ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್ ಪಾರ್ಟಿ ಪ್ರಕರಣ: ಶಾರುಖ್‌ ಮಗ ಆರ್ಯನ್‌ ಖಾನ್‌‌ಗೆ ಧಾರವಾಡದ ವಕೀಲ

Last Updated 5 ಅಕ್ಟೋಬರ್ 2021, 13:50 IST
ಅಕ್ಷರ ಗಾತ್ರ

ಧಾರವಾಡ: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್‌ ಖಾನ್‌‌ ಪರವಾಗಿ ವಕಾಲತ್ತು ವಹಿಸಿರುವವರು ಧಾರವಾಡ ಮೂಲದ ವಕೀಲ ಸತೀಶ ಮಾನಶಿಂಧೆ.

ಈಗಾಗಲೇ ಸ್ಟಾರ್ ನಟರ ಹಲವು ಪ್ರಕರಣಗಳಲ್ಲಿ ಜಾಮೀನು ಕೊಡಿಸಿದ ಖ್ಯಾತಿ ಹೊಂದಿರುವ ಇವರು, ಇಲ್ಲಿನ ಕರ್ನಾಟಕ ಕಲಾ ಕಾಲೇಜಿನಲ್ಲಿ ಪದವಿ ಹಾಗೂ ಸರ್ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡಿದವರು. ಗದಗ ಹಾಗೂ ರೋಣದಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿತ ಇವರು ನಂತರ ವಿಜಯಪುರದ ಸೈನಿಕ್ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ.

ಸತೀಶ ಮಾನಶಿಂಧೆ
ಸತೀಶ ಮಾನಶಿಂಧೆ

ಕಾನೂನು ಪದವಿ ಹಂತದಲ್ಲಿ ನಡೆಸುವ ಅಣಕು ನ್ಯಾಯಾಲಯದಲ್ಲಿ ಸತೀಶ ಅವರು ವಾದ ಮಂಡಿಸುತ್ತಿದ್ದ ರೀತಿ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. ಅಪರಾಧಶಾಸ್ತ್ರದಲ್ಲಿ ಪರಿಣತಿ ಹೊಂದಿರುವ ಅವರು ರಾಮ್‌ ಜೇಠ್ಮಲಾನಿ ಅವರ ಬಳಿ ಹತ್ತು ವರ್ಷ ಕೆಲಸ ಮಾಡಿ ಅನುಭವ ಪಡೆದರು. ನಂತರ ಪೂರ್ಣ ಪ್ರಮಾಣದಲ್ಲಿ ವಕೀಲರಾದ ಸತೀಶ್ ಅವರು ಶಸ್ತ್ರಾಸ್ತ್ರ ಪ್ರಕರಣದಲ್ಲಿ ಬಂಧಿತರಾಗಿದ್ದ ಸಂಜಯ ದತ್, ಪಾದಚಾರಿ ಮಾರ್ಗದಲ್ಲಿ ಮಲಗಿದ್ದವರ ಮೇಲೆ ಕಾರು ಓಡಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಲ್ಮಾನ್ ಖಾನ್ ಹಾಗೂ ನಟ ಸುಶಾಂತ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ರಿಯಾ ಚಕ್ರವರ್ತಿಗೆ ಜಾಮೀನು ಕೊಡಿಸಲು ಸತೀಶ್ ಅವರೇ ವಕಾಲತ್ತು ವಹಿಸಿದ್ದರು.

ಸತೀಶ ಅವರ ಹಿರಿಯ ಸೋದರ ಕ್ಯಾಪ್ಟನ್ ಸುರೇಶ ಶಿಂಧೆ ಅವರೂ ವಿಜಯಪುರ ಸೈನಿಕ ಶಾಲೆಯ ವಿದ್ಯಾರ್ಥಿ. ಇವರ ಕಿರಿಯ ಸೋದರ ಸುನೀಲ್ ಮಾನಶಿಂಧೆ ಕಡಲು ಕಾವಲುಪಡೆಯ ಅಧಿಕಾರಿ. ಇಂದಿಗೂ ಧಾರವಾಡದ ನಂಟು ಹೊಂದಿರುವ ಅವರು ಹಳೆಯ ಸಂಬಂಧಗಳ ಕುರಿತು ಆಗಾಗ ಮೆಲುಕು ಹಾಕುತ್ತಾರೆ ಎಂದು ಅವರ ಸ್ನೇಹಿತ ಮಹೇಶ ನೆನಪಿಸಿಕೊಂಡರು.

ವಕಾಲತು ಕುರಿತು ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪತ್ರಿಕಾ ಹೇಳಿಕೆಯನ್ನು ಈಗ ನೀಡಲಾಗದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT