ಶನಿವಾರ, ಮಾರ್ಚ್ 6, 2021
32 °C
ಕನ್ನಡಪರ ಸಂಘಟನೆಗಳ ಕಾರ್ಯಕರ್ತರ ಕಾವಲು

ಬೆಳಗಾವಿ: ಕನ್ನಡ ಬಾವುಟ ತೆರವಿಗೆ ಗಡುವು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಎದುರು ಹಾರಿಸಿರುವ ಕನ್ನಡ ಬಾವುಟವನ್ನು ಯಾವುದೇ ಕಾರಣಕ್ಕೂ ತೆಗೆಯಬಾರದೆಂದು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹಗಲು ರಾತ್ರಿ ಎನ್ನದೇ ಕಾವಲು ನೀಡುತ್ತಿದ್ದರೆ ಮತ್ತೊಂದೆಡೆ, ಮಹಾರಾಷ್ಟ್ರ ಏಕೀಕರಣ ಯುವ ಸಮಿತಿಯವರು ಈ ಬಾವುಟವನ್ನು ಡಿ. 31ರೊಳಗೆ ತೆರವುಗೊಳಿಸಬೇಕು ಎಂದು ಮಂಗಳವಾರ ನಗರ ಪೊಲೀಸ್‌ ಆಯುಕ್ತರಿಗೆ ಗಡುವು ನೀಡಿದ್ದಾರೆ.

ಹಲವು ವರ್ಷಗಳ ಹೋರಾಟದ ನಂತರ, ಪಾಲಿಕೆ ಕಚೇರಿ ಎದುರು ಸೋಮವಾರ ದಿಢೀರನೆ ಕಂಬ ನೆಟ್ಟು, ಕನ್ನಡ ಬಾವುಟ ಹಾರಿಸಲಾಗಿತ್ತು. ಈ ಹಿಂದೆ ಕನ್ನಡ ಬಾವುಟ ಹಾರಿಸಿದ್ದಾಗ ಹಿಂದೆಯೇ ಪೊಲೀಸರು ತೆರವುಗೊಳಿಸಿದ್ದರು. ಈಗಲೂ ತೆರವುಗೊಳಿಸಬಹುದೆಂದು ಕನ್ನಡ ಪರ ಹೋರಾಟಗಾರರು ಕಂಬ ಹಾಗೂ ಬಾವುಟಕ್ಕೆ ಕಾವಲು ನೀಡಿದರು. ಕೊರೆವ ಚಳಿಯಲ್ಲೂ ಅಹೋರಾತ್ರಿ ಮಲಗಿದ್ದರು. ‘ಧ್ವಜಸ್ತಂಭ ತೆರವುಗೊಳಿಸಬಾರದು’ ಎಂದು ಒತ್ತಾಯಿಸಿದ್ದರು.

ಎಂಇಎಸ್‌ ತಗಾದೆ: ‘ಮಹಾನಗರ ಪಾಲಿಕೆ ಕಚೇರಿ ಬಳಿ ಸೇರಿದಂತೆ ನಗರದ ರೈಲು ನಿಲ್ದಾಣ, ಪ್ರಾದೇಶಿಕ ಆಯುಕ್ತರ ಕಚೇರಿಯ ಬಳಿ ಕಾನೂನುಬಾಹಿರವಾಗಿ ಹಳದಿ– ಕೆಂಪು ಬಣ್ಣದ ಧ್ವಜ ಹಾರಿಸಲಾಗಿದೆ. ಈ ಧ್ವಜಕ್ಕೆ ಮಾನ್ಯತೆ ಸಿಕ್ಕಿಲ್ಲ.
ರಾಷ್ಟ್ರಧ್ವಜದ ಎದುರು ಹಾರಿಸಿ, ರಾಷ್ಟ್ರೀಯ ಭಾವೈಕ್ಯಕ್ಕೆ ಧಕ್ಕೆ ತರಲಾಗಿದೆ. ಬಾವುಟ ಹಾರಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮಹಾರಾಷ್ಟ್ರ ಏಕೀಕರಣ ಯುವಸಮಿತಿಯ ಸದಸ್ಯರು ಪೊಲೀಸ್‌ ಆಯುಕ್ತರಿಗೆ ದೂರು ನೀಡಿದರು.

‘ಪಾಲಿಕೆ ಎದುರಿನ ಕನ್ನಡ ಬಾವುಟವನ್ನು ಡಿ. 31ರೊಳಗೆ ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಾವು ಅಲ್ಲಿ ಭಗವಾಧ್ವಜ ಹಾಕಬೇಕಾಗುತ್ತದೆ’ ಎಂದು ಸವಾಲು ಹಾಕಿದರು.

ಬಾವುಟ ಹಾರಿಸುವ ಸ್ತಂಭಕ್ಕೆ ಧಕ್ಕೆ
ರಾಣಿ ಚನ್ನಮ್ಮ ವೃತ್ತದ ಪ್ರತಿಮೆ ಬಳಿ ಕನ್ನಡ ಬಾವುಟ ಹಾರಿಸಲು ಇದ್ದ ಸ್ತಂಭ ಮುರಿದಿರುವುದು ಹಾಗೂ ಆ ಜಾಗದಲ್ಲಿ ಚಿಕ್ಕ ಕಂಬ ಹಾಕಿರುವುದಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು. ಕಿಡಿಗೇಡಿಗಳೇ ಇದನ್ನು ಮಾಡಿರಬಹುದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದವು.

‘ವೃತ್ತದ ಬಳಿಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕಬ್ಬಿನ ಲಾರಿ ಸಾಗುವಾಗ ವೈರ್‌ ತಗುಲಿ ಕನ್ನಡ ಬಾವುಟವಿದ್ದ ಕಂಬ ಮುರಿದುಬಿದ್ದಿರುವುದು ಗೊತ್ತಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು. ದೃಶ್ಯಾವಳಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಯಿತು. ಇದರೊಂದಿಗೆ ಗೊಂದಲ ಬಗೆಹರಿಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು