ಮಂಗಳವಾರ, ಮೇ 24, 2022
23 °C

Covid-19 Karnataka Update: ಲಸಿಕೆ ಪಡೆದವರ ಪ್ರಮಾಣ ಶೇ 41.7ಕ್ಕೆ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಬಿಎಂಪಿ ಸಿಬ್ಬಂದಿಗೆ ಕೋವಿಡ್‌ ಲಸಿಕೆ ಹಾಕುತ್ತಿರುವುದು

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಲಸಿಕೆ ಪ‍ಡೆಯಲು ನಿಗದಿಪಡಿಸಲಾಗಿದ್ದ ಫಲಾನುಭವಿಗಳಲ್ಲಿ ಕೆಲದಿನಗಳಿಂದ ಅರ್ಧಕ್ಕೂ ಅಧಿಕ ಮಂದಿ ಗೈರಾಗುತ್ತಿರುವ ಪರಿಣಾಮ ಲಸಿಕೆ ಪಡೆದವರ ಪ್ರಮಾಣ ಶೇ 41.7ಕ್ಕೆ ಇಳಿಕೆಯಾಗಿದೆ.

ಜ.16ರಿಂದ ಈವರೆಗೆ ನಿಗದಿಪಡಿಸಲಾಗಿದ್ದ 11.02 ಲಕ್ಷ ಫಲಾನುಭವಿಗಳಲ್ಲಿ 4.60 ಲಕ್ಷ ಮಂದಿ ಮಾತ್ರ ಹಾಜರಾಗಿ, ಲಸಿಕೆ ಹಾಕಿಸಿಕೊಂಡಿದ್ದಾರೆ. ಉಳಿದವರು ಹಿಂಜರಿಕೆ ಸೇರಿದಂತೆ ವಿವಿಧ ಕಾರಣಗಳಿಂದ ಗೈರಾಗಿದ್ದಾರೆ. ಬುಧವಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಲಸಿಕೆ ವಿತರಣೆ ಅಭಿಯಾನ ನಡೆದಿದೆ. 580 ಕೇಂದ್ರಗಳಿಂದ 97,228 ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಇವರಲ್ಲಿ ಆರೋಗ್ಯ ಕಾರ್ಯಕರ್ತರ ಜತೆಗೆ ಕೋವಿಡ್‌ ಮುಂಚೂಣಿ ಯೋಧರು ಕೂಡ ಸೇರಿದ್ದಾರೆ. ನಿಗದಿಪಡಿಸಲಾಗಿದ್ದ ಫಲಾನುಭವಿಗಳಲ್ಲಿ 18,746 ಮಂದಿ ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ.

ತುಮಕೂರು (ಶೇ 83) ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಅರ್ಧಕ್ಕೂ ಅಧಿಕ ಮಂದಿ ಗೈರಾಗಿದ್ದಾರೆ. ಯಾದಗಿರಿ, ರಾಯಚೂರು, ದಾವಣಗೆರೆ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯದಲ್ಲಿ ಶೇ 90ಕ್ಕೂ ಅಧಿಕ ಮಂದಿ ಗೈರಾಗಿದ್ದಾರೆ.

415 ಮಂದಿಗೆ ಸೋಂಕು: ರಾಜ್ಯದಲ್ಲಿ ಹೊಸದಾಗಿ 415 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇಲ್ಲಿಯವರೆಗೆ ಸೋಂಕಿಗೀಡಾದವರ ಒಟ್ಟು ಸಂಖ್ಯೆ 9.43 ಲಕ್ಷ ದಾಟಿದೆ. ಸೋಂಕಿತರಲ್ಲಿ ಬೆಂಗಳೂರಿನಲ್ಲಿ ಮೂವರು ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 12,244ಕ್ಕೆ ತಲುಪಿದೆ. ಕೋವಿಡ್ ಪೀಡಿತರಲ್ಲಿ ಮತ್ತೆ 322 ಮಂದಿ ಗುಣಮುಖರಾಗಿದ್ದಾರೆ. ಇದರಿಂದಾಗಿ ಕಾಯಿಲೆಯಿಂದ ಚೇತರಿಸಿಕೊಂಡವರ ಸಂಖ್ಯೆ 9.25 ಲಕ್ಷ ದಾಟಿದೆ.

5,875 ಸೋಂಕಿತರು ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ 141 ಮಂದಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ. ಒಂದೇ ದಿನ 66 ಸಾವಿರ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈವರೆಗೆ 1.76 ಕೋಟಿ ಮಂದಿ ಪರೀಕ್ಷೆಗೆ ಒಳಪಟ್ಟಿದ್ದಾರೆ.

ಬೆಂಗಳೂರಿನಲ್ಲಿ 208 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 4.01 ಲಕ್ಷಕ್ಕೆ ತಲುಪಿದೆ. ಮೈಸೂರಿನಲ್ಲಿ ಮತ್ತೆ 45 ಪ್ರಕರಣಗಳು ವರದಿಯಾಗಿದೆ. ಅಲ್ಲಿ ಸೋಂಕಿತರ ಸಂಖ್ಯೆ 53,684ಕ್ಕೆ ಏರಿಕೆಯಾಗಿದೆ. ತುಮಕೂರು ಹಾಗೂ ಬೆಳಗಾವಿಯಲ್ಲಿ ತಲಾ 17 ಪ್ರಕರಣಗಳು ವರದಿಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು