ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ ರದ್ದು

ರಾತ್ರಿ ಕರ್ಫ್ಯೂ ಮುಂದುವರಿಕೆ; ಹೋಟೆಲ್, ಮಾಲ್‌ ನಿರ್ಬಂಧ ಯಥಾಸ್ಥಿತಿ
Last Updated 21 ಜನವರಿ 2022, 20:20 IST
ಅಕ್ಷರ ಗಾತ್ರ

ಬೆಂಗಳೂರು: ಶಾಸಕರು, ಸಚಿವರ ಒತ್ತಡ ಮತ್ತು ವಾಣಿಜ್ಯೋದ್ಯಮ ಸಮುದಾಯದ ಬೇಡಿಕೆಗೆ ಮಣಿದಿರುವ ರಾಜ್ಯ ಸರ್ಕಾರ ವಾರಾಂತ್ಯ ಕರ್ಫ್ಯೂವನ್ನು ಕೈಬಿಡುವ ನಿರ್ಧಾರ ಕೈಗೊಂಡಿದೆ. ಆದರೆ, ರಾತ್ರಿ ಕರ್ಫ್ಯೂ ಸೇರಿ ಉಳಿದ ಎಲ್ಲಾ ನಿಯಮಗಳೂ ಈಗಿರುವಂತೆ ಮುಂದುವರೆಯಲಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಂದಾಯ ಸಚಿವ ಆರ್‌.ಅಶೋಕ ಅವರು, ತಜ್ಞರ ಸಲಹೆಯ ಮೇರೆಗೆ ವಾರಾಂತ್ಯ ಕರ್ಫ್ಯೂ ಕೈಬಿಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.

‘ರಾಜ್ಯದಲ್ಲಿ ಕೋವಿಡ್‌ನಿಂದ ಆಸ್ಪತ್ರೆಗೆ ಸೇರುವವರ ಸಂಖ್ಯೆ ಶೇ 5 ಇದ್ದು, ಒಂದು ವೇಳೆ ಆ ಪ್ರಮಾಣ
ಶೇ 5 ಕ್ಕಿಂತ ಹೆಚ್ಚಾದರೆ ಮತ್ತೆ ವಾರಾಂತ್ಯ ಕರ್ಫ್ಯೂ ಜಾರಿ ಮಾಡಬೇಕಾಗುತ್ತದೆ. ಆದ್ದರಿಂದ ಸಾರ್ವಜನಿಕರು ಕೋವಿಡ್‌ ನಿಯಮಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕು’ ಎಂದೂ ಅವರು ಮನವಿ ಮಾಡಿದರು.

‘ರಾತ್ರಿ ಕರ್ಫ್ಯೂ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಮುಂದುವರೆಯುತ್ತದೆ. ರಾತ್ರಿ ವೇಳೆಯಲ್ಲಿ ಕ್ಲಬ್‌, ಪಬ್, ಬಾರ್‌ಗಳಲ್ಲಿ ಹೆಚ್ಚು ಜನ ಸೇರುತ್ತಾರೆ ಮತ್ತು ಪಾರ್ಟಿಗಳು ನಡೆಯುತ್ತವೆ. ಇಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಹೀಗಾಗಿ, ರಾತ್ರಿ ಕರ್ಫ್ಯೂ ಮುಂದುವರಿಸಲಾಗಿದೆ. ಇದು ನಮ್ಮ ರಾಜ್ಯ ಮಾತ್ರ ಅಲ್ಲ, ಕೋವಿಡ್‌ ಹೆಚ್ಚಾಗಿರುವ ಎಲ್ಲ ರಾಜ್ಯಗಳಲ್ಲೂ ಅನುಸರಿಸಲಾಗುತ್ತಿದೆ. ಇದರಿಂದ ಕೋವಿಡ್‌ ಇದೆ ಎಂಬ ಅರಿವೂಸಾರ್ವಜನಿಕರಲ್ಲೂ ಇರುತ್ತದೆ’ ಎಂದು ಅಶೋಕ ಸಮರ್ಥಿಸಿಕೊಂಡರು.

‘ಇನ್ನು ಮುಂದೆ ರಾಜ್ಯವನ್ನು ಒಂದು ಘಟಕವನ್ನಾಗಿ ಪರಿಗಣಿಸಲಾಗುತ್ತದೆ. ವಾರಾಂತ್ಯ ಕರ್ಫ್ಯೂ ಹೊರತುಪಡಿಸಿ ಉಳಿದ ಎಲ್ಲ ನಿಯಮಗಳೂ ಜಾರಿಯಲ್ಲಿರುತ್ತವೆ. ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದರು.

‘ರಾಜ್ಯದಲ್ಲಿನ ಸಕ್ರಿಯ ಪ್ರಕರಣ, ಆಸ್ಪತ್ರೆ ಚಿಕಿತ್ಸೆ, ಐಸಿಯುನಲ್ಲಿರುವವರು ಹಾಗೂ ವೆಂಟಿಲೇಟರ್‌ ಸೌಲಭ್ಯ ಪಡೆದಿರುವವರ ಸಂಖ್ಯೆಯನ್ನು ಪರಿಗಣಿಸಿದ ತಜ್ಞರು ವಾರಾಂತ್ಯ ಕರ್ಫ್ಯೂ ಕೈಬಿಡಲು ಸಲಹೆ ನೀಡಿದರು’ ಎಂದರು.

‘ಬೆಂಗಳೂರು ಬಿಟ್ಟು ಮೈಸೂರು, ತುಮಕೂರು, ಹಾಸನ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ದೃಢ ಪ್ರಮಾಣದ ದರ ಶೇ 19.94 ಇದೆ. ಮಕ್ಕಳಲ್ಲಿ ದೃಢ ಪ್ರಮಾಣ ದರ ಶೇ 8, ವಯಸ್ಕರ ದೃಢ ಪ್ರಮಾಣ ಶೇ 16.57 ಇದೆ. ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ’ ಎಂದು ಅಶೋಕ ಹೇಳಿದರು.

ಚರ್ಚಿತ ಪ್ರಮುಖಾಂಶಗಳು

* ಕೋವಿಡ್‌ ಪ್ರಕರಣಗಳು ಸರಾಸರಿ ಮೂರು ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಒಬ್ಬ ಸೋಂಕಿತನಿಂದ ಸರಾಸರಿ 2.6 ಜನರಿಗೆ ಹರಡುತ್ತಿದೆ. ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ತಗುಲುತ್ತಿದೆ.

* ವಾರಾಂತ್ಯ ಕರ್ಫ್ಯೂ ವಿಧಿಸಿದ್ದರೂ ಕೂಡಾ ಹೆಚ್ಚಿನ ಪರಿಣಾಮ ಉಂಟಾ
ಗಿಲ್ಲ. ಸೋಂಕಿತರ ಸಂಖ್ಯೆ ಮತ್ತು ದೃಢ ದರ ಹೆಚ್ಚಾದರೂ ಆಸ್ಪತ್ರೆ ದಾಖಲಾಗುತ್ತಿರುವವರ ಪ್ರಮಾಣ ಶೇ 5 ರಿಂದ ಶೇ 6 ರ ಮಧ್ಯದಲ್ಲಿದೆ. ಚೇತರಿಸಿಕೊಳ್ಳುತ್ತಿರುವ ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದೆ.

* ಕೋವಿಡ್‌ ನಿರ್ವಹಣೆಯ ಮುಂಚೂಣಿ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಜನರ ಜೀವ ಮತ್ತು ಜೀವನ ನಿರ್ವಹಣೆ ಸರಿ
ದೂಗಿಸುವ ಬಗ್ಗೆ ಸಭೆ ಚರ್ಚಿಸಿದೆ.

* ಸಭೆಗೆ ಮಾಹಿತಿ ನೀಡಿದ ಆರೋಗ್ಯ ತಜ್ಞರು,ಮುಂದಿನ ವಾರ ಕೋವಿಡ್‌ ಪ್ರಕರಣ ಹೆಚ್ಚಾಗಲಿದೆ ಎಂಬುದನ್ನೂ ಗಮನಕ್ಕೆ ತಂದಿದ್ದಾರೆ.

ಬೆಂಗಳೂರಲ್ಲಿ ಮಾತ್ರ ಶಾಲೆಗೆ ರಜೆ

ಬೆಂಗಳೂರು ಬಿಟ್ಟು ಉಳಿದ ಜಿಲ್ಲೆಗಳಲ್ಲಿ 1 ರಿಂದ 9 ನೇ ತರಗತಿವರೆಗೆ ಶಾಲೆಗಳಲ್ಲಿನ ಪರಿಸ್ಥಿತಿಯನ್ನು ನೋಡಿಕೊಂಡು ಮುಚ್ಚುವ ನಿರ್ಧಾರವನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು.

ಬೆಂಗಳೂರಿನಲ್ಲಿ ಪ್ರಕರಣಗಳು ಅತಿ ಹೆಚ್ಚು ಇರುವುದರಿಂದ ಮುಂದಿನ ಶನಿವಾರದವರೆಗೆ (ಜ.29) ರಜೆ ಮುಂದುವರೆಯಲಿದೆ. ಮುಂದಿನ ಶುಕ್ರವಾರ ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಬೇರೆ ಜಿಲ್ಲೆಗಳಲ್ಲಿ ಶಾಲೆಯನ್ನು ಒಂದು ಘಟಕವಾಗಿ ಪರಿಗಣಿಸಲಾಗುವುದು. ಯಾವುದೇ ಶಾಲೆಯಲ್ಲಿ 4 ರಿಂದ 5 ಕೋವಿಡ್‌ ಪ್ರಕರಣಗಳು ಬಂದರೆ 3 ದಿನ, 20–25 ಪ್ರಕರಣಗಳು ದೃಢ ಪ್ರಕರಣಗಳು ವರದಿಯಾದರೆ 7 ದಿನ ರಜೆ ನೀಡಲಾಗುವುದು. ಇದನ್ನು ಅಲ್ಲಿನ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌, ಆರೋಗ್ಯಾಧಿಕಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವಧಿ ಮುಗಿಯುತ್ತಿದ್ದಂತೆ ತರಗತಿಗಳು ಯಥಾ ಪ್ರಕಾರ ಆರಂಭವಾಗುತ್ತವೆ ಎಂದು ನಾಗೇಶ್‌ ಹೇಳಿದರು.

ಬೆಂಗಳೂರಿನಲ್ಲಿ 1 ರಿಂದ 9 ನೇ ತರಗತಿಗಳು ಅಲ್ಲದೇ ಕಾಲೇಜುಗಳು ಮತ್ತು ಇತರ ಉನ್ನತ ಶಿಕ್ಷಣದ (ವೈದ್ಯಕೀಯ, ನರ್ಸಿಂಗ್‌, ದಂತ ವ್ಯದ್ಯಕೀಯ ಬಿಟ್ಟು) ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. 10,11 ಮತ್ತು 12 ತರಗತಿಗಳು ಮಾತ್ರ ನಡೆಯುತ್ತಿವೆ.

ಜನರ ಹೊಣೆಗಾರಿಕೆ ಜಾಸ್ತಿ: ಆರಗ

‘ವಾರಾಂತ್ಯ ಕರ್ಫ್ಯೂ ರದ್ದು ಮಾಡಿದ್ದರಿಂದ ಜನರ ಹೊಣೆಗಾರಿಕೆ ಹೆಚ್ಚಾಗಿದೆ. ನಮ್ಮ ಪ್ರಾಣ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂಬ ಜವಾಬ್ದಾರಿಯಿಂದ, ಜನ ಸಹಕರಿಸಬೇಕು. ಹೇಗೆ ಬೇಕೊ ಹಾಗೆ ಇರುತ್ತೇವೆ ಎಂದು ಓಡಾಡಿದರೆ ಆಗದು. ಬೇಕಾಬಿಟ್ಟಿ ವರ್ತನೆಯಿಂದ ಆಸ್ಪತ್ರೆ ಸೇರುವವರ ಸಂಖ್ಯೆ ಜಾಸ್ತಿಯಾದರೆ ಏನೂ ಮಾಡಲು ಆಗುವುದಿಲ್ಲ. ಲಾಕ್‌ ಡೌನ್ ಕೂಡಾ ಆಗಬಹುದು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಸಿದರು.

‘ಬೀದಿ ಬದಿ ವ್ಯಾಪಾರಿಗಳು, ಹೂವಿನ ವ್ಯಾಪಾರಿಗಳು, ತರಕಾರಿ ವ್ಯಾಪಾರಿಗಳು, ಆಟೋ ಚಾಲಕರಿಗೆ ವಾರಾಂತ್ಯ ಕರ್ಫ್ಯೂವಿನಿಂದ ದೊಡ್ಡ ಹೊಡೆತ ಆಗುತ್ತದೆ ಎಂಬ ಕಾರಣಕ್ಕೆ ತೆಗೆದಿದ್ದೇವೆ. ಜನ ಹೊಣೆಗಾರಿಕೆ ಸ್ವೀಕಾರ ಮಾಡಿದ್ದಾರೆ ಎಂದು ಭಾವಿಸುತ್ತೇವೆ’ ಎಂದು ಹೇಳಿದರು.

ಮುಂದುವರಿಯುವ ನಿಯಮಗಳು

* ಮದುವೆ ಒಳಾಂಗಣ 100 ಜನ, ಹೊರಾಂಗಣ 200 ಮಂದಿಗೆ ಅವಕಾಶ

* ಮೆರವಣಿಗೆ, ಜಾತ್ರೆ, ರ್‍ಯಾಲಿ, ಪ್ರತಿಭಟನೆ, ಧರಣಿಗಳಿಗೆ ಅವಕಾಶ ಇಲ್ಲ

* ಹೋಟೆಲ್, ಬಾರ್, ಕ್ಲಬ್, ಪಬ್‌ಗಳು ಶೇ 50 ಆಸನ ಸಾಮರ್ಥ್ಯದೊಂದಿಗೆ ತೆರೆಯಬಹುದು. ಪ್ರವೇಶಕ್ಕೆ ಎರಡೂ ಲಸಿಕೆ ಪಡೆಯುವುದು ಕಡ್ಡಾಯ

* ದೇವಸ್ಥಾನ, ಚರ್ಚ್‌, ಮಸೀದಿ, ಗುರುದ್ವಾರಗಳಲ್ಲಿ ಈಗಿರುವ ನಿರ್ಬಂಧ ಮುಂದುವರಿಯಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT