ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪರಿಹಾರಕ್ಕೆ ಒತ್ತಾಯಿಸಿ ಮನೆಯಿಂದಲೇ ಪ್ರತಿಭಟನೆ

Last Updated 22 ಜನವರಿ 2022, 20:14 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಕ್ರಮ ವಹಿಸಲು ಹಾಗೂ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಪರಿಹಾರ ವಿತರಿಸಲು ಒತ್ತಾಯಿಸಿ ಜ.24ರಂದು ಮನೆ– ಮನೆಯಿಂದಲೇ ಪ್ರತಿಭಟನೆ ನಡೆಸಲು ಏಳು ಪಕ್ಷಗಳ ಜಂಟಿ ಸಮಿತಿ ನಿರ್ಧರಿಸಿದೆ.

ಸಿಪಿಐ, ಸಿಪಿಐ(ಎಂ), ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್), ಸಿಪಿಐ (ಎಂಎಲ್, ಲಿಬರೇಷನ್), ಅಖಿಲ ಭಾರತ ಫಾರ್ವರ್ಡ್‌ ಬ್ಲಾಕ್ (ಎಐಎಫ್‌ಬಿ), ಆರ್‌ಪಿಐ (ಅಂಬೇಡ್ಕರ್‌ ವಾದ), ಸ್ವರಾಜ್ ಇಂಡಿಯಾ ಸೇರಿದಂತೆ ಒಟ್ಟು 7 ಪಕ್ಷಗಳ ಮುಖಂಡರು ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಮುಖ್ಯಮಂತ್ರಿಗೆ ಬರೆದಿರುವ ಬಹಿರಂಗ ಪತ್ರವನ್ನು ಬಿಡುಗಡೆ ಮಾಡಿದರು.

‘ಮದುವೆ ಸಮಾರಂಭಗಳಿಗೆ 200 ಜನ ಸೇರಬಹುದು. ಜನರ ಹೋರಾಟಗಳಿಗೆ ಮಾತ್ರ ಅವಕಾಶ ನೀಡದಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ. ಈ ನಿರ್ಬಂಧಗಳನ್ನು ಕೂಡಲೇ ತೆರವುಗೊಳಿಸಬೇಕು’ ಎಂದು ಸಿಪಿಐ(ಎಂ) ಕಾರ್ಯದರ್ಶಿ ಯು.ಬಸವರಾಜ ಒತ್ತಾಯಿಸಿದರು.

‘ಮನೆ ಆರೈಕೆಯಲ್ಲಿರುವ ಸೋಂಕಿತರಿಗೆ ಅಗತ್ಯ ನೆರವು ನೀಡಬೇಕು. ವಾರ್ಡ್‌ವಾರು ಸಮುದಾಯ ಅಡುಗೆ ಮನೆಗಳನ್ನು ತೆರೆದು ಪೌಷ್ಟಿಕ ಆಹಾರವನ್ನುಉಚಿತವಾಗಿ ಒದಗಿಸಬೇಕು. ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಬೇಕು. ಮೃತರ ಕುಟುಂಬದವರಿಗೆ ₹4 ಲಕ್ಷ ಪರಿಹಾರ ನೀಡಬೇಕು. ಕೋವಿಡ್ ಯೋಧರ ಜೀವನ ಭದ್ರತೆಗೂ ಕ್ರಮ ವಹಿಸಬೇಕು' ಎಂದು ಆಗ್ರಹಿಸಿದರು.

ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಪ್ರತಿ ಕುಟುಂಬಕ್ಕೂ ₹10 ಸಾವಿರ ನೀಡಬೇಕು. ಪ್ರತಿ ಕುಟುಂಬಕ್ಕೆ 10 ಕೆ.ಜಿ. ಪಡಿತರವನ್ನು ಉಚಿತವಾಗಿ ವಿತರಿಸಬೇಕು ಎಂದು ಒತ್ತಾಯಿಸಿದರು.

‘ಉದ್ಯೋಗ ಖಾತ್ರಿ ಯೋಜನೆಯಡಿ 200 ದಿನ ಉದ್ಯೋಗ ನೀಡಿ ಕೂಲಿಯನ್ನು ₹600ಕ್ಕೆ ಹೆಚ್ಚಿಸಬೇಕು. ಶಾಲಾ ಕಾಲೇಜುಗಳ ಶುಲ್ಕ ಮನ್ನಾ ಮಾಡಬೇಕು’ ಎಂದು ಸಿಪಿಐ ರಾಜ್ಯ ಮುಖಂಡ ಪಿ.ವಿ. ಲೋಕೇಶ್ ಮತ್ತು ಎಸ್‌ಯುಸಿಐ(ಸಿ) ಮುಖಂಡ ಎಂ.ಎನ್.ಶ್ರೀರಾಮ್ ಆಗ್ರಹಿಸಿದರು.

ಆರ್‌ಪಿಐ(ಅಂಬೇಡ್ಕರ್‌ ವಾದ) ಅಧ್ಯಕ್ಷ ಮೋಹನ್‌ರಾಜ್‌, ‘ಮತಾಂತರ ನಿಷೇಧ ಮಸೂದೆ ಹಿಂದಕ್ಕೆ ಪಡೆಯಬೇಕು. ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ಸರ್ಕಾರಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಿಸಬೇಕು. ಆರೋಗ್ಯ ವಲಯಕ್ಕೆ ಬಜೆಟ್‌ನಲ್ಲಿ ಅನುದಾನ ಹೆಚ್ಚಿಸಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಬೇಕು' ಎಂದು ಒತ್ತಾಯಿಸಿದರು.

ಒಟ್ಟು 15 ಬೇಡಿಕೆಗಳನ್ನು ಒಳಗೊಂಡ ಬಹಿರಂಗ ಪತ್ರವನ್ನು ಮುಖ್ಯಮಂತ್ರಿಗೆ ಕಳುಹಿಸಲಾಗಿದೆ. ಮನೆ- ಮನೆಯಿಂದಲೇ ಪ್ರತಿಭಟನೆ ನಡೆಸಿ ಆನ್‌ಲೈನ್‌ನಲ್ಲೂ ಮನವಿ ಸಲ್ಲಿಸಲಾಗುವುದು ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಎನ್.ಉಮೇಶ್ ತಿಳಿಸಿದರು.

‘ವಾರಾಂತ್ಯದ ಕರ್ಫ್ಯೂನಲ್ಲೂ ರಾಜಕೀಯ’

‘ಸೋಂಕು ಪ್ರಮಾಣ ಕಡಿಮೆ ಇದ್ದಾಗ ವಾರಾಂತ್ಯದ ಕರ್ಫ್ಯೂ ವಿಧಿಸಿದವರು, ಹೆಚ್ಚಾದಾಗ ಹಿಂಪಡೆದಿದ್ದಾರೆ. ರಾಜಕೀಯ ಕಾರಣಕ್ಕೆ ಅವರು ಈ ರೀತಿ ಮಾಡುತ್ತಿದ್ದಾರೆ’ ಎಂದು ಸರ್ಕಾರದ ವಿರುದ್ಧ ಡಿ.ಕೆ. ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ವಾರಾಂತ್ಯ ಕರ್ಫ್ಯೂ ಹಿಂತೆಗೆದುಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾನು ಈ ಹಿಂದೆಯೇ ಇದು ಬಿಜೆಪಿ ಕರ್ಫ್ಯೂ ಎಂದಿದ್ದೆ. ಅವರಿಗೆ ಬೇಕಾದಾಗ ವಿಧಿಸುತ್ತಾರೆ, ಬೇಡವಾದಾಗ ತೆರವುಗೊಳಿಸುತ್ತಾರೆಂದು. ಸರ್ಕಾರ ಅವೈಜ್ಞಾನಿಕವಾಗಿ ನಿಯಮಗಳನ್ನು ಜಾರಿ ಮಾಡುತ್ತಿದೆ. ಆಂಧ್ರ, ತೆಲಂಗಾಣ, ಇತರ ರಾಜ್ಯಗಳಲ್ಲಿ ಇಲ್ಲದ ನಿಯಮ ಇಲ್ಲಿ ಯಾಕೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT