ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಆಸ್ಪತ್ರೆಗಳಲ್ಲಿ ಶೇ 50ಕ್ಕೂ ಅಧಿಕ ಹಾಸಿಗೆಗಳು ಖಾಲಿ

ಹಾಸಿಗೆಗಳಿಗೆ ಬೇಡಿಕೆ ಕುಸಿತ * ಭವಿಷ್ಯದ ದೃಷ್ಟಿಯಿಂದ ಉಳಿಸಿಕೊಳ್ಳಲು ನಿರ್ಧಾರ
Last Updated 6 ಜೂನ್ 2021, 20:34 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ ಏರಿಕೆ ಕಂಡ ಬೆನ್ನಲ್ಲಿಯೇ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹಲವು ಪಟ್ಟು ಹೆಚ್ಚಳ ಮಾಡಲಾಗಿತ್ತು. ಆದರೆ, ಈಗ ಸೋಂಕಿತರ ಸಂಖ್ಯೆ ಇಳಿಮುಖ ಆಗಿರುವ ಕಾರಣ ಶೇ 50ಕ್ಕೂ ಅಧಿಕ ಹಾಸಿಗೆಗಳು ಖಾಲಿ ಉಳಿದಿವೆ.

ಭವಿಷ್ಯದ ದೃಷ್ಟಿಯಿಂದ ಈ ಹಾಸಿಗೆಗಳನ್ನು ಹಾಗೆಯೇ ಉಳಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಮಾರ್ಚ್‌ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಕಂಡಿತ್ತು. ಫೆಬ್ರವರಿ ತಿಂಗಳ ಕೆಲ ದಿನಗಳು 500 ರ ಆಸುಪಾಸಿನಲ್ಲಿದ್ದ ಹೊಸ ಪ್ರಕರಣಗಳು, ಏಪ್ರಿಲ್ ತಿಂಗಳಲ್ಲಿ 50 ಸಾವಿರದ ಆಸುಪಾಸಿಗೆ ಏರಿಕೆಯಾಗಿತ್ತು. ಸೋಂಕು ದೃಢ ಪ್ರಮಾಣವು ದಿಢೀರ್ ಏರಿಕೆ ಕಂಡ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ ಆರು ಲಕ್ಷದ ಗಡಿ ದಾಟಿತ್ತು.

ತಡವಾಗಿ ಪರೀಕ್ಷೆ, ಮನೆ ಆರೈಕೆ ವೇಳೆ ನಿರ್ಲಕ್ಷ್ಯ ಸೇರಿದಂತೆ ವಿವಿಧ ಕಾರಣಗಳಿಂದ ಗಂಭೀರವಾಗಿ ಅಸ್ವಸ್ಥಗೊಂಡು, ಆಸ್ಪತ್ರೆಗೆ ತೆರಳುವವರ ಸಂಖ್ಯೆ ಕೂಡ ಏರಿಕೆಯಾಗಿದ್ದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ತಲೆದೋರಿದ್ದವು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಗುರುತಿಸಲಾದ 61 ಸಾವಿರ ಹಾಸಿಗೆಗಳಲ್ಲಿಈಗ 33 ಸಾವಿರಕ್ಕೂ ಅಧಿಕ ಹಾಸಿಗೆಗಳು ಈಗ ಖಾಲಿ ಉಳಿದಿವೆ.

ಆಮ್ಲಜನಕ ಸಂರ್ಪಕ ಸಹಿತ ಹಾಗೂ ಐಸಿಯು ಹಾಸಿಗೆಗಳಿಗೆ ಬೇಡಿಕೆ ಹೆಚ್ಚಿದ ಪರಿಣಾಮ ತಾಲ್ಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು ಸೇರಿದಂತೆ ವಿವಿಧೆಡೆ ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಕಾಣಿಸಿಕೊಳ್ಳುವ ಮೊದಲು ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳಲ್ಲಿ 1,970 ಆಮ್ಲಜನಕ ಸಂಪರ್ಕ ಹೊಂದಿರುವ ಹಾಸಿಗೆಗಳಿದ್ದವು. ಈಗ ಆ ಸಂಖ್ಯೆ 24 ಸಾವಿರಕ್ಕೆ ಏರಿಕೆಯಾಗಿದೆ. ಅದೇ ರೀತಿ, ಐಸಿಯು ಹಾಸಿಗೆಗಳು 444 ರಿಂದ 1,145, ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳು 610 ರಿಂದ 2,059ಕ್ಕೆ ಹೆಚ್ಚಳವಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಡಿ 4,700 ಹಾಸಿಗೆಗಳಿಗೆ ಆಮ್ಲಜನಕ ಸಂಪರ್ಕವಿತ್ತು. ಈಗ ಆ ಸಂಖ್ಯೆ 9,405ಕ್ಕೆ ಏರಿಕೆಯಾಗಿದೆ. ಐಸಿಯು ಹಾಸಿಗೆಗಳು 341 ರಿಂದ 646ಕ್ಕೆ ಹೆಚ್ಚಳವಾಗಿದೆ. ‌

ಭವಿಷ್ಯದಲ್ಲಿ ಬಳಕೆ:ಕೋವಿಡ್ ಮೊದಲನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾದ ಬಳಿಕ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಅಳವಡಿಕೆ ಮಾಡಿದ್ದ ಹಾಸಿಗೆಗಳನ್ನು ತೆರವು ಮಾಡಲಾಗಿತ್ತು. ಇದರಿಂದಾಗಿ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಹಾಸಿಗೆಗಳನ್ನು ಸಜ್ಜು ಮಾಡುವುದು ಸವಾಲಾಗಿ ಪರಿಣಮಿಸಿತ್ತು. ಹೀಗಾಗಿ, ಈಗ ಕೋವಿಡ್‌ ನಿಯಂತ್ರಣಕ್ಕೆ ಬಂದರೂ ಆಮ್ಲಜನಕ ಸಂಪರ್ಕ ಹೊಂದಿರುವ ಹಾಗೂ ಇತರ ಹಾಸಿಗೆಗಳನ್ನು ಹಾಗೆಯೇ ಉಳಿಸಿಕೊಳ್ಳಲು ಸರ್ಕಾರ ಮುಂದಾಗಿದೆ.

‘ಏಕಾಏಕಿ ಕೋವಿಡ್ ಪೀಡಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಳವಾದ ಪರಿಣಾಮ ಆಮ್ಲಜನಕ ಸಂಪರ್ಕ ಹೊಂದಿರುವ ಹಾಸಿಗೆಗಳನ್ನು ವ್ಯವಸ್ಥೆ ಮಾಡುವುದು ಕಷ್ಟವಾಯಿತು. ಈಗ ಸಾಕಷ್ಟು ಸಂಖ್ಯೆಯಲ್ಲಿ ಹಾಸಿಗೆಗಳು ಲಭ್ಯವಿದೆ. ಕೋವಿಡ್ ಮೂರನೇ ಅಲೆ ಅಥವಾ ಭವಿಷ್ಯದಲ್ಲಿ ಇಂತಹ ಕಾಯಿಲೆಗಳು ಕಾಣಿಸಿಕೊಂಡಲ್ಲಿ ಈಗಿನ ವ್ಯವಸ್ಥೆ ಸಹಕಾರಿಯಾಗಲಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

* ಆಸ್ಪತ್ರೆಗೆ ದಾಖಲಾಗುವ ಕೋವಿಡ್ ಪೀಡಿತರ ಸಂಖ್ಯೆ ಕಡಿಮೆಯಾಗಿದೆ. ಇದರಿಂದಾಗಿ ಹೆಚ್ಚಿನ ಹಾಸಿಗೆಗಳು ಖಾಲಿಯಿವೆ. ಭವಿಷ್ಯದ ದೃಷ್ಟಿಯಿಂದ ಹಾಸಿಗೆಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗುತ್ತದೆ.

–ಡಾ. ಓಂಪ್ರಕಾಶ್ ಪಾಟೀಲ್, ಆರೋಗ್ಯ ಇಲಾಖೆ ನಿರ್ದೇಶಕ

ಕೋವಿಡ್ ಚಿಕಿತ್ಸೆಗೆ ಹಾಸಿಗೆಗಳ ವಿವರ (ಮೇ 5)

ಹಾಸಿಗೆಗಳ ಪ್ರಕಾರ; ಗುರುತಿಸಲಾದ ಹಾಸಿಗೆ; ಭರ್ತಿಯಾಗಿರುವ ಹಾಸಿಗೆ; ಖಾಲಿ ಇರುವ ಹಾಸಿಗೆ

ಸಾಮಾನ್ಯ ಹಾಸಿಗೆ; 30,668; 10,506;20,162

ವೆಂಟಿಲೇಟರ್ ರಹಿತ ಐಸಿಯು ಹಾಸಿಗೆ; 3,340; 2,349; 991

ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆ; 3,016; 2,288; 728

ಆಮ್ಲಜನಕ ಸಂಪರ್ಕ ಹೊಂದಿರುವ ಹಾಸಿಗೆ; 24,919; 13,115;11,804

* ಸರ್ಕಾರಿ ಆಸ್ಪತ್ರೆಗಳ ಜತೆಗೆ ಖಾಸಗಿ ಆಸ್ಪತ್ರೆಗಳಲ್ಲಿನ ಹಾಸಿಗೆಗಳು ಒಳಗೊಂಡಿವೆ

ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಹಾಸಿಗೆ ವಿವರ

ಆರೈಕೆ ಕೇಂದ್ರಗಳು; ಸಿದ್ಧಗೊಳಿಸಲಾದ ಹಾಸಿಗೆಗಳು; ಖಾಲಿ ಇರುವ ಹಾಸಿಗೆಗಳು

656; 54,484; 35,828

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT