ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಮ್ಯಾ ರೆಡ್ಡಿ ವಿರುದ್ಧ ಎಫ್‌ಐಆರ್: ಇದು ವ್ಯವಸ್ಥಿತ ಸಂಚು ಎಂದ ಡಿಕೆಶಿ

Last Updated 23 ಜನವರಿ 2021, 11:02 IST
ಅಕ್ಷರ ಗಾತ್ರ

ಬೆಂಗಳೂರು: ‘ಶಾಸಕಿ ಸೌಮ್ಯಾ ರೆಡ್ಡಿ ರಕ್ಷಣೆಗಾಗಿ ತಮ್ಮನ್ನು ಎಳೆದಾಡುತ್ತಿದ್ದ ಪೊಲೀಸರಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಎಲ್ಲ ಮಹಿಳಾ ನಾಯಕಿಯರನ್ನು ಪೊಲೀಸರು ಎಳೆದಾಡುತ್ತಿದ್ದನ್ನು ನಾವೇ ನೋಡಿದ್ದೇವೆ. ಇನ್ನು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ. ಅವರ ಬಟ್ಟೆ ಬಿಚ್ಚಿಸಿ ದೌರ್ಜನ್ಯ ಎಸಗಿದ್ದಾರೆ. ನಾವು ಎಷ್ಟೇ ಸಹಕಾರ ಕೊಟ್ಟರೂ ವ್ಯವಸ್ಥಿತ ಸಂಚಿನಿಂದಾಗಿ ಪೊಲೀಸರು ನಮ್ಮ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರಿದರು.

ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಸೌಮ್ಯಾ ರೆಡ್ಡಿ ಮೇಲೆ ಎಫ್‌ಐಆರ್ ದಾಖಲಿಸುವ ಪೊಲೀಸರು, ಬಿಜೆಪಿ ನಾಯಕರು ಪ್ರಚೋದನಕಾರಿ ಹೇಳಿಕೆ ಕೊಟ್ಟು ಗಲಭೆಗೆ ಕಾರಣವಾದಾಗ ಸ್ವಯಂ ಪ್ರೇರಿತ ಪ್ರಕರಣ ಯಾಕೆ ದಾಖಲಿಸಲಿಲ್ಲ’ ಎಂದು ಪ್ರಶ್ನಿಸಿದ ಅವರು, ‘ಅವರ ವಿಚಾರದಲ್ಲಿ ಪೊಲೀಸರು ಹೇಡಿಗಳಂತೆ ವರ್ತಿಸಿದ್ದಾರೆ’ ಎಂದರು.

‘‍ಆರ್.ಆರ್. ನಗರ ಚುನಾವಣೆ ಸಮಯದಲ್ಲಿ ನನ್ನ ಮತ್ತು ಸಿದ್ದರಾಮಯ್ಯ ಅವರ ಮೇಲೆ ಯಾಕೆ ಪ್ರಕರಣ ಹಾಕಲಿಲ್ಲ. ಕೇವಲ ಆ ಹೆಣ್ಣು ಮಗಳ ಮೇಲೆ ಕೇಸ್ ಹಾಕಿದರು. ನೀವು ಬೇಕಾದರೆ ಸಂಪೂರ್ಣ ವಿಡಿಯೋ ನೋಡಿ’ ಎಂದರು.

‘ಸೌಮ್ಯಾ ರೆಡ್ಡಿ ಅವರನ್ನು ಬಂಧಿಸಿದರೂ ನಾವು ಅವರ ಪರ ನಿಲ್ಲುತ್ತೇವೆ. ನಮ್ಮ ಬಳಿಯೂ ಸಾಕ್ಷ್ಯಗಳಿವೆ. ನಾವು ಅದನ್ನು ಮುಂದಿಡುತ್ತೇವೆ. ಆಕೆ ಕೆಳಗೆ ಬಿದ್ದಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ನನಗೆ ಬೇರೆ ಯಾರ ಸಾಕ್ಷಿಯೂ ಬೇಡ. ಈ ಕೃತ್ಯದ ಹಿಂದೆ ಸರ್ಕಾರದ ಕೈವಾಡ ಇದೆ. ಸರ್ಕಾರ ಹೇಳದೆ ಯಾವ ಎಫ್ಐಆರ್ ಹಾಕಲು ಸಾಧ್ಯವಿಲ್ಲ. ಪೊಲೀಸರ ದಬ್ಬಾಳಿಕೆ ವೇಳೆ ಸ್ವಯಂ ರಕ್ಷಣೆ ಮಾಡಿಕೊಳ್ಳುವುದು ಆಕೆಯ ಹಕ್ಕು. ಈ ಕೇಸ್ ಬರಲಿ ನಾವು ಎದುರಿಸಲು ಸಿದ್ಧ’ ಎಂದರು.

ಬಿಜೆಪಿಯಿಂದ ಇಡೀ ದೇಶವೇ ನಿರುದ್ಯೋಗಿ: ‘ನಾವು ರಾಜ್ಯ ಹಾಗೂ ದೇಶದ ರೈತರ ಪರ ಧ್ವನಿ ಎತ್ತಿದ್ದೇವೆ. ಕೆಲವು ಸಚಿವರು ನಾವು ಅಸ್ತಿತ್ವ ಉಳಿಸಿಕೊಳ್ಳಲು ಮಾಡಿದ್ದೇವೆ, ನಾವು ನಿರುದ್ಯೋಗಿಗಳು ಎಂದಿದ್ದಾರೆ. ನಿಜ, ಬಿಜೆಪಿ ಆಡಳಿತದಲ್ಲಿ ಇಡೀ ದೇಶವೇ ನಿರುದ್ಯೋಗಿಯಾಗಿದ್ದು, ವಿರೋಧ ಪಕ್ಷವಾದ ನಾವೂ ನಿರುದ್ಯೋಗಿಗಳೇ’ ಎಂದರು.

‘ನಾವು ಮುಖ್ಯಮಂತ್ರಿಗಳಿಗೆ, ಅವರ ಪದವಿಗೆ, ಹಿರಿತನಕ್ಕೆ ಗೌರವ ನೀಡುತ್ತೇವೆ. ಇವತ್ತೂ ಗೌರವಿಸುತ್ತೇವೆ, ನಾಳೆಯೂ ಗೌರವಿಸುತ್ತೇವೆ. ಅವರ ಪ್ರಕಾರ ನಾವೆಲ್ಲ ಸತ್ತ ಕುದುರೆಗಳಂತೆ, ನಮ್ಮ ಪಕ್ಷವೇ ಇಲ್ಲ. ಇನ್ನು ಸಾಮ್ರಾಟ್ ಅಶೋಕರ ಪ್ರಕಾರ ನಾವು ನಿರುದ್ಯೋಗಿಗಳು. ಅದು ನಿಜ, ಬಿಜೆಪಿ ಆಡಳಿತದಲ್ಲಿ ದೇಶದ ಎಲ್ಲೆಡೆ ನಿರುದ್ಯೋಗ ಹೆಚ್ಚಾಗಿದ್ದು, ನಾವು ಕೂಡ ನಿರುದ್ಯೋಗಿಗಳಾಗಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ದೇಶಕ್ಕೆ ಕೊಟ್ಟ ಬಹುದೊಡ್ಡ ಬಳುವಳಿ ನಿರುದ್ಯೋಗ ಸಮಸ್ಯೆ. ಗೃಹ ಸಚಿವರು ಟ್ರಾಫಿಕ್ ಜಾಮ್ ಅಂತಾರೆ. ನಾವು ಪ್ರತಿಭಟನೆ ಮಾಡಿದ್ದು ಅಸ್ತಿತ್ವಕ್ಕೆ ಅಲ್ಲ, ರಾಜ್ಯ ಹಾಗೂ ದೇಶದ ರೈತರ ಧ್ವನಿ ಪ್ರತಿಬಿಂಬಿಸಲು’ ಎಂದು

‘ರಾಜಕಾರಣದಲ್ಲಿ ಏನು ಬೇಕಾದರೂ ಸಾಧ್ಯ. ಸಾಧ್ಯತೆಗಳ ಕಲೆ ರಾಜಕಾರಣ. ವಿಧಾನ ಪರಿಷತ್‌ನಲ್ಲಿ ಸಭಾಪತಿಗಳು ಬರುವ ಮುನ್ನ ಬಾಗಿಲು ಹಾಕಿಕೊಂಡು ಕಲಾಪ ನಡೆಸುತ್ತಾರೆ ಎಂದು ನಾವು ನಿರೀಕ್ಷಿಸಿದ್ದೆವೆ?’ ಎಂದರು.

ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ: ‘ನಾವು ರಾಜ್ಯದ ಎಲ್ಲ ವಿದ್ಯಮಾನ ಗಮನಿಸುತ್ತಿದ್ದೇವೆ. ನಮ್ಮ ಧರ್ಮೇಗೌಡರು ಆ ರೀತಿ ತೀರ್ಮಾನಕ್ಕೆ ಬರಬಾರದಿತ್ತು. ಇದರಿಂದ ಎಲ್ಲರಿಗೂ ನೋವಾಗಿದೆ. ನಾವು ಶಾಸಕಾಂಗ ಪಕ್ಷದ ಸಭೆಯಲ್ಲಿ ಆ ಸ್ಥಾನದ ಗೌರವ, ಪಕ್ಷದ ಹಿತದೃಷ್ಟಿ, ಸಮಿತಿ ನೀಡಿರುವ ವರದಿ ಗಮನದಲ್ಲಿಟ್ಟುಕೊಂಡು ಈ ಪಕ್ಷದ ತೀರ್ಮಾನ ಮಾಡುತ್ತೇವೆ' ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT