ಸೋಮವಾರ, ಮಾರ್ಚ್ 27, 2023
33 °C

ರಾಜ್ಯದಲ್ಲಿ ಡೆಂಗಿ ಉಲ್ಬಣ: 20 ದಿನಗಳಲ್ಲಿ 1,172 ಮಂದಿಗೆ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹವಾಮಾನದಲ್ಲಿ ವೈಪರೀತ್ಯ ಹಾಗೂ ಮಳೆಯಿಂದಾಗಿ ರಾಜ್ಯದಲ್ಲಿ ಡೆಂಗಿ ಪೀಡಿತರ ಸಂಖ್ಯೆ ಉಲ್ಬಣಗೊಂಡಿದ್ದು, ಕಳೆದ 20 ದಿನಗಳಲ್ಲಿ 1,172 ಪ್ರಕರಣಗಳು ದೃಢಪಟ್ಟಿವೆ. 

ಕಳೆದೊಂದು ತಿಂಗಳಿನಿಂದ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದಿದೆ. ಈವರೆಗೆ ಡೆಂಗಿ ಪೀಡಿತರಾದವರ ಒಟ್ಟು ಸಂಖ್ಯೆ 3,714ಕ್ಕೆ ಏರಿಕೆಯಾಗಿದೆ. ಯಾವುದೇ ಮರಣ ಪ್ರಕರಣ ವರದಿಯಾಗಿಲ್ಲ. ಕಳೆದ ವರ್ಷ ಈ ವೇಳೆ 1,502 ಡೆಂಗಿ ಪ್ರಕರಣಗಳು ದೃಢಪಟ್ಟಿದ್ದವು.

ಈ ವರ್ಷ 69 ಸಾವಿರಕ್ಕೂ ಅಧಿಕ ಡೆಂಗಿ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 29 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 26,827 ಮಂದಿಯಲ್ಲಿ ಡೆಂಗಿ ಶಂಕೆ ವ್ಯಕ್ತವಾಗಿದ್ದು, 723 ಮಂದಿಯಲ್ಲಿ ಈ ಜ್ವರ ದೃಢಪಟ್ಟಿದೆ. 388 ಪ್ರಕರಣಗಳು 7 ತಿಂಗಳಲ್ಲಿ ವರದಿಯಾದರೇ, ನಂತರದ 20 ದಿನಗಳಲ್ಲಿ 335 ಮಂದಿ ಡೆಂಗಿ ಪೀಡಿತರಾಗಿದ್ದಾರೆ. 

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಪ್ರಕರಣಗಳ ಸಂಖ್ಯೆ 10 ಜಿಲ್ಲೆಗಳಲ್ಲಿ ಮೂರಂಕಿ, 18 ಜಿಲ್ಲೆಗಳಲ್ಲಿ ಎರಡಂಕಿಯಲ್ಲಿದೆ. ಉಡುಪಿಯಲ್ಲಿ 369, ಮೈಸೂರಿನಲ್ಲಿ 349, ದಕ್ಷಿಣ ಕನ್ನಡದಲ್ಲಿ 189, ಶಿವಮೊಗ್ಗದಲ್ಲಿ 172, ಚಿತ್ರದುರ್ಗದಲ್ಲಿ 168, ಹಾಸನದಲ್ಲಿ 132, ವಿಜಯಪುರದಲ್ಲಿ 125, ದಾವಣಗೆರೆಯಲ್ಲಿ 119, ಕಲಬುರ್ಗಿಯಲ್ಲಿ 105, ಬೆಳಗಾವಿಯಲ್ಲಿ 103 ಹಾಗೂ ಕೊಪ್ಪಳದಲ್ಲಿ 101 ಪ್ರಕರಣಗಳು ದೃಢಪಟ್ಟಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 100ಕ್ಕಿಂತ ಕಡಿಮೆ ಇವೆ. 2021ರಲ್ಲಿ 7,189 ಮಂದಿ ಡೆಂಗಿ ಪೀಡಿತರಾಗಿದ್ದರು. ಅವರಲ್ಲಿ ಐವರು ಮೃತಪಟ್ಟಿದ್ದರು.

857 ಮಂದಿಗೆ ಚಿಕೂನ್‌ಗುನ್ಯಾ: 28 ಜಿಲ್ಲೆಗಳಲ್ಲಿ ಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ. 23 ಸಾವಿರಕ್ಕೂ ಅಧಿಕ ಮಂದಿ ಚಿಕೂನ್‌ಗುನ್ಯಾ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 13 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ 857 ಮಂದಿ ಈ ಜ್ವರಕ್ಕೆ ಒಳಗಾಗಿರುವುದು ದೃಢಪಟ್ಟಿದೆ. 

ವಿಜಯಪುರದಲ್ಲಿ 147, ಕೋಲಾರದಲ್ಲಿ 112, ಹಾಸನದಲ್ಲಿ 71, ಬೆಂಗಳೂರು ಗ್ರಾಮಾಂತರದಲ್ಲಿ 56, ಚಿತ್ರದುರ್ಗದಲ್ಲಿ 51 ಹಾಗೂ ತುಮಕೂರಿನಲ್ಲಿ 49 ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 40ಕ್ಕಿಂತ ಕಡಿಮೆಯಿದೆ. ಯಾವುದೇ ಮರಣ ಪ್ರಕರಣ ವರದಿಯಾಗಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು