ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿರತ್ನ ವಿರುದ್ಧದ ವ್ಯಾಜ್ಯ| ಚುನಾವಣಾ ತಕರಾರು ವಿಚಾರಣೆ ವಿಳಂಬ ಸಲ್ಲ: ಹೈಕೋರ್ಟ್

ಮುನಿರತ್ನ ವಿರುದ್ಧದ ವ್ಯಾಜ್ಯ: ಕಟಕಟೆಯಲ್ಲಿ ಮುನಿರಾಜು ಗೌಡ
Last Updated 10 ಸೆಪ್ಟೆಂಬರ್ 2022, 18:44 IST
ಅಕ್ಷರ ಗಾತ್ರ

ಬೆಂಗಳೂರು:‘ಚುನಾವಣಾ ತಕರಾರು ಅರ್ಜಿಗಳು ಮುಂದಿನ ಚುನಾವಣೆ ಘೋಷಣೆಯಾಗುವ ತನಕ ವಿಚಾರಣೆ ಯಲ್ಲೇ ಮುಂದುವರಿಯುವ ಚಾಳಿ ಒಳ್ಳೆಯದಲ್ಲ. ಇಂತಹ ಅರ್ಜಿಗಳು ಆರು ತಿಂಗಳ ಒಳಗಾಗಿ ಇತ್ಯರ್ಥಗೊಳ್ಳುವಂತಾಗಬೇಕು’ ಎಂದು ಹೈಕೋರ್ಟ್‌
ಅಭಿಪ್ರಾಯಪಟ್ಟಿದೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುನಿರತ್ನ ವಿರುದ್ಧ ಪರಾಜಯ ಅನುಭವಿಸಿದ್ದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ವಿಧಾನಪರಿಷತ್‌ ಸದಸ್ಯ ಮುನಿರಾಜು ಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನುನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರು ಮತ್ತು ಪ್ರತಿವಾದಿಗಳ ಪರ ವಕೀಲರು ದಾಖಲೆಗಳ ದೃಢೀಕರಣ ಪರಿಶೀಲನೆಗೆ ಸಂಬಂಧಿಸಿದಂತೆ ತಡಕಾಡುತ್ತಿದ್ದ ವೇಳೆ ಮೌಖಿಕವಾಗಿ ಈ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ‘ಇಂತಹ ಪ್ರಕರಣಗಳಲ್ಲಿ ಸಮಯ ವ್ಯಯ ಮಾಡುವುದು ಸಲ್ಲದು’ ಎಂಬ ಅಭಿಪ್ರಾಯದೊಂದಿಗೆ ದೃಢೀಕೃತ ದಾಖಲೆಗಳನ್ನು ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್ ಅವರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

ಅಕ್ರಮಗಳ ಪುನರುಚ್ಚಾರ: ‘ಸತ್ಯವನ್ನೇ ನುಡಿಯುತ್ತೇನೆ‘ ಎಂದು ಕಟಕಟೆಯಲ್ಲಿ ನಿಂತು ಪ್ರಮಾಣ ಸ್ವೀಕರಿಸಿದ ಅರ್ಜಿದಾರ ಮುನಿರಾಜು ಗೌಡ ಅವರನ್ನು ಎಂ.ಶಿವಪ್ರಕಾಶ್ ಮುಖ್ಯ ವಿಚಾರಣೆಗೆ ಅನುಗುಣವಾದ ಪ್ರಶ್ನೆಗಳನ್ನು ಕೇಳಿದರು. ಈ ವೇಳೆ ಮುನಿರಾಜು ಗೌಡ, ‘ಮುನಿರತ್ನ ಅಂದು ಚುನಾವಣೆ ಘೋಷಣೆ ಆಗುವ ಮೊದಲೇ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ತಮಗೆ ಬೇಕಾದ ಕಡೆ ನಿಯುಕ್ತಿ ಮಾಡಿಸಿಕೊಂಡು ಅಕ್ರಮ ಎಸಗಿದ್ದಾರೆ’ ಎಂದು ಪುನರುಚ್ಚರಿಸಿದರು.

‘ಮುನಿರತ್ನ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದು, ಅಂದಿನ ಚುನಾವಣೆಯಲ್ಲಿ ಅವರ ಹಲವು ಅಕ್ರಮಗಳ ವಿರುದ್ಧ ನಾನು ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದೇನೆ. ಈ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಈ ಕ್ರಿಮಿನಲ್‌ ಮೊಕದ್ದಮೆಗಳ ವಿಚಾರಣೆ ಮುಂದುವರಿದಿದೆ’ ಎಂದು ನೂರಾರು ಪುಟಗಳ ಅಂತಿಮ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

‘ಮುನಿರತ್ನ ಅವರ ಅಂದಿನ ಆಯ್ಕೆಯನ್ನು ಜನತಾ ಪ್ರತಿನಿಧಿ ಕಾಯ್ದೆ–1951ರ ಕಲಂ 123ರ ಅನುಸಾರ ಅನೂರ್ಜಿತ ಎಂದು ಸಾರಬೇಕು’ ಎಂದು ಕೋರಿ ಮುನಿರಾಜು ಗೌಡ ಈ ಅರ್ಜಿ ಸಲ್ಲಿಸಿದ್ದಾರೆ.

ಮುನಿರಾಜುಗೆ ಕಟಕಟೆಯಲ್ಲೇ ಕುರ್ಚಿ...!

ಮುನಿರಾಜು ಗೌಡ ಕಟಕಟೆಯಲ್ಲಿ ನಿಂತು ಉತ್ತರಿಸುತ್ತಿದ್ದ ವೇಳೆ ನ್ಯಾಯಮೂರ್ತಿಗಳು, ‘ಅರ್ಜಿದಾರರು ನಿಂತುಕೊಂಡು ಯಾಕೆ ಉತ್ತರಿಸಬೇಕು. ಅವರಿಗೊಂದು ಕುರ್ಚಿ ಕೊಡಿ‘ ಎಂದು ಕೋರ್ಟ್‌ ಆಫೀಸರ್‌ಗೆ ಸೂಚಿಸಿದರು.

ಕೂಡಲೇ ಕೋರ್ಟ್ ಆಫೀಸರ್ ರಾಘವೇಂದ್ರ ಅರ್ಜಿದಾರರಿಗೆ ಕುರ್ಚಿ ನೀಡಿದರು. ನಂತರ ನ್ಯಾಯಮೂರ್ತಿಗಳು ಮುನಿರಾಜು ಅವರಿಗೆ, ’ವಿಚಾರಣೆ ಮುಗಿದ ಮೇಲೆ ಕುರ್ಚಿಯನ್ನು ಇಲ್ಲೇ ಬಿಟ್ಟು ಹೋಗಿ. ಮನುಷ್ಯರಿಗೆ ಕುರ್ಚಿಯ ಮೇಲೆ ಭಾರಿ ವ್ಯಾಮೋಹ..!’ ಎಂದು ಚಟಾಕಿ ಹಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT