ಬುಧವಾರ, ನವೆಂಬರ್ 25, 2020
25 °C
ಬಿಎಸ್‌ವೈಗೆ ಸಂಪುಟ ವಿಸ್ತರಣೆಯ ಅಗ್ನಿ ಪರೀಕ್ಷೆ

ಬಿಜೆಪಿ ‘ವಿಜಯ’: ಇನ್ನು ಸವಾಲಿನ ಸಮಯ

ವೈ.ಗ. ಜಗದೀಶ್ Updated:

ಅಕ್ಷರ ಗಾತ್ರ : | |

ಸಿರಾದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿನ ಸಂಭ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ

ಬೆಂಗಳೂರು: ಕಾಂಗ್ರೆಸ್, ಜೆಡಿಎಸ್‌ ಹಾಗೂ ಕೆಲವು ಬಿಜೆಪಿ ನಾಯಕರ ಲೆಕ್ಕಾಚಾರವನ್ನೂ ತಲೆಕೆಳಗು ಮಾಡಿರುವ ಎರಡು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಬಿಜೆಪಿಗೆ ‘ವಿಜಯ’ದ ಕಿರೀಟ ತೊಡಿಸಿದ್ದರೆ, ಎದುರಾಳಿ ಪಕ್ಷಗಳಿಗೆ ಹಿನ್ನಡೆಯ ಕಹಿ ಉಣಿಸಿದೆ.

ಕಾಂಗ್ರೆಸ್‌–ಜೆಡಿಎಸ್‌ನಿಂದ ವಲಸೆ ಬಂದವರನ್ನೇ ಗೆಲ್ಲಿಸಿಕೊಂಡು ಬಿಜೆಪಿಯ ‘ಭುಜಬಲ’ವನ್ನು ಹೆಚ್ಚಿಸಿಕೊಂಡು, ಸರ್ಕಾರದ ಬುಡವನ್ನು ಭದ್ರ ಮಾಡಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಈ ಗೆಲುವಿನಿಂದ ಮೇಲ್ನೋಟಕ್ಕೆ ಬೀಗಬಹುದು. ಆದರೆ, ಕೊಟ್ಟ ಮಾತನ್ನು ಉಳಿಸಿಕೊಂಡು, ಸರ್ಕಾರವನ್ನೂ ಬಾಳಿಸಿಕೊಂಡು ಹೋಗಬೇಕಾದ ಕೊರಕಲು ಹಾದಿಯನ್ನು ಅವರು ಸವೆಸಲೇಬೇಕಾಗಿದೆ.

ಇಲ್ಲಿಯವರೆಗೆ ನಡೆದ ದಾರಿಯಲ್ಲಿ ಯಡಿಯೂರಪ್ಪ ಬಿಡುಬೀಸಾಗಿ ನಡೆಯಲು ಬಿಜೆಪಿಯ ಮೂಲನಿವಾಸಿಗರು ಅಷ್ಟು ಸಲೀಸಾಗಿ ಇನ್ನು ಮುಂದೆ ಬಿಡಲಿದ್ದಾರೆ ಎಂದು ಹೇಳುವಂತಹ ‍ಪರಿಸ್ಥಿತಿ ಪಕ್ಷದ ಒಳಗಿಲ್ಲ. ಒಳ ಏಟು ಕೊಡಲು ಕಾಯುತ್ತಿರುವ ಸಾಕಷ್ಟು ಮಂದಿ ಪಕ್ಷದೊಳಗೇ ಇದ್ದಾರೆ. ‌ಧ್ವನಿ ಏರಿಸಿದರೆ, ಸಿಗಬಹುದಾದ ಸಚಿವ ಸ್ಥಾನ ಕೈತಪ್ಪಿ ಹೋದಿತೆಂಬ ಸಣ್ಣ ಭಯ ಮೂಲನಿವಾಸಿಗರನ್ನು ಕಾಡುತ್ತಿದೆ. ಸಚಿವ ಸ್ಥಾನ ಸಿಗುವುದೇ ಇಲ್ಲ ಎಂಬ ಖಚಿತವಾದರೆ ಮೆಲುದನಿಯಲ್ಲಿರುವ ಅಪಸ್ವರ, ಪಕ್ಷದೊಳಗೆ ಸುನಾಮಿಯ ಅಲೆ ಎಬ್ಬಿಸಿದರೂ ಅಚ್ಚರಿಯಿಲ್ಲ. ಇದು ಯಡಿಯೂರಪ್ಪ ಈಗ ಮುಖಾಮುಖಿಯಾಗಲೇಬೇಕಾದ ಅಗ್ನಿ ಪರೀಕ್ಷೆಯೂ ಹೌದು.

ಹೊರಗಿನಿಂದ ಬಂದು ಸರ್ಕಾರ ರಚಿಸಲು ನೆರವಾಗಿ ಉಪಚುನಾವಣೆಯಲ್ಲಿ ಗೆದ್ದವರ ಪೈಕಿ ಎಲ್ಲರಿಗೂ ಸಚಿವ ಸ್ಥಾನವನ್ನು ದಯಪಾಲಿಸಿ ಯಡಿಯೂರಪ್ಪ, ತಮ್ಮ ಮಾತನ್ನು ಉಳಿಸಿಕೊಂಡಿದ್ದಾದರೆ. ಮುನಿರತ್ನ ಅವರನ್ನು ಗೆಲ್ಲಿಸಿದರೆ ಸಚಿವಸ್ಥಾನ ನೀಡಲಾಗುವುದು ಎಂದೂ ಘೋಷಿಸಿದ್ದರು. ಆದರೆ, ಯಡಿಯೂರಪ್ಪವಾಗ್ದಾನ ಇಷ್ಟಕ್ಕೆ ನಿಲ್ಲುವುದಿಲ್ಲ.

ಕಾಂಗ್ರೆಸ್‌, ಜೆಡಿಎಸ್‌ಗೆ ರಾಜೀನಾಮೆ ನೀಡಿ ಬಂದು ಉಪಚುನಾವಣೆಯಲ್ಲಿ ಸೋತ ಎಚ್. ವಿಶ್ವನಾಥ್‌, ಎಂ.ಟಿ.ಬಿ. ನಾಗರಾಜ್ ಹಾಗೂ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಆರ್. ಶಂಕರ್ ಅವರಿಗೆ ಸಚಿವ ಸ್ಥಾನ ಕೊಡಲೇಬೇಕಾದ ಅನಿವಾರ್ಯದಲ್ಲಿ ಯಡಿಯೂರಪ್ಪ ಸಿಲುಕಿದ್ದಾರೆ. ‘ಪಕ್ಷ ಅಧಿಕಾರಕ್ಕೆ ಬರಲು ನಾನೂ ಕಾರಣ’ ಎಂದು ಪ್ರತಿಪಾದಿಸುತ್ತಿರುವ ಸಿ.‍‍ಪಿ. ಯೋಗೇಶ್ವರ್ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಈಗ ಮುನಿರತ್ನ ಹೊಸ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಕಾರಣಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪ್ರತಾಪಗೌಡ ಪಾಟೀಲ ಪ್ರತಿನಿಧಿಸುವ ಮಸ್ಕಿ ಕ್ಷೇತ್ರದ ಚುನಾವಣೆ  ನಡೆಯಲಿಕ್ಕಿದೆ.

ಹೊರಗಿನಿಂದ ಬಂದವರಿಗೆ ಸಚಿವ ಸ್ಥಾನ ಕೊಡುತ್ತಾ ಹೋದರೆ, ಮೂಲ ನಿವಾಸಿಗಳು ಎಲ್ಲಿ ಹೋಗಬೇಕು ಎಂಬ ಪ್ರಶ್ನೆ ಬಿಜೆಪಿಯಲ್ಲಿ ಮೊದಲಿನಿಂದಲೂ ಇದೆ. ಬೆಂಗಳೂರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿದ ಕಾರಣಕ್ಕೆ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದ ಶಾಸಕರಲ್ಲಿ ಅಸಮಾಧಾನ ತುಂಬಿದೆ. ಅನೇಕ ಬಾರಿ ಗೆದ್ದಿರುವ ತಮ್ಮನ್ನು ಸಚಿವರನ್ನಾಗಿ ಮಾಡಿ ಎಂಬ ಬೇಡಿಕೆಯನ್ನು ಬಿಜೆಪಿ ಶಾಸಕರು ಮಂಡಿಸುತ್ತಲೇ ಬಂದಿದ್ದಾರೆ. ಸಂಪುಟ ವಿಸ್ತರಣೆಯ ಪ್ರಸ್ತಾವ ಮುನ್ನೆಲೆಗೆ ಬಂದಾಗಲೆಲ್ಲ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದ್ದು, ಸಚಿವ ಸ್ಥಾನ ಸಿಗದೇ ಇದ್ದವರು ಅತೃಪ್ತಿಯನ್ನು ಹೊರಹಾಕುವುದು ನಡೆದೇ ಇದೆ.

ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡಿರುವುದರಿಂದ ಕೆಲವು ಅದಕ್ಷ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕೊಡುವ ಅಪೇಕ್ಷೆ ಯಡಿಯೂರಪ್ಪ ಅವರದ್ದಾಗಿತ್ತು. ಆದರೆ, ವಿಧಾನಮಂಡಲ ಅಧಿವೇಶನಕ್ಕೆ ಮುನ್ನ ಇದೇ ಉದ್ದೇಶ ಇಟ್ಟುಕೊಂಡು ದೆಹಲಿಗೆ ಹೋಗಿದ್ದ ಯಡಿಯೂರಪ್ಪ, ತಮ್ಮ ಪಕ್ಷದ ವರಿಷ್ಠರ ಮುಂದೆ ಈ ಪ್ರಸ್ತಾಪ ಇಟ್ಟಿದ್ದರು. ಪುನರಾರಚನೆ ಬೇಡ, ವಿಸ್ತರಣೆ ಮಾಡಿ; ಆದರೆ ಸದ್ಯಕ್ಕೆ ಬೇಡ ಎಂದು ವರಿಷ್ಠರು ನಿರ್ದೇಶನ ನೀಡಿದ್ದರು.

‘ಉಪಚುನಾವಣೆ ಮುಗಿದ ಕೂಡಲೇ ವರಿಷ್ಠರ ಒಪ್ಪಿಗೆ ಪಡೆದು ಸಂಪುಟ ವಿಸ್ತರಣೆ ಮಾಡುವೆ’ ಎಂದು ಯಡಿಯೂರಪ್ಪ ಹೇಳಿದ್ದಾರೆ. ಹಾಗೊಂದು ವೇಳೆ ಪ್ರಕ್ರಿಯೆ ಆರಂಭವಾದರೆ ಸಚಿವ ಸ್ಥಾನ ಆಕಾಂಕ್ಷಿಗಳಾದ ಉಮೇಶ ಕತ್ತಿ, ಅರವಿಂದ ಲಿಂಬಾವಳಿ, ತಿಪ್ಪಾರೆಡ್ಡಿ ಸೇರಿದಂತೆ ಹಲವು ಆಕಾಂಕ್ಷಿಗಳು ಜತೆಗೂಡಬಹುದು. ಸಿ.ಟಿ. ರವಿ ರಾಜೀನಾಮೆ ಕೊಟ್ಟಿರುವುದರಿಂದ ಸಂಪುಟದಲ್ಲಿ ಏಳು ಸ್ಥಾನ ಖಾಲಿ ಇವೆ. ವಾಗ್ದಾನ ಮಾಡಿರುವ ಎಲ್ಲರಿಗೂ ಯಡಿಯೂರಪ್ಪ ಸಚಿವ ಸ್ಥಾನ ಕೊಟ್ಟರೆ ಒಂದು ಸ್ಥಾನ ಮಾತ್ರ ಉಳಿಯಲಿದೆ. ಪಕ್ಷದ ಮೂಲ ನಿವಾಸಿಗಳಿಗೆ ಸಚಿವ ಸ್ಥಾನ ಕೊಡಲೇಬೇಕಾದರೆ, ಕೆಲವರನ್ನು ಕೈಬಿಡಲೇಬೇಕಾಗುತ್ತದೆ. ಈ ಸವಾಲಿನ ಕೊಂಡವನ್ನು ಯಡಿಯೂರಪ್ಪ ಹೇಗೆ ಹಾಯುತ್ತಾರೆ ಎಂಬುದು ಕುತೂಹಲ.

ಎರಡು ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದು, ಶಿರಾದಲ್ಲಿ ಪಕ್ಷದ ಬಾವುಟವನ್ನು ಹಾರಿಸುವಲ್ಲಿ ಬಿ.ವೈ. ವಿಜಯೇಂದ್ರ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿರುವುದರಿಂದಾಗಿ ಪಕ್ಷದಲ್ಲಿ ಯಡಿಯೂರಪ್ಪ ನಾಯಕತ್ವ ಪ್ರಶ್ನಾತೀತ ಎಂದೇ ಹೇಳಲಾಗುತ್ತಿದೆ. ಆದರೆ, ನರೇಂದ್ರ ಮೋದಿ–ಅಮಿತ್ ಶಾ ಜೋಡಿಯ ಬಿಗಿಮುಷ್ಟಿಯಲ್ಲಿರುವ ಬಿಜೆಪಿಯಲ್ಲಿ ‘ಅಸಾಧ್ಯ’ ಎಂಬ ಮಾತೇ ಈಗ ಇಲ್ಲ ಎಂಬ ಚರ್ಚೆಗಳೂ ಪಕ್ಷದಲ್ಲಿ ನಡೆದಿವೆ.

ಬಿಹಾರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ಮರಳಿ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿ ಬದಲಾವಣೆ ನಡೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಬಿಜೆಪಿ ಗರ್ಭಗುಡಿಯಿಂದಲೇ ಅನುರಣಿಸಿದ್ದವು. ಅಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೂ ಅಲ್ಲಿನ ಬಿಜೆಪಿ ಘಟಕದಲ್ಲಿ ಸುಶೀಲ್‌ ಕುಮಾರ್ ಮೋದಿ ಪ್ರಭಾವವೇ ಹೆಚ್ಚು ಕೆಲಸ ಮಾಡಿದೆ. ಸ್ಥಳೀಯ ನಾಯಕತ್ವಕ್ಕೆ ಮನ್ನಣೆ ನೀಡಿದಂತಾಗಿದೆ ಎಂಬ ಲೆಕ್ಕಾಚಾರದೊಳಗೆ ಯಡಿಯೂರಪ್ಪ ಅವರ ನಾಯಕತ್ವವನ್ನು ಅಲುಗಾಡಿಸಲು ವರಿಷ್ಠರು ಈ ಸಂದರ್ಭದಲ್ಲಿ ಹೋಗಲಾರರು ಎಂಬ ಚರ್ಚೆಯೂ ಶುರುವಾಗಿದೆ.

ಹಾಗೊಂದು ವೇಳೆ ಬದಲಾವಣೆಯ ಪ್ರಶ್ನೆ ಎದುರಾದರೆ, ಕೆ.ಆರ್. ಪೇಟೆ, ಶಿರಾದಲ್ಲಿ ವಿಜಯೇಂದ್ರ ಅವರಿಂದ ಪಕ್ಷ ಗೆದ್ದಿತು ಎಂಬ ವಾದವನ್ನು ಮುಂದಿಟ್ಟು, ಪುತ್ರನಿಗೆ ಪಟ್ಟ ಕಟ್ಟಲು ಯಡಿಯೂರಪ್ಪ ಮುಂದಡಿ ಇಡಲು ತಯಾರಿ ನಡೆಸಿರುವುದು ಗುಟ್ಟಾಗಿ ಉಳಿದಿಲ್ಲ.

ಬಿಹಾರದ ಫಲಿತಾಂಶ ಆಖೈರು ಗೊಂಡು ಹಾಗೂ ಅಲ್ಲಿ ಸರ್ಕಾರ ರಚನೆ ಯಾದ ಬಳಿಕವೇ ರಾಜ್ಯ ರಾಜಕಾರಣದತ್ತ ವರಿಷ್ಠರು ಮುಖ ಹಾಕುವ ಸಂಭವ ಇದೆ ಎಂದೂ ಹೇಳಲಾಗುತ್ತಿದೆ.

* ವಿಧಾನಸಭೆ

ಶಿರಾ

ಡಾ.ಸಿ.ಎಂ.ರಾಜೇಶಗೌಡ(ಬಿಜೆಪಿ)–76,564(ಗೆಲುವು)

ಟಿ.ಬಿ.ಜಯಚಂದ್ರ(ಕಾಂಗ್ರೆಸ್‌)–63,150

ಅಮ್ಮಾಜಮ್ಮ(ಜೆಡಿಎಸ್‌)–36,783

*******

ಆರ್‌.ಆರ್‌.ನಗರ

ಮುನಿರತ್ನ(ಬಿಜೆಪಿ)–1,25,990

ಕುಸುಮಾ(ಕಾಂಗ್ರೆಸ್‌)–67,877

ಕೃಷ್ಣಮೂರ್ತಿ.ವಿ (ಜೆಡಿಎಸ್‌)–10,269

* ವಿಧಾನಪರಿಷತ್ ಚುನಾವಣೆ

ಬೆಂಗಳೂರು ಶಿಕ್ಷಕರ ಕ್ಷೇತ್ರ

ಪುಟ್ಟಣ್ಣ(ಬಿಜೆಪಿ)–7335(ಗೆಲುವು)

ಎ.ಪಿ. ರಂಗನಾಥ್‌(ಜೆಡಿಎಸ್‌)–5107

ಪ್ರವೀಣ್‌ ಕುಮಾರ್(ಕಾಂಗ್ರೆಸ್‌)–782

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು