ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಎತ್ತಿನ ಹೊಳೆ ಯೋಜನೆಗೆ ಭೂಸ್ವಾಧೀನ ಕಂಟಕ

Last Updated 22 ಜನವರಿ 2022, 19:49 IST
ಅಕ್ಷರ ಗಾತ್ರ

ಬೆಂಗಳೂರು: ಅನುಮಾನಗಳು, ವಿರೋಧಗಳ ನಡುವೆ ಏಳು ಜಿಲ್ಲೆಗಳ 29 ತಾಲ್ಲೂಕುಗಳ 38 ಪಟ್ಟಣ ಪ್ರದೇಶಗಳು ಮತ್ತು 6,657 ಗ್ರಾಮಗಳ ಸುಮಾರು 75.59 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಆರಂಭಗೊಂಡ ಎತ್ತಿನಹೊಳೆ ಯೋಜನೆಗೆ ‘ಭೂಸ್ವಾಧೀನ’ ಪ್ರಕ್ರಿಯೆ ದೊಡ್ಡ ಕಂಟಕವಾಗಿದೆ. ಹೀಗಾಗಿ, ಯೋಜನೆ ಅನುಷ್ಠಾನ ತೆವಳುತ್ತಾ ಸಾಗಿದೆ.

ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಹೊಂಗದಹಳ್ಳ, ಕಾಡುಮನೆ ಹೊಳೆ, ಕೇರಿಹೊಳೆ ಹಳ್ಳಗಳಿಂದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜತೆಗೆ, ಮಾರ್ಗದಲ್ಲಿ ಬರುವ ಚಿಕ್ಕಮಗಳೂರು, ಹಾಸನ, ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಈ ಮಹತ್ವದ ಯೋಜನೆಯನ್ನು 2023ರ ಅಂತ್ಯದ ಒಳಗೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ.

ಯೋಜನೆಗೆ ಅಗತ್ಯವಾದ ಭೂಮಿಯನ್ನು ‘ಭೂಸ್ವಾಧೀನ ಕಾಯ್ದೆ– 2013‘ರಂತೆ ಸ್ವಾಧೀನಪಡಿಸಿಕೊಳ್ಳಲು ಕನಿಷ್ಠ 3 ವರ್ಷ ಬೇಕಾಗಿದೆ. ಹೀಗಾಗಿ, ನೇರ ಖರೀದಿ ಮೂಲಕ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿತ್ತು. ಕೆಲವು ಭೂ ಮಾಲೀಕರು ನೇರ ಖರೀದಿ ಮೂಲಕ ಭೂಮಿ ನೀಡಲು ಒಪ್ಪದ ಕಾರಣ ಈ ಕಾಯ್ದೆಯ ಪ್ರಕಾರ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಈ ಪ್ರಕ್ರಿಯೆ ವಿಳಂಬವಾಗಿದೆ. ವಿದ್ಯುತ್‌ ಕಂಬಗಳ ಸ್ಥಳಾಂತರವೂ ವಿಳಂಬವಾಗಿದೆ. ಅರಣ್ಯ ಪ್ರದೇಶದ ಭೂಸ್ವಾಧೀನಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ (ಎನ್‌ಜಿಟಿ) ಕೆಲವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಲೇವಾರಿ ಮತ್ತು ಈ ಪ್ರದೇಶವನ್ನು ಅರಣ್ಯ ಇಲಾಖೆಯಿಂದ ಯೋಜನೆ ಅನುಷ್ಠಾನಗೊಳಿಸುತ್ತಿರುವ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಹಸ್ತಾಂತರ ತಡ ಆಗಿದೆ. ಅಲ್ಲದೆ, ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನುಮತಿ ಪಡೆಯುವುದು, 2018ರ ಅತಿವೃಷ್ಟಿ, ಕೋವಿಡ್‌ ಕೂಡ ಯೋಜನೆಯ ಕಾಮಗಾರಿಗೆ ಅಡ್ಡಿಯಾಗಿದೆ.

ಎರಡು ಹಂತಗಳಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ಏತ ಕಾಮಗಾರಿಗಳು ಹಾಗೂ ವಿದ್ಯುತ್ ಪೂರೈಕೆ ಕಾಮಗಾರಿಗಳು. ಎರಡನೇ ಹಂತದಲ್ಲಿ 251 ಕಿ.ಮೀ ಉದ್ದದ ಗುರುತ್ವ ಕಾಲುವೆ ನಿರ್ಮಾಣ, ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಭೈರಗೊಂಡ್ಲು ಜಲಾಶಯ ನಿರ್ಮಾಣ, ಫೀಡರ್‌ ಕಾಲುವೆಗಳ ನಿರ್ಮಾಣ. ಮೊದಲನೇ ಹಂತದ ಕಾಮಗಾರಿಗಳು ಹಾಸನ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತಿದ್ದು, ಈ ಕೆಲಸ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಇದೇ ಮಾರ್ಚ್‌ ಒಳಗೆ ಈ ಕಾಮಗಾರಿಗಳನ್ನು ಪೂರ್ಣಗೊಳಿಸಿ ವೇದಾವತಿ ಕೊಳಕ್ಕೆ ನೀರು ಹರಿಸಲು ಉದ್ದೇಶಿಸಲಾಗಿದೆ.

ಯೋಜನೆಗೆ ಎತ್ತಿನಹೊಳೆ ಯೋಜನಾ ಪ್ರದೇಶದಲ್ಲಿ 574.37 ಎಕರೆ, ಭೈರಗೊಂಡ್ಲು ಜಲಾಶಯಕ್ಕೆ 5478.68 ಎಕರೆ, ಮುಖ್ಯ ನಾಲೆಗೆ 5,575 ಎಕರೆ, ರಾಮನಗರ ಫೀಡರ್‌ಗೆ 127.24, ಮಧುಗಿರಿ ಫೀಡರ್‌ಗೆ 234.24, ಗೌರಿಬಿದನೂರು ಫೀಡರ್‌ಗೆ 155, ಶ್ರೀನಿವಾಸಪುರ ಫೀಡರ್‌ಗೆ 306, ಕೋಲಾರ ಫೀಡರ್‌ಗೆ 252 ಎಕರೆ ಭೂಮಿ ಸೇರಿದಂತೆ ಒಟ್ಟು 12,702.46 ಎಕರೆ ಭೂಮಿ ಅಗತ್ಯವಿದೆ. ಬಹುತೇಕ ಕಡೆ ಭೂಸ್ವಾಧೀನ ಪ್ರಕ್ರಿಯೆ ಬಾಕಿಯಿದೆ.

2013ರ ವಿಧಾನಸಭೆ ಚುನಾವಣೆಗೆ ಮೊದಲೇ ಎತ್ತಿನಹೊಳೆ ಯೋಜನೆಯನ್ನು ಘೋಷಿಸಬೇಕೆಂದು ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, 2012ರಲ್ಲಿ ₹ 8,323.50 ಕೋಟಿಯ ವಿಸ್ಕೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿತ್ತು. 2014ರ ಫೆ. 17ರಂದು ಕಾಂಗ್ರೆಸ್‌ ಸರ್ಕಾರ ₹ 12,912.36 ಕೋಟಿಯ ಪರಿಷ್ಕೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು ಮೂರು ವರ್ಷಗಳ ಕಾಲಮಿತಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ಸರ್ಕಾರ ಈಗಾಗಲೇ ₹ 9,010 ಕೋಟಿ ಖರ್ಚು ಮಾಡಿದೆ. ಸದ್ಯದ ಅಂದಾಜು ಮೊತ್ತ ಇಮ್ಮಡಿಗಿಂತಲೂ ಹೆಚ್ಚು.

ಯೋಜನೆಯಂತೆ, ಆರಂಭದಲ್ಲಿ ಎಂಟು ಸ್ಥಳಗಳಲ್ಲಿ ಬ್ಯಾರೇಜ್‌ಗಳನ್ನು ನಿರ್ಮಿಸಿ ನೀರು ಹರಿಸಲಾಗುತ್ತದೆ. ಈ ಬ್ಯಾರೇಜ್‌ಗಳಿಂದ ಕಾಲುವೆಗಳ ಮೂಲಕ ಹಾಸನ ಜಿಲ್ಲೆಯ ಹರವನಹಳ್ಳಿ ಬಳಿಯ ವಿತರಣಾ ತೊಟ್ಟಿಗೆ, ಅಲ್ಲಿಂದ ಮುಂದಕ್ಕೆ ಗುರುತ್ವ ಕಾಲುವೆ ಮೂಲಕ ಭೈರಗೊಂಡ್ಲು ಜಲಾಶಯಕ್ಕೆ ನೀರನ್ನು ತಂದು, ಅಲ್ಲಿಂದ ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರಕ್ಕೆ ನೀರು ಹರಿಸಲು ಉದ್ದೇಶಿಸಲಾಗಿದೆ. ಭೈರಗೊಂಡ್ಲು ಜಲಾಶಯ ನಿರ್ಮಾಣದಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಲಕ್ಕೇನಹಳ್ಳಿ, ಗರುಡಗಲ್ಲು, ಕೊರಟಗೆರೆಯ ವೀರಸಾಗರ, ಲಕ್ಕಮುತ್ತನಹಳ್ಳಿ, ಬೆಲ್ಲದಹಳ್ಳಿ, ಸುಂಕದಹಳ್ಳಿ ಸೇರಿದಂತೆ ಒಟ್ಟು ಏಳು ಗ್ರಾಮಗಳು ಮುಳುಗಡೆ ಆಗಲಿವೆ. ಈ ಭಾಗದ ಜನರಿಗೆ ಪರಿಹಾರದ ಜತೆಗೆ ಪರ್ಯಾಯ ವ್ಯವಸ್ಥೆ ಕೂಡ ಮಾಡಿಕೊಡಬೇಕಿದೆ. ಯೋಜನೆ ಸಾಗುತ್ತಿರುವುದನ್ನು ಗಮನಿಸಿದರೆ ಪೂರ್ಣಗೊಳ್ಳಲು ಕೆಲವು ವರ್ಷಗಳೇ ಬೇಕಾಗಬಹುದು!

***

ಭೂಸ್ವಾಧೀನದ ಅಡೆತಡೆಗಳನ್ನು ನಿವಾರಿಸಿ, ಎತ್ತಿನಹೊಳೆ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ

-ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT