ಶುಕ್ರವಾರ, ಮೇ 14, 2021
27 °C
ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕ: ಸರ್ಕಾರೇತರ ಸಂಸ್ಥೆಯ ಅಧ್ಯಯನ

ಶ್ವಾಸಕೋಶ ತಜ್ಞರ ಕೊರತೆ: ಕೋವಿಡ್ ಚಿಕಿತ್ಸೆ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌ ಸೋಂಕು ಪರೀಕ್ಷೆ–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಶ್ವಾಸಕೋಶ ತಜ್ಞರ ಕೊರತೆ ಹಾಗೂ ಆಸ್ಪತ್ರೆಗಳಲ್ಲಿನ ದುಬಾರಿ ಚಿಕಿತ್ಸಾ ವೆಚ್ಚವು ಕೋವಿಡ್ ಚಿಕಿತ್ಸೆಯಲ್ಲಿ ವ್ಯತ್ಯಯವಾಗಲು ಕಾರಣವಾಗಿದೆ ಎಂದು ಸರ್ಕಾರೇತರ ಸಂಸ್ಥೆಯೊಂದು ನಡೆಸಿದ ಅಧ್ಯಯನ ಹೇಳಿದೆ.

ಪ್ರಾಕ್ಸಿಮಾ ಎಂಬ ಸಂಸ್ಥೆಯು ‘ಜೀವನ್ ರಕ್ಷಾ‘ ಯೋಜನೆಯಡಿ ಕೋವಿಡ್ ಚಿಕಿತ್ಸೆ ಬಗ್ಗೆ ತಜ್ಞರ ನೆರವಿನಿಂದ ಅಧ್ಯಯನ ನಡೆಸಿದೆ. ಕೋವಿಡ್‌ ಪೀಡಿತ ವ್ಯಕ್ತಿಯ ಆರೋಗ್ಯದಲ್ಲಿ ಸಂಕೀರ್ಣ ಸಮಸ್ಯೆಗಳು ಕಾಣಿಸಿಕೊಂಡಾಗ ಮಾನ್ಯತೆ ಹೊಂದಿದ ಶ್ವಾಸಕೋಶ ತಜ್ಞರ ಚಿಕಿತ್ಸೆ ಬೇಕಾಗುತ್ತದೆ. ಆದರೆ, ರಾಜ್ಯದಲ್ಲಿ ಕೇವಲ 137 ಶ್ವಾಸಕೋಶ ತಜ್ಞರು ಮಾತ್ರ ಮಾನ್ಯತೆ ಹೊಂದಿದ್ದಾರೆ. ಅವರಲ್ಲಿ 66 ವೈದ್ಯರು ಬೆಂಗಳೂರಿನಲ್ಲಿಯೇ ಇದ್ದಾರೆ. ವಿಜಯಪುರ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೇವಲ ಒಬ್ಬರು ಮಾತ್ರ ಶ್ವಾಸಕೋಶ ತಜ್ಞರಿದ್ದಾರೆ. ಇದರಿಂದಾಗಿ ಚಿಕಿತ್ಸೆಯಲ್ಲಿ ವ್ಯತ್ಯಯವಾಗುತ್ತಿದೆ. ರಾಜ್ಯದಲ್ಲಿರುವ ಬಹುತೇಕ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆಯಿದೆ ಎಂದು ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ನಿಗದಿತ ಕ್ಷೇತ್ರದಲ್ಲಿ ಪರಿಣತಿ ಹೊಂದಿರದ ವೈದ್ಯರು ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿಯಿದೆ. ಇದರಿಂದಾಗಿ ವೈದ್ಯಕೀಯ ವ್ಯವಸ್ಥೆಯಲ್ಲಿ ಏರುಪೇರಾಗಿ, ಕೋವಿಡ್‌ ಪೀಡಿತರು ಸಮಸ್ಯೆ ಎದುರಿಸುತ್ತಿದ್ದಾರೆ. ಕೋವಿಡ್‌ ಆರ್‌ಟಿ–ಪಿಸಿಆರ್ ಪರೀಕ್ಷೆ ದರವನ್ನು ಕೂಡ ಸರ್ಕಾರ ಇಳಿಕೆ ಮಾಡಬೇಕಿದೆ. ಆಗ ಜನರೇ ಸ್ವಯಂಪ್ರೇರಿತರಾಗಿ ಆರೋಗ್ಯ ಕೇಂದ್ರಗಳಿಗೆ ತೆರಳಿ, ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಇಲ್ಲವಾದಲ್ಲಿ ದುಬಾರಿ ಶುಲ್ಕ ಪಾವತಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಹಿಂದೇಟು ಹಾಕುತ್ತಾರೆ ಎಂದು ಹೇಳಲಾಗಿದೆ.

ಚಿಕಿತ್ಸಾ ವೆಚ್ಚ ದುಬಾರಿ: ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ದುಬಾರಿ ಶುಲ್ಕವನ್ನು ವಿಧಿಸುತ್ತಿವೆ. ಇದರಿಂದಾಗಿ ಜನಸಾಮಾನ್ಯರಿಗೆ ಗುಣಮಟ್ಟದ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಜನರಲ್ ಇನ್ಶೂರೆನ್ಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಹಿತಿ ಪ್ರಕಾರ ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಪ್ರತಿ ಪ್ರಕರಣಕ್ಕೆ ಆಸ್ಪತ್ರೆಗಳಿಗೆ ಸರಾಸರಿ ₹ 1.50 ಲಕ್ಷವನ್ನು ಮರು ಪಾವತಿಸಲಾಗಿದೆ. ವಿಜಯಪುರದಲ್ಲಿ ಗರಿಷ್ಠ (₹ 1.75 ಲಕ್ಷ) ಹಾಗೂ ಚಿಕ್ಕಮಗಳೂರಿನಲ್ಲಿ ಕನಿಷ್ಠ (₹ 98,000) ಮೊತ್ತವನ್ನು ಮರುಪಾವತಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಆರೋಗ್ಯ ವಿಮೆಗಳಿದ್ದರೂ ಆಸ್ಪತ್ರೆಗಳು ವಿಧಿಸುವ ಎಲ್ಲ ಶಲ್ಕಗಳು ವಿಮೆ ಅಡಿಯಲ್ಲಿ ಬರದ ಕಾರಣ ರೋಗಿಯು ಹೆಚ್ಚುವರಿ ಹಣವನ್ನು ಪಾವತಿಸಬೇಕಾದ ಪರಿಸ್ಥಿತಿಯಿದೆ. ಪಿಪಿಇ ಕಿಟ್ ಬಳಕೆ ಸೇರಿದಂತೆ ವಿವಿಧ ಶುಲ್ಕವನ್ನು ವಿಧಿಸಲಾಗುತ್ತಿದೆ. ಸರ್ಕಾರವು ರಾಜ್ಯದಾದ್ಯಂತ ಒಂದೇ ರೀತಿಯ ಶುಲ್ಕ ಅನ್ವಯವಾಗುವಂತೆ ನೋಡಿಕೊಳ್ಳಬೇಕು’ ಎಂದು ಜೀವನ್ ರಕ್ಷಾ ಯೋಜನೆಯ ಸಂಚಾಲಕ ಮೈಸೂರು ಸಂಜೀವ್ ತಿಳಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು