ಗುರುವಾರ , ಅಕ್ಟೋಬರ್ 22, 2020
23 °C
ಆರ್‌ಟಿ–ಪಿಸಿಆರ್‌ನಲ್ಲಿ ನೆಗೆಟಿವ್–ಸಿಟಿ ಸ್ಕ್ಯಾನ್‌ನಲ್ಲಿ ಸೋಂಕು ಲಕ್ಷಣ

ನೆಗೆಟಿವ್‌ ಬಂದರೂ ಸೋಂಕಿರುವ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಒಳಗಾದ ವ್ಯಕ್ತಿಯಲ್ಲಿ ಕೋವಿಡ್‌ ನೆಗೆಟಿವ್‌ ವರದಿ ಬಂದಿದ್ದರೆ, ಅದೇ ವ್ಯಕ್ತಿ ಸಿಟಿ ಸ್ಕ್ಯಾನ್‌ಗೆ ಒಳಪಟ್ಟಾಗ ತೀವ್ರ ಸೋಂಕು ಲಕ್ಷಣಗಳು ಹೊಂದಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಿಂದ ಕೋವಿಡ್‌ ಪರೀಕ್ಷೆಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿಯೇ (ಎಸ್‌ಒಪಿ) ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎನ್ನುತ್ತಾರೆ ತಜ್ಞ ವೈದ್ಯರು.

ಈಗಿರುವ ಮಾರ್ಗಸೂಚಿ ಪ್ರಕಾರ, ಸೋಂಕಿನ ಲಕ್ಷಣಗಳಿಲ್ಲದ, ಕಡಿಮೆ ಲಕ್ಷಣ ಹೊಂದಿರುವ, ಕೆಲವು ಲಕ್ಷಣ ಹೊಂದಿರುವ ಮತ್ತು ಗಂಭೀರ ಲಕ್ಷಣ ಹೊಂದಿರುವವರು ಎಂದು ನಾಲ್ಕು ಗುಂಪಾಗಿ ವಿಭಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ಆರ್‌ಟಿ–ಪಿಸಿಆರ್‌ ಪರೀಕ್ಷೆಗೊಳಪಟ್ಟಾಗ ನೆಗೆಟಿವ್ ಎಂದು ವರದಿ ಬಂದಿದ್ದರೂ, ಸಿಟಿ ಸ್ಕ್ಯಾನ್‌ಗೆ ಒಳಪಟ್ಟಾಗ, ಗಂಭೀರ ಸ್ವರೂಪದ ಸೋಂಕಿನ ಲಕ್ಷಣಗಳು ಹೊಂದಿರುವುದು ಪತ್ತೆಯಾಗಿದೆ. ಆದರೆ, ಒಟ್ಟು ಸೋಂಕಿತರಲ್ಲಿ ಇಂತಹ ಪ್ರಕರಣಗಳ ಶೇ 5ಕ್ಕಿಂತ ಕಡಿಮೆ ಎಂದು ವೈದ್ಯರು ಹೇಳುತ್ತಾರೆ.

ಕೋವಿಡ್‌ ಪರೀಕ್ಷೆಯ ರಾಜ್ಯ ನೋಡಲ್ ಅಧಿಕಾರಿ, ಜಯದೇವ ಆಸ್ಪತ್ರೆಯ ಡಾ. ಸಿ.ಎನ್. ಮಂಜುನಾಥ್, ‘ಜಯದೇವ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಇಬ್ಬರು ಶುಶ್ರೂಷಕರು ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಒಳಪಟ್ಟಿದ್ದರು. ನೆಗೆಟಿವ್ ಎಂದು ವರದಿ ಬಂದಿತ್ತು. ಆದರೆ, ಅವರು ಸಿಟಿ ಸ್ಕ್ಯಾನ್‌ಗೆ ಒಳಪಟ್ಟಿದ್ದಾಗ, ಕೋವಿಡ್ ಸೋಂಕಿನ ಲಕ್ಷಣಗಳು ಕಂಡು ಬಂದಿವೆ’ ಎಂದರು.

‘ಶುಶ್ರೂಷಕರಿಗೆ ರೆಮ್ಡಿಸಿವಿರ್‌ ಇಂಜೆಕ್ಷನ್‌ ನೀಡಲಾಯಿತು. ನಂತರ ಅವರಿಗೆ ಮೂರನೇ ಬಾರಿ ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್‌ ಪಾಸಿಟಿವ್ ಎಂದು ವರದಿ ಬಂದಿತು’ ಎಂದು ಅವರು ಹೇಳಿದರು.

‘ಕಳೆದ ಮಾರ್ಚ್‌ನಿಂದಲೂ ಇಂಥದ್ದೊಂದು ಚರ್ಚೆ ಚಾಲ್ತಿಯಲ್ಲಿದೆ. ಮೊದಲ ಬಾರಿ ಗಂಟಲ ದ್ರವ ಮಾದರಿ ನೀಡಿದಾಗ ರೋಗಿಯ ವರದಿ ನೆಗೆಟಿವ್‌ ಬಂದಿರಬಹುದು. ಅದೇ ರೋಗಿಯು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವಾಗ ಪರೀಕ್ಷೆ ನಡೆಸಿದರೆ ಪಾಸಿಟಿವ್ ಬರಬಹುದು. ಇಂತಹ ಸಂದರ್ಭ
ದಲ್ಲಿ ಎಕ್ಸ್‌ರೇ ತೆಗೆಸುವ ಅಥವಾ ಸಿಟಿ ಸ್ಕ್ಯಾನ್‌ಗೆ ಒಳಪಡಿಸುವ ಅಗತ್ಯವಿದೆ’ ಎಂದು ಡಾ. ತ್ರಿಲೋಕ್‌ ಚಂದ್ರ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು