ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ: ಎರಡನೇ ಡೋಸ್ ಇಂದಿನಿಂದ

Last Updated 14 ಫೆಬ್ರುವರಿ 2021, 20:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಾದ್ಯಂತ ಕೋವಿಡ್‌ ಲಸಿಕೆಯ ಎರಡನೇ ಡೋಸ್ ವಿತರಣೆಯು ಸೋಮವಾರದಿಂದ ಪ್ರಾರಂಭವಾಗಲಿದೆ.

ಕಳೆದ ಜ.16ರಂದುರಾಜ್ಯದ 243 ಕೇಂದ್ರಗಳಲ್ಲಿ ಲಸಿಕೆ ವಿತರಣೆಗೆ ಚಾಲನೆ ನೀಡಲಾಗಿತ್ತು. ಅಂದು 13 ಸಾವಿರ ಮಂದಿ ಹಾಜರಾಗಿ, ಲಸಿಕೆ ಪಡೆದುಕೊಂಡಿದ್ದರು. ಮೊದಲ ಡೋಸ್ ಪಡೆದ 28ನೇ ದಿನಕ್ಕೆ ಎರಡನೇ ಡೋಸ್ ನೀಡುವುದಾಗಿ ಆರೋಗ್ಯ ಇಲಾಖೆ ಹೇಳಿತ್ತು. ಅದರ ಅನುಸಾರ ಫೆ.13ರಿಂದ ಎರಡನೇ ಡೋಸ್ ನೀಡಬೇಕಾಗಿತ್ತು. ಆದರೆ, ಕೇಂದ್ರ ಸರ್ಕಾರವು ಎರಡನೇ ಡೋಸ್ ವಿತರಣೆಗೆ ಸಂಬಂಧಿಸಿದಂತೆ ರಾಜ್ಯಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿರಲಿಲ್ಲ. ರಾಜ್ಯ ಸರ್ಕಾರಗಳ ಅಧಿಕಾರಿಗಳ ಜೊತೆಗೆ ಈ ಬಗ್ಗೆ ಶನಿವಾರ ಸಭೆ ನಡೆಸಿದ ಕೇಂದ್ರ ಸರ್ಕಾರದ ಅಧಿಕಾರಿಗಳು, ಎರಡನೇ ಡೋಸ್‌ ನೀಡಲು ಅನುಮತಿ ನೀಡಿದ್ದರು. ಹೀಗಾಗಿ ಸೋಮವಾರದಿಂದ ಎರಡನೇ ಡೋಸ್ ವಿತರಣೆ ನಡೆಯಲಿದೆ.

ಎರಡನೇ ಡೋಸ್ ಲಸಿಕೆಗೆ 8 ರಿಂದ 12 ವಾರಗಳ ಅಂತರವಿದ್ದಲ್ಲಿ ಲಸಿಕೆಯು ಉತ್ತಮ ಪರಿಣಾಮ ಬೀರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿತ್ತು. ಆದರೆ, ಕೇಂದ್ರ ಸರ್ಕಾರವು ಈ ಹಿಂದಿನ ಮಾರ್ಗಸೂಚಿಯಂತೆ 28 ದಿನಗಳ ಬಳಿಕವೇ ಲಸಿಕೆ ನೀಡಬೇಕು ಎಂದು ಸೂಚಿಸಿದೆ. ಹೀಗಾಗಿ, ಎರಡನೇ ಡೋಸ್ ಲಸಿಕೆ ವಿತರಣೆ ಮಾಡಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ರಾಜ್ಯದಲ್ಲಿ ಲಸಿಕೆ ವಿತರಣೆ ಪ್ರಾರಂಭವಾದಾಗಿನಿಂದ ಈವರೆಗೆ ನಿಗದಿಪಡಿಸಲಾಗಿದ್ದ 8,21,939 ಆರೋಗ್ಯ ಕಾರ್ಯಕರ್ತರಲ್ಲಿ 4,09,836 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದರಿಂದ ಶೇ 50ರಷ್ಟು ಗುರಿ ಸಾಧ್ಯವಾಗಿದೆ. 2,88,278 ಮುಂಚೂಣಿ ಯೋಧರನ್ನು ಈವರೆಗೆ ಲಸಿಕೆ ಪಡೆಯಲು ಗುರುತಿಸಲಾಗಿತ್ತು. ಅವರಲ್ಲಿ 86,767 ಮಂದಿ ಹಾಜರಾಗಿ ಲಸಿಕೆ ಪಡೆದುಕೊಂಡಿದ್ದಾರೆ. ಇದರಿಂದ ಶೇ 30ರಷ್ಟು ಗುರಿ ಸಾಧ್ಯವಾಗಿದೆ. ಈವರೆಗೆ ಲಸಿಕೆ ಪಡೆದವರಲ್ಲಿ 15 ಮಂದಿಯಲ್ಲಿ ಮಾತ್ರ ತೀವ್ರ ಮತ್ತು ಗಂಭೀರ ಸ್ವರೂಪದ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕಚೇರಿಗೆ ಹಾಜರಾಗಲು ಕೇಂದ್ರ ಸರ್ಕಾರಿ ನೌಕರರಿಗೆ ಸೂಚನೆ
ನವದೆಹಲಿ:
ಕೇಂದ್ರ ಸರ್ಕಾರದ ಎಲ್ಲ ನೌಕರರು ಕಚೇರಿಗೆ ಬಂದು ಕಾರ್ಯನಿರ್ವಹಿಸಬೇಕು ಎಂದು ಸಿಬ್ಬಂದಿ ಸಚಿವಾಲಯ ನಿರ್ದೇಶನ ನೀಡಿದೆ.

ದೇಶದಲ್ಲಿ ಕೋವಿಡ್‌–19 ಪ್ರಕರಣ ಗಳು ಕಡಿಮೆಯಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಕಂಟೈನ್‌ಮೆಂಟ್ ವಲಯಗಳಲ್ಲಿ ವಾಸಿಸುವ ಎಲ್ಲ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಇವರು ಮನೆಯಿಂದಲೇ ಕಾರ್ಯನಿರ್ವಹಿಸಬೇಕು. ಕಂಟೈನ್‌ ಮೆಂಟ್‌ ವಲಯ ಎನ್ನುವುದನ್ನು ತೆಗೆದು ಹಾಕಿದ ನಂತರವೇ ಕಚೇರಿಗೆ ಬರಬೇಕು ಎಂದು ಸೂಚಿಸಲಾಗಿದೆ.

ಕಚೇರಿಯಲ್ಲಿ ದಟ್ಟಣೆಯಾಗದಂತೆ ಬೇರೆ, ಬೇರೆ ಸಮಯದಲ್ಲಿ ನೌಕರರು ಕಚೇರಿಗೆ ಹಾಜರಾಗಬೇಕು. ಈ ಬಗ್ಗೆ ಆಯಾ ಇಲಾಖೆಗಳ ಮುಖ್ಯಸ್ಥರು ನೌಕರರಿಗೆ ಸಮಯವನ್ನು ನಿಗದಿಪಡಿಸಲಿದ್ದಾರೆ ಎಂದು ತಿಳಿಸಲಾಗಿದೆ.

ಬಯೋಮೆಟ್ರಿಕ್‌ ಹಾಜರಾತಿ ಸ್ಥಗಿತಗೊಳಿಸಿರುವುದನ್ನು ಮುಂದುವರಿಸಬೇಕು. ಅಧಿಕಾರಿಗಳು ಸಭೆಗಳನ್ನು ಸಾಧ್ಯವಾದಷ್ಟು ವಿಡಿಯೊ ಕಾನ್ಫೆರೆನ್ಸ್‌ ಮೂಲಕವೇ ನಡೆಸಲು ಪ್ರಯತ್ನಿಸಬೇಕು. ಎಲ್ಲ ಇಲಾಖೆಗಳ ಕ್ಯಾಂಟೀನ್‌ ಗಳನ್ನು ಆರಂಭಿಸಬಹುದು ಎಂದೂ ಸಿಬ್ಬಂದಿ ಸಚಿವಾಲಯದ ನಿರ್ದೇಶನದಲ್ಲಿ ತಿಳಿಸಲಾಗಿದೆ.

ಇದುವರೆಗೆ, ಅಧೀನ ಕಾರ್ಯದರ್ಶಿ ಮತ್ತು ಅವರಿಗಿಂತ ಹಿರಿಯ ಅಧಿಕಾರಿ ಗಳು ಮಾತ್ರ ಕಚೇರಿಗೆ ಬರುತ್ತಿದ್ದರು. ಮೇ ತಿಂಗಳಲ್ಲಿ ಉಪಕಾರ್ಯದರ್ಶಿಗಿಂತಗಿಂತ ಕೆಳಗಿನ ಹುದ್ದೆಯಲ್ಲಿರುವ ಶೇಕಡ 50ರಷ್ಟು ನೌಕರರು ಎರಡು ಪಾಳಿಯಲ್ಲಿ ಕಚೇರಿಗೆ ಬರಬೇಕು ಎಂದು ಸೂಚಿಸಲಾಗಿತ್ತು. ಇವರಿಗೂ ಬೇರೆ, ಬೇರೆ ಸಮಯವನ್ನು ನಿಗದಿಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT