಿತಿಗೆ ಹೋಲಿಸಿದರೆ ಶೇಕಡ 75ರಷ್ಟು ತಗ್ಗಿದೆ’ ಎಂದರು ನಾಗರಾಜ.

ಮೊದಲು ಏಕಕಾಲಕ್ಕೆ ನಾಲ್ಕು ಕಟ್ಟಡಗಳ ಕೆಲಸ ಒಪ್ಪಿಕೊಳ್ಳುತ್ತಿದ್ದ ನಾಗರಾಜ ಅವರಿಗೆ ಈಗ ಒಂದು ಕಟ್ಟಡದ ಕೆಲಸ ಮಾತ್ರ ಸಿಗುತ್ತಿದೆ. ‘ಜನರಿಗೆ ತಾವು ಎಷ್ಟು ಸಂಪಾದನೆ ಮಾಡುತ್ತಿದ್ದೆವು ಎಂಬುದು ಗೊತ್ತಿರುತ್ತಿತ್ತು. ಆ ಸಂಪಾದನೆಯ ಆಧಾರದಲ್ಲಿ ಅವರು ಕಟ್ಟಡ ನಿರ್ಮಾಣ ಕೆಲಸಕ್ಕೆ ಸಂಬಂಧಿಸಿದ ಯೋಜನೆ ಹಾಕಿಕೊಳ್ಳುತ್ತಿದ್ದರು. ಈಗ ಅವರಿಗೆ ತಮ್ಮ ಆದಾಯದ ಬಗ್ಗೆಯೇ ಖಚಿತತೆ ಇಲ್ಲ. ಹಾಗಾಗಿ ಅವರು ಕೆಲಸಕ್ಕೆ ಮುಂದಾಗುತ್ತಿಲ್ಲ’ ಎಂದರು ನಾಗರಾಜ.

‘ಅರ್ಥ ಮಾಡಿಕೊಳ್ಳಲೂ ಆಗುತ್ತಿಲ್ಲ’

ಕಟ್ಟಡ ನಿರ್ಮಾಣ ಉದ್ದಿಮೆಗಳು ಮತ್ತು ಬಿಲ್ಡರ್‌ಗಳು ಎಷ್ಟು ಕಷ್ಟದಲ್ಲಿದ್ದಾರೆ ಎಂಬುದನ್ನು ಇತರರಿಗೆ ಅರ್ಥ ಮಾಡಿಕೊಳ್ಳಲೂ ಆಗುತ್ತಿಲ್ಲ ಎಂದು ನೋವು ಹಂಚಿಕೊಂಡರು ಭಾರತೀಯ ಬಿಲ್ಡರ್‌ಗಳ ಒಕ್ಕೂಟದ ಬೆಂಗಳೂರು ಕೇಂದ್ರದ ಅಧ್ಯಕ್ಷ ಜಿ.ಎಂ.ರವೀಂದ್ರ.

‘ಮಾರುಕಟ್ಟೆಯಲ್ಲಿ ಹಣದ ಹರಿವು ಚೆನ್ನಾಗಿದ್ದಾಗ ಒಳ್ಳೆಯದಾಗುತ್ತದೆ. ಫ್ಲ್ಯಾಟ್ ಮಾರಿ, ದುಡ್ಡು ಬಂದರೆ ಇನ್ನೊಂದು ಫ್ಲ್ಯಾಟ್‌ ನಿರ್ಮಾಣ ಸಾಧ್ಯ. ಆದರೆ, ಈಗ ಜನ ಮೊದಲಿನ ರೀತಿಯಲ್ಲಿ ಖರೀದಿ ಮಾಡುತ್ತಿಲ್ಲ. ಇಡೀ ಉದ್ಯಮ ಕಷ್ಟದಲ್ಲಿದೆ. ಕಾರ್ಮಿಕರಿಗೂ ತೊಂದರೆ ಆಗಿದೆ’ ಎಂದು ತಿಳಿಸಿದರು.

ನಿರ್ಮಾಣ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದವರಲ್ಲಿ ಶೇಕಡ 20ರಷ್ಟು ಜನ ಖಂಡಿತ ಕೆಲಸ ಕಳೆದುಕೊಂಡಿದ್ದಾರೆ. ಈಗ ನುರಿತ ಕೆಲಸಗಾರರ ಕೊರತೆ ಇದೆ. ಕೋವಿಡ್‌ ಅಲೆಗಳ ಸಂದರ್ಭದಲ್ಲಿ ತವರಿಗೆ ಹೋಗಿದ್ದ ಹೊರರಾಜ್ಯಗಳ ಕಾರ್ಮಿಕರ ಪೈಕಿ ಶೇ 10ರಷ್ಟು ಜನ ಮಾತ್ರ ಮರಳಿದ್ದಾರೆ. ಮೂರನೆಯ ಅಲೆ ಇಲ್ಲ ಎಂದಾದರೆ ಇನ್ನು ಆರು ತಿಂಗಳಲ್ಲಿ ಅವರೆಲ್ಲ ವಾಪಸ್ ಬರುತ್ತಾರೆ. ಮೂರನೆಯ ಅಲೆ ಎದುರಾಯಿತು ಎಂದಾದರೆ ಪರಿಸ್ಥಿತಿಯನ್ನು ಊಹಿಸಿಕೊಳ್ಳಲೂ ಆಗುವುದಿಲ್ಲ ಎಂದರು.

ಅಂಕಿ–ಅಂಶ

1 ಲಕ್ಷಕ್ಕೂ ಹೆಚ್ಚು: ರಾಜ್ಯದಲ್ಲಿನ ನಿರ್ಮಾಣ ಗುತ್ತಿಗೆದಾರರು

5 ಲಕ್ಷಕ್ಕೂ ಹೆಚ್ಚು: ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು

(ಮಾಹಿತಿ: ರಾಜ್ಯ ಗುತ್ತಿಗೆದಾರರ ಸಂಘ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು