ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮದ ಕುರಿತು ಶಿಕ್ಷಣದಲ್ಲೇ ಕೀಳರಿಮೆ: ರಂಗಕರ್ಮಿ ಪ್ರಸನ್ನ

ಸ್ಲಂ ಜನಾಂದೋಲನ ಸಮಾವೇಶದಲ್ಲಿ ರಂಗಕರ್ಮಿ ಪ್ರಸನ್ನ
Last Updated 6 ಜನವರಿ 2021, 17:02 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ಈಗ ಇರುವ ಶಿಕ್ಷಣ ವ್ಯವಸ್ಥೆಯಲ್ಲೇ ಶ್ರಮದ ಕುರಿತು ಕೀಳರಿಮೆ ತುಂಬಿಕೊಂಡಿದೆ. ಈ ಕಾರಣದಿಂದಾಗಿಯೇ ಶ್ರಮಿಕ ವರ್ಗದ ಜನರನ್ನೂ ಕೀಳಾಗಿ ನೋಡುವ ಮನೋಭಾವ ಹೆಚ್ಚುತ್ತಿದೆ ಎಂದು ರಂಗಕರ್ಮಿ ಪ್ರಸನ್ನ ಹೇಳಿದರು.

ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯು ನಗರದ ಗಾಂಧಿ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಪುಲೆ ಅವರ 190ನೇ ಜನ್ಮದಿನಾಚರಣೆ ಮತ್ತು ‘ನಗರ ವಂಚಿತ ಸಮುದಾಯಗಳ ಮುಂದಿನ ಹೆಜ್ಜೆ’ ಕುರಿತ ರಾಜ್ಯಮಟ್ಟದ ಪ್ರತಿನಿಧಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣವೆಂದರೆ ಕೇವಲ ಅಕ್ಷರ ಜ್ಞಾನ ಎಂಬ ಕಲ್ಪನೆಯನ್ನು ಹೇರಲಾಗುತ್ತಿದೆ. ಶಿಕ್ಷಣವೆಂದರೆ ಅರಿವು, ಜ್ಞಾನ, ಶ್ರಮ ಮತ್ತು ಸಂಸ್ಕಾರವನ್ನು ಒಳಗೊಂಡದ್ದು ಎಂದು ಬುದ್ಧ ನೂರಾರು ವರ್ಷಗಳ ಹಿಂದೆಯೇ ಹೇಳಿದ್ದ ಮಾತನ್ನು ಅಳವಡಿಸಿಕೊಂಡರೆ ಮಾತ್ರ ಎಲ್ಲ ವರ್ಗದ ಜನರಿಗೂ ನ್ಯಾಯ ದೊರಕುತ್ತದೆ ಎಂದು ಅವರು ಹೇಳಿದರು.

ಕೊಳೆಗೇರಿಗಳ ಜನರು ಅಕ್ಷರ ಮತ್ತು ಶ್ರಮ ಎರಡನ್ನೂ ಒಟ್ಟಾಗಿ ಬಳಸಿಕೊಳ್ಳಬೇಕು. ಬುದ್ಧ, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್‌. ಅಂಬೇಡ್ಕರ್ ಅವರ ಹೋರಾಟದ ಹಾದಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಈಗಿನ ಸನ್ನಿವೇಶದಲ್ಲಿ ಸಾಮಾಜಿಕ ಚಳವಳಿಗಳ ನಾಯಕತ್ವವನ್ನು ಕೊಳೆಗೇರಿಗಳ ಜನರು ವಹಿಸಿಕೊಳ್ಳಬೇಕಾದ ತುರ್ತು ಇದೆ ಎಂದು ಹೇಳಿದರು.

ಜಾತಿ ತಾರತಮ್ಯದ ವಿರುದ್ಧ ಪ್ರಬಲವಾದ ಸೈದ್ಧಾಂತಿಕ ಹೋರಾಟ ರೂಪಿಸುವುದಕ್ಕೆ ಕೊಳೆಗೇರಿಗಳ ಜನರು ಕೈಜೋಡಿ
ಸಬೇಕು. ಅದಕ್ಕಾಗಿಯೇ ಪರ್ಯಾಯ ರಾಜಕಾರಣದ ಹಾದಿಯನ್ನು ಆಯ್ದುಕೊಳ್ಳಬೇಕು ಎಂದು ಪ್ರಸನ್ನ ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಪ್ರೊ. ಬಾಬು ಮ್ಯಾಥ್ಯು ಮಾತನಾಡಿ, ‘ಬದುಕುವ ಹಕ್ಕನ್ನೇ ಆಧಾರವಾಗಿಟ್ಟುಕೊಂಡು ಕೊಳೆಗೇರಿಜನರ ಸಂಘಟನೆಗಳನ್ನು ಬಲಪಡಿಸಬೇಕು. ಭೂ ಮಾಲೀಕತ್ವ ಮತ್ತು ವಸತಿಹಕ್ಕಿಗಾಗಿ ಪ್ರಬಲ ಹೋರಾಟ ನಡೆಸಬೇಕು’ ಎಂದರು.

ಕವಿ ಅಲ್ಲಾ‌‌ ಗಿರಿರಾಜು, ಸ್ಲಂ ಜನಾಂದೋಲನದ ರಾಜ್ಯ ಸಮಿತಿ ಪದಾಧಿಕಾರಿಗಳಾದ ಚಂದ್ರಮ್ಮ, ಗೀತಾ, ದೀಪಿಕಾ, ಅಕ್ರಮ್ ಮಶಳ್ಕರ್, ಜನಾರ್ದನ ಮತ್ತು ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT