ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟನ್ ಕಬ್ಬಿಗೆ ₹ 3,500 ನಿಗದಿಗೆ ಆಗ್ರಹ: ಜುಲೈ 5ರಂದು ರಾಜ್ಯದಾದ್ಯಂತ ಪ್ರತಿಭಟನೆ

Last Updated 2 ಜುಲೈ 2022, 9:59 IST
ಅಕ್ಷರ ಗಾತ್ರ

ಮೈಸೂರು: ‘ಪ್ರಸಕ್ತ ಸಾಲಿನಲ್ಲಿ ಕಬ್ಬಿನ ದರ ನಿಗದಿಗೆ ಸರ್ಕಾರವನ್ನು ಆಗ್ರಹಿಸಿ ಜುಲೈ 4ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಮತ್ತು ಜುಲೈ 5ರಂದು ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ನಡೆಸಲಾಗುವುದು’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದರು.

‘ರಸಗೊಬ್ಬರ, ಬೀಜ, ಡೀಸೆಲ್, ಕಟಾವು ಕೂಲಿ, ಸಾಗಣೆ ವೆಚ್ಚ ಏರಿಕೆಯಾಗಿರುವುದನ್ನು ‍‍‍‍ಪರಿಗಣಿಸಿ ಕಬ್ಬಿನ ದರ ನಿಗದಿಪಡಿಸಬೇಕು. ಉತ್ತರಪ್ರದೇಶದಲ್ಲಿ ರಾಜ್ಯ ಸಲಹಾ ಬೆಲೆಯನ್ನು ಟನ್‌ಗೆ ₹ 3,500 ನಿಗದಿಪಡಿಸಲಾಗಿದ್ದು, ಆ ಮಾನದಂಡವನ್ನು ಇಲ್ಲೂ ಅನುಸರಿಸಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಒತ್ತಾಯಿಸಿದರು.

‘ಕಬ್ಬು ಕಟಾವು ಮತ್ತು ಸಾಗಾಣಿಕೆ ದರದಲ್ಲಿ ಮಾಡಲಾಗುತ್ತಿರುವ ಶೋಷಣೆ ನಿಯಂತ್ರಿಸಬೇಕು’ ಎಂದು ಆಗ್ರಹಿಸಿದರು.

‘ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಇನ್ನೂ ₹ 300 ಕೋಟಿಯಷ್ಟು ಎಫ್‌ಆರ್‌ಪಿ ಬಾಕಿ ಇದೆ. ಅದನ್ನು ಕಾನೂನು ಪ್ರಕಾರ ಶೇ 15ರಷ್ಟು ಬಡ್ಡಿ ಸೇರಿಸಿ ತಕ್ಷಣವೇ ಕೊಡಿಸಬೇಕು. ಪ್ರಸಕ್ತ ಸಾಲಿನಲ್ಲಿ ಕಬ್ಬಿನ ಇಳುವರಿ ಹಾಗೂ ಪ್ರದೇಶ ಏರಿಕೆಯಾಗಿದ್ದು, ಈಗಾಗಲೇ ಕಬ್ಬು ನುರಿಸುವ ಕಾರ್ಯ ದಕ್ಷಿಣ ಕರ್ನಾಟಕದಲ್ಲಿ ಆರಂಭವಾಗಿದೆ. ದರ ನಿಗದಿ ವಿಳಂಬವಾಗುವುದರಿಂದ ಕಾರ್ಖಾನೆಗಳು ರೈತರಿಗೆ ಹಣ ಪಾವತಿಸುವುದೂ ವಿಳಂಬವಾಗುತ್ತದೆ. ಹೀಗಾಗಿ, ತುರ್ತಾಗಿ ಕ್ರಮ ಕೈಗೊಳ್ಳಬೇಕು. ಎಸ್‌ಎಪಿ ಕಾಯ್ದೆ ಪ್ರಕಾರ ಬೆಲೆ ನಿಗದಿಗೆ ಅವಕಾಶವಿದೆ ಎನ್ನುವುದನ್ನು ಸರ್ಕಾರ ಮನಗಾಣಬೇಕು’ ಎಂದರು.

‘ಸಕ್ಕರೆ ಕಾರ್ಖಾನೆಯವರು ಯಾವುದೇ ಮಾನದಂಡವಿಲ್ಲದೆ, ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚವನ್ನು ರೈತರ ಹಣದಿಂದ ಪ್ರತಿ ವರ್ಷವೂ ಕಡಿತಗೊಳಿಸುತ್ತಿದ್ದಾರೆ. ಇದು ಶೋಷಣೆಯಾಗಿದೆ. ಕಟಾವು ಕೂಲಿಕಾರರನ್ನು ತಾವೇ ಮುಂಗಡ ನೀಡಿ ಕರೆತರುತ್ತಾರೆ. ಅಂತೆಯೇ ಲಾರಿ ಮತ್ತು ಟ್ಯಾಕ್ಟರ್‌ಗಳನ್ನು ಕಾರ್ಖಾನೆಯಿಂದ ಗುತ್ತಿಗೆ ಒಪ್ಪಂದ ಮಾಡಿಕೊಂಡು ಸಾಗಣೆ ಮಾಡಿಸಿಕೊಳ್ಳುತ್ತಿದ್ದಾರೆ. ಇದರ ಸಂಪೂರ್ಣ ಉಸ್ತುವಾರಿ–ನಿಯಂತ್ರಣ ವ್ಯವಸ್ಥೆ ಕಾರ್ಖಾನೆ ಮಾಲೀಕರ ಕೈಯಲ್ಲಿರುತ್ತದೆ. ಆದ್ದರಿಂದ ಎಫ್‌ಆರ್‌ಪಿ ದರವನ್ನು ‘ರೈತರ ಹೊಲದಲ್ಲಿನ ದರ’ ಎಂದು ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ಆಕಸ್ಮಿಕ ಬೆಂಕಿ ಅಪಘಾತದಲ್ಲಿ ಕಬ್ಬು ಸುಟ್ಟಾಗ ಕಾರ್ಖಾನೆಗಳು ಕಟಾವು ಮಾಡಿ ಅರೆಯುತ್ತವೆ. ಆದರೆ, ಶೇ 25ರಷ್ಟು ದರ ಕಡಿತಗೊಳಿಸುತ್ತವೆ. ಇದು ಅವೈಜ್ಞಾನಿಕವಾಗಿದ್ದು, ತಪ್ಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಹತ್ತಳ್ಳಿ ದೇವರಾಜ್, ಕಿರಗಸೂರು ಶಂಕರ್, ಬರಡನಪುರ ನಾಗರಾಜ್, ಕೆಂಡಗಣ್ಣಸ್ವಾಮಿ, ಲಕ್ಷ್ಮೀಪುರ ವೆಂಕಟೇಶ್, ದೇವಮಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT