ಮಂಗಳವಾರ, ಮಾರ್ಚ್ 21, 2023
23 °C

ಸೂರ್ಯಗ್ರಹಣ: 25ರಂದು ಧರ್ಮಸ್ಥಳ ಸೇರಿ ಹಲವೆಡೆ ದೇವರ ದರ್ಶನ, ಸೇವೆಗಳಲ್ಲಿ ವ್ಯತ್ಯಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅ.25ರಂದು ಮಂಗಳವಾರ ಸಂಭವಿಸಲಿರುವ ಸೂರ್ಯಗ್ರಹಣದಿಂದಾಗಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ದೇವರ ದರ್ಶನ ಹಾಗೂ ಸೇವೆಗಳಲ್ಲಿ ವ್ಯತ್ಯಯವಾಗಲಿದೆ. 

ಉಜಿರೆ: ಅ.25ರಂದು ಸೂರ್ಯಗ್ರಹಣ ಇರುವುದರಿಂದ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಅಂದು ಮಧ್ಯಾಹ್ನ 2.30ರಿಂದ ರಾತ್ರಿ 7.30ರ ವರೆಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ದೇವಳದ ಪ್ರಕಟಣೆ ತಿಳಿಸಿದೆ.

ಕಾಸರಗೋಡು: ಸೂರ್ಯಗ್ರಹಣ ಪ್ರಯುಕ್ತ  ಅ.25ರಂದು ಕುಂಬಳೆ ಕಣಿಪುರ ಕಣಿಪುರ ಗೋಪಾಲಕೃಷ್ಣ ದೇವಾಲಯ, ಮಂಜೇಶ್ವರ ಮದನಂತೇಶ್ವರ, ಐಲ ದುರ್ಗಾಪರಮೇಶ್ವರಿ, ಬಾಯಾರು ಪಂಚಲಿಂಗೇಶ್ವರ, ಅನಂತಪುರ ಅನಂತಪದ್ಮನಾಭ, ಮುಜುಂಗಾವು ಪಾರ್ಥಸಾರಥಿ, ಅಡೂರು ಮಹಾಲಿಂಗೇಶ್ವರ, ಮಧೂರು ಮದನಂತೇಶ್ವರ ಸಿದ್ಧಿವಿನಾಯಕ, ಪೆರಡಾಲ ಉದನೇಶ್ವರ, ಕಾರ್ಮಾರು ಮಹಾವಿಷ್ಣು ದೇವಾಲಯ, ಕಾಟುಕುಕ್ಕೆ ಸುಬ್ರಾಯ, ಬಜಕೂಡ್ಲು ಮಹಾಲಿಂಗೇಶ್ವರ, ಬಂಗ್ರಮಂಜೇಶ್ವರ ಕೀರ್ತೇಶ್ವರ, ಶೇಡಿಕಾವು ಶಿವ ದೇವಾಲಯ ಸಹಿತ ವಿವಿಧೆಡೆ ಮಧ್ಯಾಹ್ನ ಪೂಜೆ ಇರುವುದಿಲ್ಲ ಎಂದು ಆಯಾ ದೇವಾಲಯದ ಪ್ರಕಟಣೆ ತಿಳಿಸಿವೆ.

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅ.25ರಂದು ಯಾವುದೇ ಸೇವೆಗಳು ಮತ್ತು ಭೋಜನ ಪ್ರಸಾದ ಇರುವುದಿಲ್ಲ ಎಂದು ದೇವಳದ ಪ್ರಕಟಣೆ ತಿಳಿಸಿದೆ.

ಅಂದು ಬೆಳಿಗ್ಗೆ 7ರಿಂದ 8.30ರತನಕ, 10.30ರಿಂದ ಮಧ್ಯಾಹ್ನ 1ರತನಕ ಹಾಗೂ ಗ್ರಹಣದ ಸಮಯವಾದ ಸಂಜೆ 5.11ರಿಂದ 6.28ರ ತನಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಅ.26ರಂದು ಬೆಳಿಗ್ಗೆ ದೇವಳದಲ್ಲಿ ಶುದ್ಧಿ ಕಾರ್ಯದ ಬಳಿಕ ನಿತ್ಯ ಪೂಜೆ ನಡೆಯಲಿದೆ. ಹೀಗಾಗಿ, 9 ಗಂಟೆಯ ನಂತರ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಆ ಬಳಿಕ ಸೇವಾಧಿಗಳು ಆರಂಭಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ಕಳಸ (ಚಿಕ್ಕಮಗಳೂರು): ‘ಅ.25ರಂದು ಹೊರನಾಡು ಅನ್ನಪೂಣೇಶ್ವರಿ ದೇವಸ್ಥಾನದಲ್ಲಿ ಪ್ರಸಾದ ಭೋಜನ ಮತ್ತು ಪೂಜೆಯ ಸಮಯದಲ್ಲಿ ಕೆಲ ಬದಲಾವಣೆ ಇರಲಿದೆ’ ಎಂದು ದೇವಸ್ಥಾನದ ಮುಖ್ಯಸ್ಥ ಜಿ.ಭೀಮೇಶ್ವರ ಜೋಷಿ ಹೇಳಿದರು.

ಗ್ರಹಣ ಸ್ಪರ್ಶ ಕಾಲದಿಂದ ಗ್ರಹಣ ಮೋಕ್ಷ ಕಾಲದವರೆಗೆ ದೇವಿಗೆ ನಿರಂತರ ಅಭಿಷೇಕ ನೆರವೇರುತ್ತದೆ. ಮಧ್ಯಾಹ್ನ 11ರಿಂದ 12ರವರೆಗೆ ಮಾತ್ರ ಪ್ರಸಾದ ಭೋಜನ ಇರುತ್ತದೆ. ಮಹಾಮಂಗಳಾರತಿ 1.30ಕ್ಕೆ ನಡೆಯಲಿದೆ. ಎಂದಿನಂತೆ ದೇವಿಯ ದರ್ಶನ ಮತ್ತು ಅರ್ಚನೆ ಸಂಜೆ 4ರವರೆಗೆ ಇರಲಿದೆ. ಗ್ರಹಣ ಮುಗಿದು ಶುದ್ಧಿ ಕಾರ್ಯ ನಡೆದ ನಂತರ, ಎಂದಿನಂತೆ ಪೂಜೆ, ಪ್ರಸಾದ ಇರುತ್ತದೆ. ಭಕ್ತರು ಈ ಬದಲಾವಣೆ ಗಮನಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಅರಸೀಕೆರೆ: ಹೋಬಳಿಯ ಉಚ್ಚಂಗಿ ದುರ್ಗ ಗ್ರಾಮದ ಐತಿಹಾಸಿಕ ಉತ್ಸವಾಂಬ ದೇವಿ ದರ್ಶನವನ್ನು ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಅ.25ರ ಮಂಗಳವಾರ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಅಂದು ಮಧ್ಯಾಹ್ನ 2.28ರಿಂದ ಸಂಜೆ 6.38ರ ವರೆಗೆ ಗ್ರಹಣ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನ ಪ್ರವೇಶ ನಿಷೇಧಿಸಲಾಗಿದೆ ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊರಟಗೆರೆ: ಸೂರ್ಯಗ್ರಹಣದ ನಿಮಿತ್ತ ಅ. 25ರಂದು ತಾಲ್ಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಿಯ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ.

ಅಮಾವಾಸ್ಯೆ ದಿನದಂದು ಸೂರ್ಯಗ್ರಹಣದ ಪ್ರಯುಕ್ತ ಮಂಗಳವಾರ ಮಧ್ಯಾಹ್ನ 2.30 ಗಂಟೆಯಿಂದ ದೇವಿಯ ದರ್ಶನಕ್ಕೆ ಅವಕಾಶವಿರುವುದಿಲ್ಲ. ಸಂಜೆ 6.28 ಗಂಟೆಗೆ ಗ್ರಹಣ ಮೋಕ್ಷವಾಗಲಿದೆ. ಅ. 26ರಂದು ಬೆಳಿಗ್ಗೆ ಎಂದಿನಂತೆ ದೇವಿಯ ದರ್ಶನ ಪ್ರಾರಂಭವಾಗಲಿದೆ ಎಂದು ದೇಗುಲ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ತಿಳಿಸಿದ್ದಾರೆ.

ದೊಡ್ಡಬಳ್ಳಾಪುರ: ಅ.25 ರಂದು ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ದೇವರಿಗೆ ಬೆಳಿಗ್ಗೆ 6.30ಕ್ಕೆ ಅಭಿಷೇಕ ಪ್ರಾರಂಭವಾಗುತ್ತದೆ. ಮಹಾಮಂಗಳಾರತಿ ಬೆಳಗ್ಗೆ 8ಕ್ಕೆ ನೆರವೇರಲಿದೆ. ಬೆಳಿಗ್ಗೆ 10.30ರ ವರೆಗೆ ಮಾತ್ರ ದೇವರ ದರ್ಶನ ಇರುತ್ತದೆ. ನಂತರ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು