ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಶಾ ರವಿ ಬಂಧನ ಯುವ ಸಮುದಾಯಕ್ಕೆ ಎಚ್ಚರಿಕೆ ಗಂಟೆ: ಡಿ.ಕೆ. ಶಿವಕುಮಾರ್

Last Updated 16 ಫೆಬ್ರುವರಿ 2021, 10:37 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕದವರಾದ ದಿಶಾ ರವಿ ಅವರ ಬಂಧನ ಖಂಡನೀಯ. ಇಡೀ ಯುವ ಸಮುದಾಯಕ್ಕೆ ಇದೊಂದು ಎಚ್ಚರಿಕೆ ಗಂಟೆ. ಎಲ್ಲರ ಅಭಿಪ್ರಾಯ, ಅನಿಸಿಕೆಗಳನ್ನು ಮಟ್ಟಹಾಕಲು ಸರ್ಕಾರಗಳು ಪ್ರಯತ್ನಿಸುತ್ತಿವೆ. ಇದರ ವಿರುದ್ಧ ನಾವು ಪ್ರತಿಭಟನೆ ಮಾಡಬೇಕಿರುವುದು ಅನಿವಾರ್ಯ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ದಿಶಾ ರವಿ ಅವರ ಬಂಧನದಿಂದ ಇಡೀ ದೇಶದ ಯುವ ಸಮುದಾಯ ದಿಗ್ಭ್ರಮೆಗೆ ಒಳಗಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಾಕ್ ಸ್ವಾತಂತ್ರ್ಯ ಪ್ರಮುಖವಾದುದು. ನಮ್ಮ ಸಂವಿಧಾನ ನಮಗೆ ಈ ಸ್ವಾತಂತ್ರ್ಯ ನೀಡಿದೆ. ಯುವಕರು ತಮ್ಮ ಸ್ವಾತಂತ್ರ್ಯ ವ್ಯಕ್ತಪಡಿಸದಂತೆ ಬಾಯಿ ಮುಚ್ಚಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮುಂದಾಗಿರುವುದು ಖಂಡನೀಯ’ ಎಂದರು.

‘ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸುತ್ತಿವೆ. ಯುವಕರ ಧ್ವನಿ ಈ ದೇಶದ ಧ್ವನಿ. ಆದರೆ, ಈ ಧ್ವನಿ ದಮನಕ್ಕೆ ಸರ್ಕಾರಗಳು ಮುಂದಾಗಿವೆ. ಯುವಕರು ತಮ್ಮ ಹಕ್ಕು ರಕ್ಷಣೆಗೆ ಹೋರಾಟ ಮಾಡಬೇಕಾಗಿದೆ’ ಎಂದರು.

‘ವಾಕ್ ಸ್ವಾತಂತ್ರ್ಯ ನಿಮ್ಮ ಹಕ್ಕು. ಭಾರತದಲ್ಲಿ ನಮ್ಮ ದೊಡ್ಡ ಆಸ್ತಿ ಎಂದರೆ ಅದು ಸ್ವಾತಂತ್ರ್ಯದ ಹಕ್ಕು. ಈ ಹಕ್ಕು ಉಳಿಸಿಕೊಳ್ಳಲು ನಾವು ಹೋರಾಟ ಮಾಡಬೇಕಿದೆ ಎಂದು ಯುವಕರಿಗೆ ಸಂದೇಶ ರವಾನಿಸುತ್ತೇನೆ. ರೈತರ ಹೋರಾಟ, ಸಿಎಎ, ಎನ್ಆರ್‌ಸಿ ವಿರೋಧದ ಧ್ವನಿ ಮೊಟುಕುಗೊಳಿಸಲಾಯಿತು’ ಎಂದರು.

‘ಸರ್ಕಾರಕ್ಕೆ ನಾಯಕರುಗಳು, ರಾಜಕೀಯ ಪಕ್ಷಗಳು, ಸಾರ್ವಜನಿಕ ಸಂಘಟನೆಗಳು, ಎನ್‌ಜಿಒ, ಮಾಧ್ಯಮಗಳು ಸೇರಿದಂತೆ ಯಾರು ಬೇಕಾದರೂ ಮಾರ್ಗದರ್ಶನ ನೀಡಬಹುದು. ಇವರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಎಲ್ಲ ಯುವಕರು ಎದ್ದೇಳಬೇಕು, ಮಾಧ್ಯಮ ಸ್ನೇಹಿತರು ಕೂಡ ನಿಮ್ಮ ಸ್ವಾತಂತ್ರ್ಯ ಕಾಪಾಡಿಕೊಳ್ಳಬೇಕು. ಇದು ನಿಮ್ಮ ಜವಾಬ್ದಾರಿ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT