ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ: ಕೆಲವೆಡೆ ಎರಡು ಡೋಸ್ ಕಡ್ಡಾಯ- 1.49 ಕೋಟಿ ಮಂದಿಗೆ ಸೌಲಭ್ಯ ವಂಚನೆ?

ಕೋವಿಡ್ ಲಸಿಕೆ: ಕೆಲವೆಡೆ ಎರಡು ಡೋಸ್ ಕಡ್ಡಾಯದ ನಿರ್ಬಂಧ
Last Updated 5 ಡಿಸೆಂಬರ್ 2021, 22:00 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಮೂರನೇ ಅಲೆಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಜಾರಿಗೊಳಿಸುತ್ತಿದೆ. ವಿವಿಧ ಸೌಲಭ್ಯ ಪಡೆಯಲು ಹಾಗೂ ಕೆಲವು ಸ್ಥಳಗಳ ಪ್ರವೇಶಕ್ಕೆ ಕೋವಿಡ್‌ ಲಸಿಕೆಯ ಎರಡೂ ಡೋಸ್ ಪಡೆದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಇದು ಕಟ್ಟುನಿಟ್ಟಾಗಿ ಜಾರಿಯಾದರೆ, ರಾಜ್ಯದಲ್ಲಿನ1.49 ಕೋಟಿ ಮಂದಿ ಸಮಸ್ಯೆ ಎದುರಿಸಲಿದ್ದಾರೆ. ಕೆಲವರು ಸೌಲಭ್ಯಗಳಿಂದಲೂ ವಂಚಿತರಾಗಲಿದ್ದಾರೆ.

ಕೋವಿಡ್‌ ಹರಡುವಿಕೆ ಹಾಗೂ ಕಾಯಿಲೆಯ ತೀವ್ರತೆ ತಡೆಯಲು ಲಸಿಕೆ ಸಹಕಾರಿ ಎಂದು ವಿಶ್ಲೇಷಿಸಿರುವ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ವಿವಿಧ ಸರ್ಕಾರಿ ಸೌಲಭ್ಯ ಮತ್ತು ಸರ್ಕಾರಿ ಕೋಟಾದಡಿ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ಪಡೆಯಲು ಲಸಿಕೆಯ ಎರಡು ಡೋಸ್ ಕಡ್ಡಾಯಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ರೂಪಾಂತರಗೊಂಡ ಕೊರೊನಾ ವೈರಾಣು ಓಮೈಕ್ರಾನ್ ರಾಜ್ಯದಲ್ಲಿ ಕಾಣಿಸಿಕೊಂಡ ಬಳಿಕ ಸರ್ಕಾರವು ಇದರ ಹರಡುವಿಕೆ ತಡೆಯಲು ಕೆಲವೊಂದು ನಿರ್ಬಂಧಗಳನ್ನು ಜಾರಿಗೊಳಿಸಿದೆ.

ಶಾಲಾ–ಕಾಲೇಜುಗಳ ಪೋಷಕರಿಗೆ ಎರಡು ಡೋಸ್ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಮಾಲ್‌ಗಳು, ಚಿತ್ರಮಂದಿರದಂತಹ ತಾಣಗಳ ಪ್ರವೇಶಕ್ಕೂ ಲಸಿಕೆಯ ಎರಡು ಡೋಸ್ ಪಡೆದಿರಬೇಕು ಎಂಬ ನಿಯಮ ರೂಪಿಸಲಾಗಿದೆ.

ಓಮೈಕ್ರಾನ್‌ ಪ್ರಸರಣ ತಡೆಗೆ ಜರ್ಮನಿ ಸೇರಿದಂತೆ ಕೆಲ ದೇಶಗಳಲ್ಲಿ ಸಾರ್ವಜನಿಕ ಸ್ಥಳಗಳೂ ಸೇರಿದಂತೆ ಕೆಲವು ತಾಣಗಳ ಪ್ರವೇಶಕ್ಕೆ ಈಗಾಗಲೇ ಲಸಿಕೆಯ ಎರಡು ಡೋಸ್‌ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ವಾರದಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವುದರಿಂದ ರಾಜ್ಯದಲ್ಲೂ ಇದನ್ನು ಜಾರಿಗೊಳಿಸಬೇಕೆಂದು ಸರ್ಕಾರ ರಚಿಸಿದ ತಜ್ಞರ ಸಮಿತಿಯೂ ಸಲಹೆ ನೀಡಿದೆ. ಸಮಿತಿ ವರದಿ ಪ್ರಕಾರ ರಾಜ್ಯದಲ್ಲಿ 4.64 ಕೋಟಿ ಮಂದಿ 18 ವರ್ಷ ಮೇಲ್ಪಟ್ಟವರಿದ್ದಾರೆ.

7.98 ಲಕ್ಷ ಮಂದಿ ಹೊರಗೆ:ರಾಜ್ಯದಲ್ಲಿ 4.56 ಕೋಟಿ ಮಂದಿ ಈವರೆಗೆ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಅವರಲ್ಲಿ 3.15 ಕೋಟಿ ಮಂದಿ ಎರಡೂ ಡೋಸ್ ಹಾಕಿಸಿಕೊಂಡಿದ್ದಾರೆ. 18 ವರ್ಷ ಮೇಲ್ಪಟ್ಟವರಲ್ಲಿ 7.98 ಲಕ್ಷ ಮಂದಿ ಲಸಿಕೆ ಹಾಕಿಸಿಕೊಂಡಿಲ್ಲ. 1.40 ಕೋಟಿ ಮಂದಿ ಎರಡನೇ ಡೋಸ್ ಪಡೆದಿಲ್ಲ. ಅವರಿಗೆ ಮಾಲ್‌ಗಳು, ಚಿತ್ರಮಂದಿರ ಸೇರಿದಂತೆ ವಿವಿಧೆಡೆ ಪ್ರವೇಶ ನೀಡಲು ನಿರ್ಬಂಧ ಅಡ್ಡಿಯಾಗಿದೆ.

ರಾಜ್ಯದಲ್ಲಿ 2.38 ಕೋಟಿಗೂ ಅಧಿಕ ಮಂದಿ 18 ವರ್ಷದೊಳಗಿನವರಿದ್ದಾರೆ. ಇವರಿಗೆ ಲಸಿಕೆ ವಿತರಣೆ ಪ್ರಾರಂಭವಾಗಿಲ್ಲ. ಹೀಗಾಗಿ, ಮೂರನೇ ಅಲೆ ಕಾಣಿಸಿಕೊಂಡಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುವ ಬಗ್ಗೆಯೂ ತಜ್ಞರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಸಂಭಾವ್ಯ ಕೋವಿಡ್ ಮೂರನೇ ಅಲೆಯ ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷೆ ಹಾಗೂ ಲಸಿಕೆಗೆ ಆದ್ಯತೆ ನೀಡಲಾಗಿದೆ. 18 ವರ್ಷಗಳು ಮೇಲ್ಪಟ್ಟವರಲ್ಲಿ ಶೇ 93 ರಷ್ಟು ಮಂದಿ ಮೊದಲ ಡೋಸ್ ಹಾಗೂ ಶೇ 63 ರಷ್ಟು ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ವೈರಾಣುವಿನ ವಿರುದ್ಧ ಹೋರಾಡಲು ಪ್ರತಿಯೊಬ್ಬರೂ ಎರಡೂ ಡೋಸ್ ಪಡೆದುಕೊಳ್ಳಬೇಕು‌. ಲಸಿಕೆ ಕಡ್ಡಾಯಗೊಳಿಸಬೇಕೆಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಶಿಫಾರಸು ಮಾಡಿದ್ದಾರೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಎರಡನೇ ಡೋಸ್‌ಗೆ ಹೆಚ್ಚಿದ ಬೇಡಿಕೆ

ಕೋವಿಡ್ ಎರಡನೇ ಅಲೆಯು ನಿಯಂತ್ರಣಕ್ಕೆ ಬಂದ ಬಳಿಕ ಹಲವರು ಅವಧಿ ಮುಗಿದ್ದಿದ್ದರೂ ಎರಡನೇ ಡೋಸ್ ಪಡೆದಿರಲಿಲ್ಲ. ರಾಜ್ಯದಲ್ಲಿ ಓಮೈಕ್ರಾನ್ ಪತ್ತೆಯಾದ ಬಳಿಕ ಹಾಗೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ ನಂತರ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದುಕೊಳ್ಳುವವರ ಸಂಖ್ಯೆ ಅಧಿಕಗೊಂಡಿದೆ. ಎರಡು ವಾರದಿಂದ ಪ‍್ರತಿನಿತ್ಯ ಸರಾಸರಿ 5 ಲಕ್ಷ ಡೋಸ್‌ ಲಸಿಕೆ ವಿತರಿಸಲಾಗುತ್ತಿದೆ. 4,500ಕ್ಕೂ ಅಧಿಕ ಕೇಂದ್ರಗಳಲ್ಲಿ ಲಸಿಕೆ
ಒದಗಿಸಲಾಗುತ್ತಿದೆ.

18 ರಿಂದ 44 ವರ್ಷದೊಳಗಿನವರಲ್ಲಿ 2.60 ಕೋಟಿ ಮಂದಿ ಕೋವಿಡ್‌ ಲಸಿಕೆಯ ಮೊದಲ ಡೋಸ್ ಹಾಗೂ 1.61 ಕೋಟಿ ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. 45 ವರ್ಷ ಮೇಲ್ಪಟ್ಟವರಲ್ಲಿ 1.79 ಕೋಟಿ ಮಂದಿ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ. ಅವರಲ್ಲಿ 1.38 ಕೋಟಿ ಮಂದಿ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT