ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: 396 ಕೊರೊನಾ ವಾರಿಯರ್ಸ್‌ಗೆ ಲಸಿಕೆ

ಕೋವಿಡ್ ಲಸಿಕಾ ಅಭಿಯಾನಕ್ಕೆ ಜಿಲ್ಲೆಯ ಐದು ಕಡೆ ಚಾಲನೆ
Last Updated 16 ಜನವರಿ 2021, 13:37 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ 5 ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡುವ ಅಭಿಯಾನವು ಶನಿವಾರ ಆರಂಭವಾಯಿತು.

ಜಿಲ್ಲೆಯ 5 ಕೇಂದ್ರಗಳಲ್ಲಿ ಮೊದಲ ದಿನ 474 ಮಂದಿಗೆ ಲಸಿಕೆ ಹಾಕುವ ಗುರಿಯಿತ್ತು. ಇದರಲ್ಲಿ 396 ಮಂದಿ ಕೊರೊನಾ ವಾರಿಯರ್ಸ್ ಅವರು ಲಸಿಕೆ ಪಡೆದಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ 80, ಸೇಂಟ್ ಮೈಕಲರ ಶಾಲೆಯಲ್ಲಿ 82, ಸೋಮವಾರಪೇಟೆ ತಾಲ್ಲೂಕು ಆಸ್ಪತ್ರೆ 77 ಮಂದಿ, ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ 96 ಮಂದಿ, ಕಾಕೋಟು ಪರಂಬು ಆಸ್ಪತ್ರೆಯಲ್ಲಿ 61 ಮಂದಿ ಕೊರೊನಾ ವಾರಿಯರ್ಸ್ ಅವರು ಲಸಿಕೆ ಪಡೆದಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ 5,049 ಹಾಗೂ 1,511 ಖಾಸಗಿ ಆಸ್ಪತ್ರೆ ವ್ಯಾಪ್ತಿಯ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಯೋಜನೆ ಇದೆ.

ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜಿಲ್ಲಾ ಆಸ್ಪತ್ರೆಯಲ್ಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪ್ರಭಾರ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರ ಉಪಸ್ಥಿತಿಯಲ್ಲಿ ಹೊನ್ನಮ್ಮ ಅವರಿಗೆ ಪ್ರಥಮವಾಗಿ ಕೋವಿಡ್ ವಿರುದ್ಧದ ಲಸಿಕೆ ನೀಡುವ ಮೂಲಕ ಕೊಡಗು ಜಿಲ್ಲೆಯಲ್ಲಿ ಚಾಲನೆ ದೊರೆಯಿತು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಕೋವಿಡ್-19 ಓಡಿಸಲು ಪ್ರತಿಯೊಬ್ಬರೂ ಕೋವಿಡ್ ವಿರುದ್ಧದ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.

ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ, ಜಿಲ್ಲೆಯಲ್ಲಿ 5 ಕಡೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಇಷ್ಟು ತ್ವರಿತವಾಗಿ ಯಾವುದೇ ರೋಗಕ್ಕೂ ಔಷಧಿ ಕಂಡುಹಿಡಿದಿರಲಿಲ್ಲ. ಸುಮಾರು 70-80 ವರ್ಷದ ಹಿಂದೆ ಮಲೇರಿಯಾ ಎಂಬ ಕಾಯಿಲೆ ಬಂದು ಅದರ ಔಷಧಿಯನ್ನು ಕಂಡುಹಿಡಿಯಲು ತಡವಾಗಿತ್ತು. ಆದರೆ, ಕೋವಿಡ್-19 ಲಸಿಕೆಯು ಬೇಗ ಸಿಕ್ಕಿರುವುದು ಸಂತೋಷದ ವಿಷಯ ಎಂದು ಅಪ್ಪಚ್ಚುರಂಜನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸೂಕ್ಷ್ಮಾಣು ಜೀವಿ ವಿಭಾಗದ ಮುಖ್ಯಸ್ಥೆ ನಜೀಮ ತಬಸೀರ ಅವರು ಲಸಿಕೆ ಪಡೆದ ನಂತರ ಮಾತನಾಡಿ, ಕೋವಿಡ್ ವಿರುದ್ಧದ ಲಸಿಕೆ ಪಡೆಯುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಇರುವುದಿಲ್ಲ. ಕೊರೊನಾ ವೈರಸ್ ಓಡಿಸುವ ನಿಟ್ಟಿನಲ್ಲಿ ಕೋವಿಡ್ ವಿರುದ್ಧದ ಲಸಿಕೆ ಪಡೆಯುವಂತಾಗಬೇಕು ಎಂದು ಹೇಳಿದರು.

ಲಸಿಕೆ ಪಡೆದವರು 28 ದಿನದ ನಂತರ ಮತ್ತೊಮ್ಮೆ ಕೋವಿಡ್ ವಿರುದ್ಧದ ಲಸಿಕೆ ಪಡೆಯಬೇಕಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕೋವಿಡ್ ವಿರುದ್ದದ ಲಸಿಕೆ ಪಡೆದ ಡಿ ದರ್ಜೆ ನೌಕರರಾದ ಹೊನ್ನಮ್ಮ ಅವರು ಮಾತನಾಡಿ, ಕೋವಿಡ್ ವಿರುದ್ದದ ಲಸಿಕೆ ಪಡೆದುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗಿಲ್ಲ ಎಂದು ಅವರು ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ, ಆಡಳಿತಾಧಿಕಾರಿ ಡಾ.ನಂಜುಂಡೇಗೌಡ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಗೋಪಿನಾಥ್, ಡಾ.ರೂಪೇಶ್, ಡಾ.ಆನಂದ್, ಡಾ.ಮಹೇಶ್, ನೋಡಲ್ ಅಧಿಕಾರಿ ಶ್ರೀಮತಿ ನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT