ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಾದ್ಯಂತ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ: ನೋಂದಣಿ ಹೇಗೆ?

Last Updated 31 ಮಾರ್ಚ್ 2021, 16:04 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಾದ್ಯಂತ ಗುರುವಾರದಿಂದ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ವಿತರಣೆ ಪ್ರಾರಂಭವಾಗಲಿದೆ. ಇದಕ್ಕಾಗಿ 5 ಸಾವಿರ ಕೇಂದ್ರಗಳನ್ನು ಗುರುತಿಸಲಾಗಿದೆ.

ರಾಜ್ಯದಲ್ಲಿ ಜ.16ರಿಂದ ಕೋವಿಡ್ ಲಸಿಕೆ ವಿತರಣೆ ಅಭಿಯಾನ ಪ್ರಾರಂಭವಾಗಿದೆ. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೋವಿಡ್ ಯೋಧರು, 60 ವರ್ಷ ಮೇಲ್ಪಟ್ಟವರು ಹಾಗೂ ಕೋವಿಡೇತರ ಕಾಯಿಲೆ ಎದುರಿಸುತ್ತಿರುವ 45 ವರ್ಷ ಮೇಲ್ಟಟ್ಟವರಿಗೆ ಲಸಿಕೆ ವಿತರಣೆ ನಡೆಯುತ್ತಿದೆ. ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತೆ ಏರುಗತಿ ಪಡೆದ ಪರಿಣಾಮ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಿಸಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು ಸೇರಿದಂತೆ 3 ಸಾವಿರಕ್ಕೂ ಅಧಿಕ ಕೇಂದ್ರಗಳಲ್ಲಿ ಲಸಿಕೆ ವಿತರಣೆ ನಡೆಯುತ್ತಿದೆ. ಈಗ ಫಲಾನುಭವಿಗಳ ಸಂಖ್ಯೆ ಹೆಚ್ಚಿದ ಕಾರಣ ರಾಜ್ಯದಲ್ಲಿರುವ ಆರೋಗ್ಯ ಉಪ ಕೇಂದ್ರಗಳನ್ನು ಕೂಡ ಬಳಸಿಕೊಳ್ಳಲು ಇಲಾಖೆ ನಿರ್ಧರಿಸಿದೆ. ಪ್ರತಿ ಕೇಂದ್ರದಲ್ಲಿ ಕನಿಷ್ಠ 50ರಿಂದ 100 ಮಂದಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಇದರಿಂದಾಗಿ ಪ್ರತಿನಿತ್ಯ 3 ಲಕ್ಷದಿಂದ 5 ಲಕ್ಷ ಮಂದಿ ಲಸಿಕೆ ಪಡೆಯಲಿದ್ದಾರೆ ಎಂದು ಇಲಾಖೆ ಅಂದಾಜಿಸಿದೆ.

37.20 ಲಕ್ಷ ಡೋಸ್ ವಿತರಣೆ: ರಾಜ್ಯದಲ್ಲಿ ಈವರೆಗೆ 37.20 ಲಕ್ಷ ಡೋಸ್ ಲಸಿಕೆಯನ್ನು ಫಲಾನುಭವಿಗಳಿಗೆ ನೀಡಲಾಗಿದೆ. 5.62 ಲಕ್ಷ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಇವರಲ್ಲಿ 3.42 ಲಕ್ಷ ಮಂದಿ ಎರಡನೇ ಡೋಸ್ ಪೂರ್ಣಗೊಳಿಸಿದ್ದಾರೆ. 60 ವರ್ಷ ಮೇಲ್ಪಟ್ಟವರಲ್ಲಿ 18.95 ಲಕ್ಷ ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. 45 ರಿಂದ 60 ವರ್ಷದೊಳಗಿನ ಕೋವಿಡೇತರ ಕಾಯಿಲೆ ಎದುರಿಸುತ್ತಿರುವವರಲ್ಲಿ 5.98 ಲಕ್ಷ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.

ಲಸಿಕೆ ಪಡೆಯುವುದು ಹೇಗೆ?

* ಆನ್‌ಲೈನ್ ಹಾಗೂ ಆಫ್‌ಲೈನ್ ನೋಂದಣಿಗೆ ಇದೆ ಅವಕಾಶ.

* ‘ಕೋವಿನ್’ ಪೋರ್ಟಲ್, ಆ್ಯಪ್ ಮೂಲಕ ಅಥವಾ ಲಸಿಕೆ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬಹುದು.

* ಆಧಾರ್ ಕಾರ್ಡ್, ಮತದಾನದ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ವಾಹನ ಚಾಲನಾ ಪರವಾನಗಿ ಸೇರಿದಂತೆ ಸರ್ಕಾರದ ಮಾನ್ಯತೆ ಪಡೆದ ಛಾಯಾಚಿತ್ರ ಇರುವ ಯಾವುದಾದರೂ ಒಂದು ಗುರುತಿನ ಚೀಟಿ ಬೇಕು.

* ಕೋವಿಡೇತರ ಕಾಯಿಲೆಗಳಿದ್ದಲ್ಲಿ ವೈದ್ಯರ ಪ್ರಮಾಣ ಪತ್ರ ಜತೆಗಿರಬೇಕು.

* ಲಸಿಕೆ ನೀಡಿದ ಬಳಿಕ ಅರ್ಧ ಗಂಟೆ ಅಲ್ಲಿಯೇ ಇರಿಸಿ ನಿಗಾ ವ್ಯವಸ್ಥೆಗೆ ಒಳಪಡಬೇಕು.

*28ನೇ ದಿನದ ಬಳಿಕ ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳಬೇಕು.

ಆನ್‌ಲೈನ್ ನೋಂದಣಿ ಹೇಗೆ?

* ‘ಕೋವಿನ್’ (cowin.gov.in) ಪೋರ್ಟಲ್ ಅಥವಾ ಆ್ಯಪ್‌ನಲ್ಲಿ ಲಾಗಿನ್ ಆಗಬೇಕು.

* ಮೊಬೈಲ್ ಸಂಖ್ಯೆ ನಮೂದಿಸಿ, ಖಾತೆ ಸೃಷ್ಟಿಸಲು ಸ್ವೀಕೃತ ಒಟಿಪಿ ನಮೂದಿಸಬೇಕು.

* ಹೆಸರು, ವಯಸ್ಸು ಸೇರಿದಂತೆ ವಿವಿಧ ವಿವರ ನಮೂದಿಸಿ, ಯಾವುದಾದರೂ ಒಂದು ದಾಖಲಾತಿಯನ್ನು ಅಪ್‌ಲೋಡ್ ಮಾಡಬೇಕು.

* ಅನಾರೋಗ್ಯ ಸಮಸ್ಯೆ ಇದ್ದಲ್ಲಿ ವೈದ್ಯರ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡಬೇಕು.

* ಲಸಿಕೆ ಪಡೆಯುವ ಕೇಂದ್ರ ಮತ್ತು ದಿನಾಂಕ ಆಯ್ಕೆ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT