ಸೋಮವಾರ, ಜನವರಿ 17, 2022
20 °C

ಭ್ರಷ್ಟಾಚಾರ ನಿಯಂತ್ರಣಕ್ಕೆ ಮಾಡಿರುವುದೇನು: ಡಿ.ಕೆಂಪಣ್ಣ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತಾವು ಸಚಿವರಾಗಿ ನಿರ್ವಹಣೆ ಮಾಡಿದ ಇಲಾಖೆಗಳಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳೇನು ಎಂಬುದರ ಮಾಹಿತಿಯನ್ನು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಬಹಿರಂಗಪಡಿಸಲಿ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಒತ್ತಾಯಿಸಿದ್ದಾರೆ.

ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಶೇಕಡ 40ರಷ್ಟು ಕಮಿಷನ್‌, ಶೇ 20ರಷ್ಟು ತೆರಿಗೆ ಪಾವತಿಸಿ, ಶೇ 40ರಷ್ಟು  ಮೊತ್ತದಲ್ಲಿ ಕೆಲಸ ಮಾಡಿದ ಗುತ್ತಿಗೆದಾರರು ಯಾರು ಎಂದು ಸಚಿವರು ಪ್ರಶ್ನಿಸಿದ್ದಾರೆ. ಶೇ 40ರಷ್ಟು ಕಮಿಷನ್‌ ಪಡೆದು ಕೆಲಸ ಮಾಡಿಸಿಕೊಳ್ಳುತ್ತಿರುವವರು ಯಾರು ಎಂದು ಅವರು ಪ್ರಶ್ನಿಸಿದ್ದರೆ ಲೋಕಕ್ಕೆ ಉಪಯೋಗವಾಗುತ್ತಿತ್ತು’ ಎಂದಿದ್ದಾರೆ.

ಸಚಿವರು ತಮ್ಮ ಇಲಾಖೆಯಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದರೆ ತಿಳಿಸಲಿ. ತಮಿಳುನಾಡು ಮಾದರಿಯಲ್ಲಿ ಪ್ಯಾಕೇಜ್‌ ಟೆಂಡರ್‌ ರದ್ದುಪಡಿಸಿದ್ದರೆ ಹೇಳಲಿ. ಅವರಿಗೆ ಸಂಪೂರ್ಣ ಸಹಕಾರ ನೀಡಲು ಗುತ್ತಿಗೆದಾರರ ಸಂಘ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

‘ಭ್ರಷ್ಟಾಚಾರದ ವಿಷಯದಲ್ಲಿ ನಾವು ಈಗಿನ ಸರ್ಕಾರದ ವಿರುದ್ಧ ಮಾತ್ರ ಆರೋಪ ಮಾಡಿಲ್ಲ. ಹಿಂದೆಯೂ ಭ್ರಷ್ಟಾಚಾರ ಇತ್ತು. ಎಲ್ಲ ಪಕ್ಷಗಳ ಸರ್ಕಾರಗಳು ಇದ್ದಾಗಲೂ ಇತ್ತು. ಹಲವು ವರ್ಷಗಳಿಂದ ಪರಿಸ್ಥಿತಿ ಹದಗೆಡುತ್ತಾ ಬಂದಿದೆ. ಈ ಕುರಿತು ಪ್ರಧಾನಿಯವರಿಗೆ ದೂರು ನೀಡಿದ್ದೇವೆ. ಅವರನ್ನು ಖುದ್ದಾಗಿ ಭೇಟಿಮಾಡಿ ಅಹವಾಲು ಹೇಳಲು ಪ್ರಯತ್ನಿಸುತ್ತೇವೆ. ಬಿಜೆಪಿ ವರಿಷ್ಠರಿಗೂ ದೂರು ನೀಡುತ್ತೇವೆ’ ಎಂದು ಕೆಂಪಣ್ಣ ಹೇಳಿದ್ದಾರೆ.

ಗುತ್ತಿಗೆದಾರರ ಸಂಘದಲ್ಲಿ ಕೇವಲ 800 ಸದಸ್ಯರಿದ್ದಾರೆ ಎಂದು ಕಾರಜೋಳ ತಪ್ಪು ಮಾಹಿತಿ ನೀಡಿದ್ದಾರೆ. ಸಂಘವು ಒಂದು ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಸ್ವಾತಂತ್ರ್ಯ ಪೂರ್ವದಲ್ಲೇ ಸಂಘ ಅಸ್ತಿತ್ವಕ್ಕೆ ಬಂದಿತ್ತು. ಸ್ವಾತಂತ್ರ್ಯ ಹೋರಾಟಗಾರರಾದ ಅರಕಲಗೂಡು ವೆಂಕಟರಾಮಯ್ಯ ಈ ಸಂಘದ ಸಂಸ್ಥಾಪಕರು. ರಾಜ್ಯದಲ್ಲಿ ನಿರ್ಮಾಣ ಕಾಮಗಾರಿ ಗುತ್ತಿಗೆಯಲ್ಲಿ ತೊಡಗಿರುವ ಎಲ್ಲರೂ ಸಂಘದ ಸದಸ್ಯರಾಗಿದ್ದಾರೆ ಎಂಬುದನ್ನು ಸಚಿವರು ಅರಿಯಬೇಕು ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು