ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಆನ್‌ಲೈನ್‌ ಜೂಜು ನಿಷೇಧ: ಕಾಯ್ದೆ ತಿದ್ದುಪಡಿಗೆ ಅನುಮೋದನೆ

Last Updated 4 ಸೆಪ್ಟೆಂಬರ್ 2021, 17:14 IST
ಅಕ್ಷರ ಗಾತ್ರ

ಬೆಂಗಳೂರು: ಹಣವನ್ನು ಪಣವಾಗಿಟ್ಟು ನಡೆಸುವ ಎಲ್ಲ ಬಗೆಯ ಆನ್‌ಲೈನ್‌ ಜೂಜನ್ನು ನಿಷೇಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದಕ್ಕೆ, ಪೂರಕವಾಗಿ ಕರ್ನಾಟಕ ಪೊಲೀಸ್‌ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಶನಿವಾರ ಒಪ್ಪಿಗೆ ನೀಡಿದೆ.

ಆನ್‌ಲೈನ್‌ ಜೂಜಾಟಕ್ಕೆ ವೇದಿಕೆ ಕಲ್ಪಿಸುವವರು ಮತ್ತು ಜೂಜಿನಲ್ಲಿ ತೊಡಗುವವರ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ನಿರ್ದಿಷ್ಟವಾದ ಕಾನೂನುಗಳು ಇಲ್ಲ. ಈ ವಿಷಯವನ್ನು ಕರ್ನಾಟಕ ಪೊಲೀಸ್ ಕಾಯ್ದೆಯ ವ್ಯಾಪ್ತಿಗೆ ತಂದು, ದಂಡ ಮತ್ತು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಪ್ರಸ್ತಾವಕ್ಕೆ ಸಭೆ ಅಂಗೀಕಾರ ನೀಡಿದೆ.

ಸಭೆಯ ಬಳಿಕ ವಿವರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ‘ಆನ್‌ಲೈನ್‌ ಜೂಜು ನಿಷೇಧಿಸುವಂತೆ ಕೋರಿರುವ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಹೈಕೋರ್ಟ್‌ ಸೂಚನೆಗೆ ಪೂರಕವಾಗಿ ಕರ್ನಾಟಕ ಪೊಲೀಸ್‌ ಕಾಯ್ದೆಗೆ ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ’ ಎಂದರು.

ಆನ್‌ಲೈನ್‌ ಮೂಲಕ ಹಣವನ್ನು ಪಣವಾಗಿಟ್ಟು ಆಡುವ ಎಲ್ಲ ಬಗೆಯ ಆಟಗಳನ್ನೂ ಆನ್‌ಲೈನ್‌ ಜೂಜು ಎಂದು ಪರಿಗಣಿಸಲಾಗುವುದು ಎಂದರು.

ನೇರವಾಗಿ ಹಣ, ವರ್ಚ್ಯುಯಲ್‌ ಕರೆನ್ಸಿ, ಡಿಜಿಟಲ್‌ ಕರೆನ್ಸಿ, ಪಾಯಿಂಟ್ಸ್‌ ರೂಪದಲ್ಲಿರುವ ನಗದು ಸೇರಿದಂತೆ ಯಾವುದೇ ಸ್ವರೂಪದಲ್ಲಿ ಹಣವನ್ನು ಪಣವಾಗಿರಿಸಿ ಜೂಜಾಡುವುದರ ವಿರುದ್ಧ ಕರ್ನಾಟಕ ಪೊಲೀಸ್‌ ಕಾಯ್ದೆಯಡಿ ಕ್ರಮ ಜರುಗಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

ಕಂಪ್ಯೂಟರ್‌, ಮೊಬೈಲ್‌ ಅಪ್ಲಿಕೇಷನ್‌, ವರ್ಚ್ಯುಯಲ್‌ ವೇದಿಕೆ ಸೇರಿದಂತೆ ಇಂಟರ್‌ನೆಟ್‌ ಸೌಲಭ್ಯ ಬಳಸಿಕೊಂಡು ನಡೆಸುವ ಎಲ್ಲ ಬಗೆಯ ಜೂಜಾಟಗಳನ್ನೂ ಪೊಲೀಸ್‌ ಕಾಯ್ದೆಯ ವ್ಯಾಪ್ತಿಗೆ ತರಲಾಗುವುದು. ಆನ್‌ಲೈನ್‌ ಜೂಜಾಟಕ್ಕೆ ವೇದಿಕೆ ಕಲ್ಪಿಸುವವರು ರಾಜ್ಯದ ಒಳಗೆ ಅಥವಾ ಹೊರಗೆ ಯಾವುದೇ ಭಾಗದಲ್ಲಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲು ಕಾಯ್ದೆ ತಿದ್ದುಪಡಿಯಿಂದ ಅವಕಾಶವಾಗಲಿದೆ.ಇದೇ 13ರಿಂದ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಿ, ಅಂಗೀಕಾರ ಪಡೆಯಲಾಗುವುದು ಎಂದರು.

ಆನ್‌ಲೈನ್‌ ಜೂಜು ನಿಷೇಧಿಸುವಂತೆ ಕೋರಿ ದಾವಣಗೆರೆಯ ಡಿ.ಎಸ್‌. ಶಾರದಾ ಎಂಬುವವರು 2020ರ ನವೆಂಬರ್‌ನಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆನ್‌ಲೈನ್‌ ಜೂಜು ನಿಷೇಧಿಸಲು ಸಂಪುಟ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನದ ವಿವರ ಸಲ್ಲಿಸುವಂತೆ ನ್ಯಾಯಾಲಯ ಈ ಹಿಂದೆ ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT