ಶುಕ್ರವಾರ, ಮೇ 20, 2022
26 °C

ಸರ್ಕಾರ ಮುಂದೊಂದು ದಿನ ಕೆಎಂಎಫ್‌ಗೂ ಕೊನೆ ಮೊಳೆ ಹೊಡೆಯಬಹುದು: ಡಿಕೆಶಿ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಷ್ಟದ ಕಾರಣ ಹೇಳಿ ಮುಂದೊಂದು ದಿನ ಸರ್ಕಾರ ಕೆಎಂಎಫ್‌ಗೂ (ಕರ್ನಾಟಕ ಹಾಲು ಮಹಾಮಂಡಳಿ) ಕೊನೇ ಮೊಳೆ ಹೊಡೆಯಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಶುಕ್ರವಾರ ಆತಂಕ ವ್ಯಕ್ತಪಡಿಸಿದ್ದಾರೆ.

‘ನಂದಿನಿ’ ಬ್ರ್ಯಾಂಡ್‌ನ ನಕಲಿ ಉತ್ಪನ್ನ ತಯಾರಿಕೆ ಜಾಲಗಳು ಇತ್ತೀಚೆಗೆ ಅಲ್ಲಲ್ಲಿ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಡಿಕೆಶಿ ಇಂದು ಟ್ವಿಟರ್‌ನಲ್ಲಿ ಸರ್ಕಾರವನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ.

‘ರಾಜ್ಯದ ರೈತರ ಹಿತ ಕಾಯುತ್ತಿರುವ ಸರ್ಕಾರಿ ಸ್ವಾಮ್ಯದ ನಂದಿನಿ ಹಾಲಿನ ಉತ್ಪನ್ನಗಳ ಬ್ರ್ಯಾಂಡ್‌ಗೆ ಕಳಂಕ ತರುವ ಪ್ರಯತ್ನಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಬೆಂಗಳೂರಿನಲ್ಲಿ ನಂದಿನಿ ಬ್ರ್ಯಾಂಡ್‌ನ ನಕಲಿ ತುಪ್ಪ ಮಾರಾಟ ಜಾಲ ಪತ್ತೆಯಾಗಿರುವುದು ಆತಂಕಕಾರಿ ವಿಷಯ. ಈ ಮೊದಲು ಮೈಸೂರಿನಲ್ಲಿ ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ತಯಾರಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ರಾಜ್ಯದ ನಂದಿನಿ ಬ್ರ್ಯಾಂಡ್‌ ತುಪ್ಪವು ದೇಶದಲ್ಲೇ ಖ್ಯಾತಿ ಪಡೆದಿದೆ. ಈಗಾಗಲೇ ಖಾಸಗಿ ಕಂಪನಿಗಳು, ನೆರೆ ರಾಜ್ಯದ ಹಾಲಿನ ಉತ್ಪನ್ನಗಳ ಸ್ಪರ್ಧೆಯು ಕೆಎಂಎಫ್‌ಗೆ ಸವಾಲಾಗಿದೆ. ಇದರ ನಡುವೆ ನಕಲಿ ಉತ್ಪನ್ನಗಳ ಮಾರಾಟವು ಹಾಲು ಒಕ್ಕೂಟಕ್ಕೆ ಕಂಟಕಪ್ರಾಯವಾಗಬಹುದು. ನಷ್ಟದ ಕಾರಣ ಹೇಳಿ ಒಂದು ದಿನ ಸರ್ಕಾರ ಕೆಎಂಎಫ್‌ಗೂ ಕೊನೇ ಮೊಳೆ ಹೊಡೆಯಬಹುದು’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

‘ವರ್ಗೀಸ್‌ ಕುರಿಯನ್‌ ಅವರ ಕನಸುಗಳು ರೈತರ ಭಾಗ್ಯದ ಬಾಗಿಲು ತೆರೆದವು. ನಂದಿನಿ ಬ್ರ್ಯಾಂಡ್‌ ರಕ್ಷಿಸದಿದ್ದರೆ ಅದರ ನೇರ ಪರಿಣಾಮ ಬೀರುವುದು ನಮ್ಮ ರಾಜ್ಯದ ರೈತರು, ಹೋಟೆಲ್‌ ಉದ್ಯಮ ಹಾಗೂ ಜನರ ಆರೋಗ್ಯದ ಮೇಲೆ ಎಂಬುದನ್ನು ಸರ್ಕಾರ ಯಾವುದೇ ಕಾರಣಕ್ಕೂ ಮರೆಯಬಾರದು. ಈ ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು