ತೀರ್ಥಹಳ್ಳಿ: ಕುಕ್ಕರ್ ಬಾಂಬ್ ಆರೋಪಿ ಶಾರೀಕ್ ಅಜ್ಜಿ ಮನೆಯಲ್ಲಿ ಇ.ಡಿ ಶೋಧ

ತೀರ್ಥಹಳ್ಳಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ ಅವರ ಅಜ್ಜಿ ಮನೆಯಲ್ಲಿ ಬುಧವಾರ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶೋಧ ಕಾರ್ಯ ನಡೆಸಿದರು.
ಶಾರೀಕ್ ಕುಟುಂಬಕ್ಕೆ ಸಂಬಂಧಿಸಿದ ಆಸ್ತಿ, ಆರ್ಥಿಕ ವಹಿವಾಟಿನ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಭಯೋತ್ಪಾದಕ ಚಟುವಟಿಕೆಗಳಿಗೆ ಬಳಕೆ ಮಾಡಲು ಬಂಧಿತ ಶಾರೀಕ್ ಹಾಗೂ ಸಹಚರರು ಕ್ರಿಪ್ಟೊ ಕರೆನ್ಸಿ ಮೂಲಕ ವಹಿವಾಟು ನಡೆಸಿರುವುದು ವಿಚಾರಣೆ ವೇಳೆ ಬಹಿರಂಗಗೊಂಡಿದ್ದರಿಂದ ಇ.ಡಿ ಪರಿಶೀಲನೆ ನಡೆಸಿದೆ ಎಂದು ತಿಳಿದುಬಂದಿದೆ.
ಇಲ್ಲಿನ ಕಾಂಗ್ರೆಸ್ ಕಚೇರಿ ಹಾಗೂ ಅದರ ಮೇಲೆ ಇರುವ ಬಾಡಿಗೆ ಕಟ್ಟಡವು ಶಾರೀಕ್ ಕುಟುಂಬಕ್ಕೆ ಸಂಬಂಧಿಸಿರುವ ಕಾರಣ ಅಲ್ಲಿನ ಬಾಡಿಗೆದಾರರೊಂದಿಗಿನ ಕರಾರು ಪತ್ರಗಳನ್ನೂ ಈ ವೇಳೆ ಇ.ಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇದನ್ನು ಪೊಲೀಸರು ಖಚಿತಪಡಿಸಿದ್ದಾರೆ.
ಕಟ್ಟಡದ ಬಾಡಿಗೆದಾರರಾದ ಕೆ.ಜಿ. ನವೀನ ಬಿನ್ ಕೆ.ಎಂ. ಗೋಪಾಲಕೃಷ್ಣ (ಮಾಜಿ ಶಾಸಕ ಕಿಮ್ಮನೆ ರತ್ನಾಕರ ಅವರ ಸಹೋದರನ ಪುತ್ರ) ಅವರು 2015ರ ಜೂನ್ ತಿಂಗಳಲ್ಲಿ ಅಸಿಮ್ ಅಬ್ದುಲ್ ಮಜೀದ್ ಬಿನ್ ದಿ ಅಬ್ದುಲ್ ಮಜೀದ್ (ಸ್ವತ್ತಿನ ಮಾಲೀಕ) ಅವರಿಂದ 8 ವರ್ಷಗಳ ಅವಧಿಗೆ ₹ 10 ಲಕ್ಷ ರೂಪಾಯಿ ಮುಂಗಡ ಹಾಗೂ ತಿಂಗಳಿಗೆ ₹ 1,000 ಬಾಡಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಮಾಧ್ಯಮಗಳಲ್ಲಿ ಸುಳ್ಳು ಪ್ರಚಾರ –ಕಿಮ್ಮನೆ ಬೇಸರ:
'ನನ್ನ ಮನೆಯ ಮೇಲೆ ಇಡಿ ದಾಳಿಯಾಗಿದೆ ಎಂದು ಬಿಜೆಪಿ ಸುಳ್ಳು ಪ್ರಚಾರ ಮಾಡಿದೆ. ಮನೆ ಪರಿಶೀಲನೆ ನಡೆಸಿದರೆ ₹10 ಸಾವಿರ ರೂಪಾಯಿ ಸಿಗುವುದಿಲ್ಲ. ಬಿಜೆಪಿಯ ಸುಳ್ಳುಗಳಿಗೆ ದೃಶ್ಯಮಾಧ್ಯಮ ಪೂರಕವಾಗಿ ಸುದ್ದಿ ಭಿತ್ತರಿಸಿದೆ. ದೇಶ ಮತ್ತು ನಾಡು ಶಾಂತಿಯಿಂದ ಇರಲಿ. ಕಾಂಗ್ರೆಸ್ ಪಕ್ಷಕ್ಕೂ ಶಾರಿಖ್ ಕುಟುಂಬಕ್ಕೂ ಸಂಬಂಧ ಇಲ್ಲ. ರಾಷ್ಟ್ರೀಯ ತನಿಖಾ ದಳ ಕಚೇರಿ ಬಾಡಿಗೆಯ ಕುರಿತು ಮಾಹಿತಿ ಕೇಳಿದ್ದು ಪೂರೈಸಿದ್ದೇನೆ' ಎಂದು ಮಾಜಿ ಶಿಕ್ಷಣ ಸಚಿವರೂ ಆದ ಕಿಮ್ಮನೆ ರತ್ನಾಕರ್ ಪ್ರತಿಕ್ರಿಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.