ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ: ಜನರ ಪ್ರೀತಿ, ಹಿರಿಯರ ಆಶೀರ್ವಾದ ಕೈ ಹಿಡಿದಿದೆ: ಗೋವಿಂದ ಕಾರಜೋಳ

Last Updated 25 ಜನವರಿ 2021, 9:02 IST
ಅಕ್ಷರ ಗಾತ್ರ

ಬಾಗಲಕೋಟೆ: ಕವಿ ಡಾ.ಡಿ.ವಿ.ಗುಂಡಪ್ಪಅವರ ’ಎಲ್ಲರೊಳಗೊಂದಾಗು ಮಂಕುತಿಮ್ಮ‘ ಆಶಯ ಬದುಕಿನ ಹಾದಿಯಾಗಿಸಿಕೊಂಡವರು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ. ಅದೇ ಅವರನ್ನು ನಾಡಿನ ಮುತ್ಸದ್ಧಿ ರಾಜಕಾರಣಿಯಾಗಿಸಿದೆ. ತಮ್ಮ ರಾಜಕೀಯ ಬದುಕಿನ ಸಂಕ್ರಮಣ ಕಾಲಘಟ್ಟದಲ್ಲೂ ಕೃಷ್ಣಾ ತೀರದ ಹಳ್ಳಿಗಳ ಪ್ರತೀ ಮನೆಯ ಒಬ್ಬಿಬ್ಬರನ್ನಾದರೂ ಹೆಸರಿನಿಂದ ಗುರುತಿಸಿ ಕರೆದು ಮಾತನಾಡಿಸುವಷ್ಟು ಜವಾರಿತನ ಅವರದ್ದು.

ಪಕ್ಷದ ಸಂಘಟನೆ, ಜನಪರತೆ, ಕಾರ್ಯತತ್ಪರತೆ ನಾಡಿನ ಉಪಮುಖ್ಯಮಂತ್ರಿ ಸ್ಥಾನಕ್ಕೆ ತಂದು ನಿಲ್ಲಿಸಿದೆ. ವಿಶೇಷವೆಂದರೆ ಅವರು ಈ ಹಿಂದೆ ಉದ್ಯೋಗಿಯಾಗಿದ್ದ ಲೋಕೋಪಯೋಗಿ ಇಲಾಖೆ ಚುಕ್ಕಾಣಿ ಹಿಡಿವ ಅವಕಾಶವೂ ಲಭಿಸಿದೆ.

ಜನವರಿ 25ರಂದು ಗೋವಿಂದ ಕಾರಜೋಳ ಅವರ 71ನೆಯ ಜನ್ಮದಿನ. ಈ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆ ಬಸವಕಲ್ಯಾಣದಿಂದ ‘ಪ್ರಜಾವಾಣಿ‘ಗೆ ನೀಡಿದ ಪುಟ್ಟ ಸಂದರ್ಶನದ ಸಾರ ಕೆಳಗಿನಂತಿದೆ.

ಮೂರು ದಶಕಗಳ ನಿಮ್ಮ ರಾಜಕೀಯ ಪಯಣ ಹೇಗಿತ್ತು?

ಮುಧೋಳ ಕ್ಷೇತ್ರದ ಜನರ ಪ್ರೀತಿ, ಮನೆಯಲ್ಲಿಟ್ಟುಕೊಂಡು ಅಂಬಲಿ–ಆಶ್ರಯ ನೀಡಿ ಅಕ್ಷರ ಕಲಿಸಿದ ವಿಜಯಪುರದ ಕಾಕಾ ಕಾರ್ಖನೀಸರು ಹಾಗೂ ದಿವಂಗತ ರಾಮಕೃಷ್ಣ ಹೆಗಡೆ ಅವರ ಆಶೀರ್ವಾದ ಎಲ್ಲ ಏಳು–ಬೀಳುಗಳ ನಡುವೆ ಇಲ್ಲಿಯವರೆಗೆ ಕೈಹಿಡಿದು ಕರೆತಂದಿದೆ. ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಂತಹ ಹಿರಿಯರ ಮಾರ್ಗದರ್ಶನದಲ್ಲಿ ರಾಜಕೀಯ ಪಯಣ ಸಾಗಿದೆ.

ಈ ಹಾದಿಯಲ್ಲಿ ಸಿಹಿ–ಕಹಿ ಯಾವುದರ ಪಾಲು ಹೆಚ್ಚಿದೆ?

ಎರಡರ ಸಮ್ಮಿಶ್ರಣ ನನ್ನ ರಾಜಕೀಯ ಹಾದಿಯನ್ನು ಗಟ್ಟಿಗೊಳಿಸಿದೆ. ಜನರ ಆಶೀರ್ವಾದದಿಂದ ಸಿಹಿಯ ಪಾಲು ಹೆಚ್ಚಿದೆ. ಆದರೆ, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಮಗ ಡಾ.ಗೋಪಾಲ ಸಾವು–ಬದುಕಿನ ನಡುವೆ ಹೋರಾಡುತ್ತಿದ್ದರೂ ಅದನ್ನು ಬಹಿರಂಗವಾಗಿ ಹೇಳಿಕೊಳ್ಳದೇ ಅನಗತ್ಯ ಆರೋಪಗಳಿಗೆ ತುತ್ತಾದ ಸನ್ನಿವೇಶ ಈಗಲೂ ಕಹಿಯಾಗಿ ಕಾಡುತ್ತಿದೆ.

ಕೋವಿಡ್‌ನ ಈ ಕಾಲಘಟ್ಟದಲ್ಲಿ ಇಲಾಖೆಯಲ್ಲಿ ನಿಮ್ಮ ಮುಂದಿರುವ ಸವಾಲು ಏನು?

ರಾಜ್ಯದಲ್ಲಿ ಕಳೆದ ಎರಡು ವರ್ಷಗಳ ಸತತ ಪ್ರವಾಹ ಪರಿಸ್ಥಿತಿಯಿಂದ ರಸ್ತೆ ಹಾಗೂ ಸೇತುವೆಗಳಿಗೆ ₹10,500 ಕೋಟಿಯಷ್ಟು ಹಾನಿ ಆಗಿದೆ. ಕೊರೊನಾ ದಿಂದಾಗಿ ಲೋಕೋಪಯೋಗಿ ಇಲಾಖೆಗೂ ಅನುದಾನ ಕಡಿತಗೊಂಡಿದೆ. ಕಳೆದ ವರ್ಷ ₹9500 ಕೋಟಿ ಅನುದಾನ ಇತ್ತು, ಈ ಬಾರಿ ₹7000 ಕೋಟಿ ದೊರೆತಿದೆ. ಅನುದಾನ ಹೊಂದಿಸುವುದೇ ದೊಡ್ಡ ಸವಾಲು.

ರಾಜ್ಯದಲ್ಲಿ ಸೈನಿಕ ಮಾದರಿ ಶಾಲೆ ತೆರೆಯುವ ಪ್ರಸ್ತಾವ ಎಲ್ಲಿಗೆ ಬಂತು?

ರಾಜ್ಯದಲ್ಲಿ ಐದು ಕಡೆ ಸೈನಿಕ ಮಾದರಿ ಶಾಲೆ ತೆರೆಯುವ ಪ್ರಸ್ತಾವ ಸಮಾಜ ಕಲ್ಯಾಣ ಇಲಾಖೆ ಸಚಿವನಾಗಿದ್ದಾಗ ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಸೇನಾಧಿಕಾರಿಗಳಿಂದಲೇ ಅಲ್ಲಿ ಕಲಿಯುವ ಮಕ್ಕಳಿಗೆ ತರಬೇತಿ ಕೊಡಿಸುವ ಯೋಜನೆ ಇದೆ. ಕೋವಿಡ್ ಸಂಕಷ್ಟ, ಈ ಕಾರ್ಯಕ್ಕೆಹಿನ್ನಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT