ಶುಕ್ರವಾರ, ಮಾರ್ಚ್ 24, 2023
22 °C
100 ದಿನಗಳಲ್ಲಿ ವಿದ್ಯುತ್‌ ಸಂಪರ್ಕ ಭರವಸೆ

ಎನ್‌ಒಸಿ ಇಲ್ಲದೆ ಗ್ರಾಮೀಣ ಭಾಗದ 3 ಲಕ್ಷ ಮನೆಗಳಿಗೆ ವಿದ್ಯುತ್‌: ಸುನಿಲ್‌ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಜಮೀನು, ಡೀಮ್ಡ್‌ ಅರಣ್ಯ ಸೇರಿ ಹಲವು ಕಡೆಗಳಲ್ಲಿ ಮನೆ ಕಟ್ಟಿಕೊಂಡಿರುವ ಕಡು ಬಡವರಿಗೆ ಮುಂದಿನ ನೂರು ದಿನಗಳಲ್ಲಿ ವಿದ್ಯುತ್‌ ಸಂಪರ್ಕ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

‘ಈ ರೀತಿ ವಿದ್ಯುತ್‌ ‘ಬೆಳಕು’ ಕಾಣದೇ ಕಳೆದ 10–15 ವರ್ಷಗಳಿಂದ ದಿನದೂಡುತ್ತಿರುವ ಸುಮಾರು 3 ಲಕ್ಷ ಕುಟುಂಬಗಳು ಇದ್ದು, ಎಲ್ಲರಿಗೂ ವಿದ್ಯುತ್‌ ಸಂಪರ್ಕ ನೀಡಲಾಗುವುದು’ ಎಂದು ಇಂಧನ ಸಚಿವ ವಿ.ಸುನೀಲ್‌ಕುಮಾರ್‌ ತಿಳಿಸಿದ್ದಾರೆ.

‘ರಾಜ್ಯ ಸರ್ಕಾರದ ‘ಬೆಳಕು’ ಯೋಜನೆಯಡಿ ವಿದ್ಯುತ್‌ ಸಂಪರ್ಕ ನೀಡಲಾಗುವುದು. ಇದಕ್ಕಾಗಿ ಸಬ್ ಸ್ಟೇಷನ್‌ಗಳಲ್ಲಿ ಅರ್ಜಿ ನೀಡಲಾಗುತ್ತದೆ. ಅದನ್ನು ಪಡೆದುಕೊಂಡು ತಕ್ಷಣವೇ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ಗ್ರಾಮ ಪಂಚಾಯಿತಿಯಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯವುದು ಬೇಕಿಲ್ಲ. ಬಿಪಿಎಲ್‌, ಎಪಿಎಲ್‌ ಪಡಿತರ ಚೀಟಿ ಆಧರಿಸಿ ವಿದ್ಯುತ್ ಸಂಪರ್ಕವನ್ನು ನೀಡಲು ತೀರ್ಮಾನಿಸಲಾಗಿದೆ’ ಎಂದು ಅವರು ತಿಳಿಸಿದರು.

ಕೋವಿಡ್‌ ಸಂದರ್ಭದಲ್ಲಿ ಈ ಭಾಗದಲ್ಲಿರುವ ಶಾಲಾ– ಕಾಲೇಜು ವಿದ್ಯಾರ್ಥಿಗಳು ಆನ್‌ಲೈನ್‌ ಶಿಕ್ಷಣದಿಂದ ವಂಚಿತರಾಗಲು ವಿದ್ಯುತ್ ಸಂಪರ್ಕ ಇಲ್ಲದಿರುವುದೂ ಒಂದು ಮುಖ್ಯ ಕಾರಣ. ಆದ್ದರಿಂದ, ವಿದ್ಯುತ್‌ ಸಂಪರ್ಕ ಪಡೆಯಲು ಗ್ರಾಮ ಪಂಚಾಯಿಯಿಂದ ಎನ್‌ಒಸಿ ಪಡೆಯಬೇಕು ಎಂಬ ನಿಯಮವನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದರು.

‘ಒಂದು ವೇಳೆ ಅನಧಿಕೃತ ಕಟ್ಟಡಗಳು ಇದ್ದರೆ ಗ್ರಾಮ ಪಂಚಾಯಿತಿ ಕ್ರಮ ತೆಗೆದುಕೊಳ್ಳಬಹುದು. ಎಲ್ಲ ಮನೆಗಳಿಗೆ ವಿದ್ಯುತ್ ದೀಪ ನೀಡಬೇಕು ಎಂಬ ಮುಖ್ಯಮಂತ್ರಿಯವರ ನಿರ್ದೇಶನದ ಮೇರೆಗೆ ಎಲ್ಲರಿಗೂ ವಿದ್ಯುತ್‌ ಸಂಪರ್ಕ ನೀಡಲಾಗುತ್ತಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದನ್ನು ಕಾರ್ಯಗತಗೊಳಿಸಲು ಸರ್ಕಾರಕ್ಕೆ  ಹೊರೆ ಆಗುತ್ತದೆ. ಸುಮಾರು ₹80 ಕೋಟಿ ಬೇಕಾಗಬಹುದು. ಆದರೆ, ಬಡವರ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಆಗಬೇಕು. ಅವರು ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ದೃಢ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದರು.

ಇದಕ್ಕೆ ಮುನ್ನ ಬಿಜೆಪಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಂಧನ ಇಲಾಖೆಯಲ್ಲಿ 100 ದಿನಗಳ ಕಾರ್ಯಕ್ರಮ ರೂಪಿಸಿದ್ದು, ಸೆಪ್ಟೆಂಬರ್‌ 1 ರಿಂದಲೇ ಜಾರಿಗೆ ಬಂದಿದೆ. ವಿದ್ಯುತ್‌ ವಂಚಿತ ಕುಟುಂಬಗಳ ಜಿಲ್ಲಾವಾರು ನಿಖರ ಅಂಕಿ– ಅಂಶಗಳನ್ನು ಸಂಗ್ರಹಿಸಿ ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಪ್ರೀಪೇಯ್ಡ್‌ ಮೀಟರ್‌: ಸಚಿವರ ಸರ್ಕಾರಿ ವಸತಿ ಗೃಹಗಳು ಸೇರಿ ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಿಗೆ ಪ್ರೀಪೇಯ್ಡ್‌ ವಿದ್ಯುತ್‌ ಮೀಟರ್‌ ಅಳವಡಿಸಲಾಗುವುದು ಎಂದು ಹೇಳಿದರು.

‘ಗಂಗಾ ಕಲ್ಯಾಣ’ ಯೋಜನೆಯನ್ನು ಅನುಷ್ಠಾನಗೊಳಿಸುವ ವಿವಿಧ ಅಭಿವೃದ್ಧಿ ನಿಗಮಗಳೇ ವಿದ್ಯುದ್ದೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು. ಆದರೆ, ಫಲಾನುಭವಿ ರೈತರೇ ಕಚೇರಿಗಳಿಗೆ ಅಲೆಯುವಂತಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು 30 ದಿನಗಳ ಕಾಲಮಿತಿ ವಿಧಿಸಲಾಗಿದೆ. ಈ ಯೋಜನೆಯಡಿ ಕೊರೆದ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಲು ವಿವಿಧ ಎಸ್ಕಾಂಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಉತ್ತರ ಕರ್ನಾಟಕದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ 7 ಗಂಟೆ ವಿದ್ಯುತ್‌ ನೀಡಬೇಕು ಎಂಬ ಬೇಡಿಕೆ ಇತ್ತು. ಇದಕ್ಕಾಗಿ ವಿವಿಧೆಡೆ 60 ಕ್ಕೂ ಹೆಚ್ಚು ಸಬ್‌ ಸ್ಟೇಷನ್‌ಗಳನ್ನು ಇನ್ನು 100 ದಿನಗಳ ಒಳಗೆ ಕೆಪಿಟಿಸಿಎಲ್‌ ಮೂಲಕ ನಿರ್ಮಿಸಲಾಗುವುದು. ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ಏಳು ಗಂಟೆ ವಿದ್ಯುತ್‌ ನೀಡಲು ಇದರಿಂದ ಸಾಧ್ಯವಾಗಲಿದೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಎಲೆಕ್ಟ್ರಿಕ್‌ ರಿಚಾರ್ಜ್‌ ಘಟಕಗಳು

ಮಾರುಕಟ್ಟೆಗೆ ಹೆಚ್ಚು ವಿದ್ಯುತ್ ಚಾಲಿತ ವಾಹನಗಳು ಬರುತ್ತಿರುವುದರಿಂದ ರಾಜ್ಯದಾದ್ಯಂತ ಎಲೆಕ್ಟ್ರಿಕ್‌ ರಿಚಾರ್ಜ್‌ ಘಟಕಗಳನ್ನು ಆರಂಭಿಸಲಾಗುವುದು ಎಂದು ಸಚಿವ ಸುನೀಲ್‌ ಕುಮಾರ್‌ ಹೇಳಿದರು.

ಎಲ್ಲ ಜಿಲ್ಲಾ ಕೇಂದ್ರಗಳು, ಪ್ರವಾಸೋದ್ಯಮ ಕೇಂದ್ರಗಳಲ್ಲಿ ರಿಚಾರ್ಜ್‌ ಘಟಕಗಳನ್ನು ತೆರೆಯಲು ಬೇರೆ ಬೇರೆ ಎಸ್ಕಾಂಗಳಿಗೆ ಗುರಿ ನೀಡಲಾಗುವುದು. ರಾಜ್ಯದಲ್ಲಿ 500 ಎಲೆಕ್ಟ್ರಿಕ್ ರೀಚಾರ್ಚ್ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದೂ ತಿಳಿಸಿದರು.

ಎಲೆಕ್ಟ್ರಿಕ್‌ ವಾಹನಗಳನ್ನು ತಯಾರಿಸುವ ಉದ್ಯಮಗಳ ಮುಖ್ಯಸ್ಥರ ಸಭೆಯನ್ನು ಇದೇ 18 ರಂದು ಕರೆಯಲಾಗುವುದು. ಅವರ ಜತೆ ಸಮಾಲೋಚನೆ ನಡೆಸಿ, ರಾಜ್ಯದಲ್ಲಿ ಎಲೆಕ್ಟ್ರಿಕ್‌ ರೀಚಾರ್ಜಿಂಗ್‌ ಘಟಕಗಳ ಬೇಡಿಕೆ ಪ್ರಮಾಣ ತಿಳಿದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು