ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ: ತಲೆದಂಡದಲ್ಲೂ ಶಕ್ತಿ ಪ್ರದರ್ಶನ

ಬೆಂಬಲಿಗರ 150 ವಾಹನಗಳೊಂದಿಗೆ ಬೆಂಗಳೂರಿಗೆ ಬಂದ ಈಶ್ವರಪ್ಪ
Last Updated 15 ಏಪ್ರಿಲ್ 2022, 21:34 IST
ಅಕ್ಷರ ಗಾತ್ರ

ಬೆಂಗಳೂರು/ಶಿವಮೊಗ್ಗ: ಬೆಳಗಾವಿಯ ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ, ನೂರಾರು ವಾಹನಗಳಲ್ಲಿ ಬೆಂಬಲಿಗರೊಂದಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಶುಕ್ರವಾರ ಬಂದು ಶಕ್ತಿ ಪ್ರದರ್ಶನದೊಂದಿಗೆ ರಾಜೀನಾಮೆ ಸಲ್ಲಿಸಿದರು.

ತಾವು ಮಾಡಿದ್ದ ಕಾಮಗಾರಿಗಳ ಬಾಕಿ ಬಿಲ್‌ ಮಂಜೂರಾತಿಗೆ ಈಶ್ವರಪ್ಪ ಶೇಕಡಾ 40ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಪ್ರಧಾನಿಗೆ ದೂರು ನೀಡಿದ್ದ ಸಂತೋಷ್‌, ಉಡುಪಿಯ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಮಂಗಳವಾರ ಬಹಿರಂಗವಾಗಿತ್ತು. ಈಶ್ವರಪ್ಪ ಮತ್ತು ಅವರ ಇಬ್ಬರು ಆಪ್ತರ ವಿರುದ್ಧ ಬುಧವಾರ ಎಫ್‌ಐಆರ್‌ ದಾಖಲಾಗಿತ್ತು. ಮೈಸೂರಿನಲ್ಲಿದ್ದ ಸಚಿವರನ್ನು ಸಂಪರ್ಕಿಸಿದ್ದ ಬಿಜೆಪಿ ವರಿಷ್ಠರು ರಾಜೀನಾಮೆ ನೀಡುವಂತೆ ಬುಧವಾರವೇ ಸೂಚಿಸಿದ್ದರು.

ವರಿಷ್ಠರ ಸೂಚನೆಗೆ ಮಣಿಯದ ಈಶ್ವರಪ್ಪ ಶಿವಮೊಗ್ಗಕ್ಕೆ ತೆರಳಿ, ಅಲ್ಲಿಯೇ ಬೀಡುಬಿಟ್ಟಿದ್ದರು. ಕಾಂಗ್ರೆಸ್‌ ಆರಂಭಿಸಿದ ಅಹೋರಾತ್ರಿ ಧರಣಿಯಿಂದ ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ ವರಿಷ್ಠರು, ತಕ್ಷಣ ರಾಜೀನಾಮೆ ನೀಡುವಂತೆ ಗುರುವಾರ ಸೂಚಿಸಿದ್ದರು.

ಶುಕ್ರವಾರ ರಾಜೀನಾಮೆ ನೀಡುವುದಾಗಿ ಗುರುವಾರ ಸಂಜೆ ಪ್ರಕಟಿಸಿದ್ದ ಈಶ್ವರಪ್ಪ, ಶಿವಮೊಗ್ಗದಲ್ಲೇ ಉಳಿದಿದ್ದರು.

ಹಲವು ಸಭೆಗಳಲ್ಲಿ ಭಾಗಿ: ಶುಕ್ರವಾರ ಬೆಳಿಗ್ಗೆ ಮನೆಯಿಂದ ಹೊರಟ ಈಶ್ವರಪ್ಪ, ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಬಿಜೆಪಿ ಕಚೇರಿಗಳನ್ನು ಉದ್ಘಾಟಿಸಿದರು. ತಮ್ಮ ಕುಟುಂಬದ ಒಡೆತನದ ಶುಭಶ್ರೀ ಕಲ್ಯಾಣ ಮಂಟವನ್ನೂ ಉದ್ಘಾಟಿಸಿದರು. ಬಳಿಕ ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾದರು.

ಮಧ್ಯಾಹ್ನ ಶಿವಮೊಗ್ಗದಿಂದ ಹೊರಟ ಈಶ್ವರಪ್ಪ ಅವರ ಹಿಂದೆ ಬಿಜೆಪಿ ಬಾವುಟ ಕಟ್ಟಿದ್ದ 150ಕ್ಕೂ ಹೆಚ್ಚು ವಾಹನಗಳಲ್ಲಿ ಬೆಂಬಲಿಗರೂ ಬಂದರು. ಬೆಂಗಳೂರಿನವರೆಗೂ ಶಕ್ತಿ ಪ್ರದರ್ಶನ ಮಾಡುತ್ತಾ ಪ್ರಯಾಣಿಸಿದರು. ಮಾರ್ಗ ಮಧ್ಯದಲ್ಲಿ ತಿಪಟೂರಿನಲ್ಲಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ನಿವಾಸಕ್ಕೆ ಭೇಟಿ ನೀಡಿದರು. ತುಮಕೂರು ಸಿದ್ದಗಂಗಾ ಮಠಕ್ಕೆ ತೆರಳಿ ಆಶೀರ್ವಾದ ಪಡೆದು ಬಂದರು.

ಬೆಂಬಲಿಗರ ಪ್ರತಿಭಟನೆ: ರಾತ್ರಿ 8.15ರ ಸುಮಾರಿಗೆ ಈಶ್ವರಪ್ಪ ಅವರು ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರಿ ನಿವಾಸ ತಲುಪಿದರು. ಗದಗ ಜಿಲ್ಲಾ ಪ್ರವಾಸದಲ್ಲಿದ್ದ ಮುಖ್ಯಮಂತ್ರಿಯವರೂ ವಿಶೇಷ ವಿಮಾನದಲ್ಲಿ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದು, ಅಲ್ಲಿಂದ ನಿವಾಸಕ್ಕೆ ಬಂದರು.

ಶಿವಮೊಗ್ಗದಿಂದ ಬಂದಿದ್ದ ಈಶ್ವರಪ್ಪ ಅವರ ನೂರಾರು ಬೆಂಬಲಿಗರು ಮುಖ್ಯಮಂತ್ರಿ ನಿವಾಸದ ಎದುರು ಜಮಾಯಿಸಿದರು. ಪೊಲೀಸರು ಬ್ಯಾರಿಕೇಡ್‌ ಹಾಕಿ ಅವರನ್ನು ತಡೆದರು. ಈಶ್ವರಪ್ಪ ರಾಜೀನಾಮೆ ಸಲ್ಲಿಕೆಗೆ ಮುಂದಾಗುತ್ತಿದ್ದಂತೆಯೇ ಹೊರಗೆ ಸೇರಿದ್ದ ಬೆಂಬಲಿಗರು ಘೋಷಣೆ ಕೂಗಲಾರಂಭಿಸಿದರು. ರಾಜೀನಾಮೆ ನೀಡದಂತೆ ಒತ್ತಾಯಿಸಿದರು. ಈಶ್ವರಪ್ಪ ಅವರಿಗೆ ಜೈಕಾರ
ಹಾಕಿದ ಬೆಂಬಲಿಗರು, ‘ಜೈ ಶ್ರೀರಾಮ್‌’, ‘ಹಿಂದೂ ಹುಲಿ’ ಮತ್ತಿತರ ಘೋಷಣೆ ಹಾಕಿದರು. ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಧಿಕ್ಕಾರವನ್ನೂ ಕೂಗಿದರು.

ಬೆಂಬಲಿಗರ ಘೋಷಣೆಗಳ ಅಬ್ಬರದ ನಡುವೆಯೇ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಈಶ್ವರಪ್ಪ, ‘ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂಬ ಒಂದು ಸಾಲಿನ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಶಿವಮೊಗ್ಗದಿಂದ ಬಂದವರ ಪೈಕಿ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್‌ ಸುನೀತಾ ಅವರಿಗೆ ಮಾತ್ರ ಮುಖ್ಯಮಂತ್ರಿ ನಿವಾಸದೊಳಕ್ಕೆ ಪ್ರವೇಶ ನೀಡಲಾಗಿತ್ತು. ಸಚಿವರಾದ ಬೈರತಿ ಬಸವರಾಜ, ಎಂ.ಟಿ.ಬಿ. ನಾಗರಾಜು, ಆರಗ ಜ್ಞಾನೇಂದ್ರ, ಶಾಸಕ ರಮೇಶ ಜಾರಕಿಹೊಳಿ ಅವರು ಈಶ್ವರಪ್ಪ ಅವರ ಜತೆಗಿದ್ದರು.

ಅಂಗೀಕಾರ: ಈಶ್ವರಪ್ಪ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಬೊಮ್ಮಾಯಿ ರಾಜಭವನಕ್ಕೆ ಕಳುಹಿಸಿದ್ದು, ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಶುಕ್ರವಾರ ತಡರಾತ್ರಿ ಅಂಗೀಕರಿಸಿದರು.

‘ಬಂಧನ ಅಧಿಕಾರಿಗಳ ವಿವೇಚನೆಗೆ’

ಹುಬ್ಬಳ್ಳಿ/ಗದಗ: ‘ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸಬೇಕೇ ಬೇಡವೇ ಎಂಬುದನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ತೀರ್ಮಾನಿಸುತ್ತಾರೆ’ ಎಂದು ಮುಖ್ಯಮಂತ್ರಿ‌ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಶುಕ್ರವಾರ ಮಾತನಾಡಿದ ಅವರು, ‘ಈಗಾಗಲೇ ಈಶ್ವರಪ್ಪ ಅವರೊಂದಿಗೆ ಮಾತನಾಡಿದ್ದೇನೆ. ತಾವು ನಿರಪರಾಧಿಯಾಗಿದ್ದು, ಆದಷ್ಟು ಬೇಗನೆ ತನಿಖೆ ಮಾಡಿದರೆ ಆರೋಪದಿಂದ ಮುಕ್ತನಾಗುತ್ತೇನೆ ಎಂದಿದ್ದಾರೆ. ಕಾರ್ಯಾದೇಶ ಇಲ್ಲದೆ ಸಂತೋಷ್‌ ಕಾಮಗಾರಿ ಮಾಡಿದ್ದಾರೆ‌‌. ಇವೆಲ್ಲವನ್ನೂ ನೋಡಿದಾಗ, ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿದಾಗ ಸತ್ಯಾಂಶ ಹೊರಬರಲಿದೆ’ ಎಂದರು. ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂಬ ಕಾಂಗ್ರೆಸ್ ನಾಯಕರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಅವರು, ‘ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರ ವಿರುದ್ಧ ಆರೋಪ ಮಾಡಿ, ಪೊಲೀಸ್ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ರಾಜ್ಯದ ಪೊಲೀಸರಾಗಲಿ ಅಥವಾ ಸಿಬಿಐನವರಾಗಲಿ ಜಾರ್ಜ್ ಅವರನ್ನು ಬಂಧಿಸಿರಲಿಲ್ಲ. ತನಿಖೆ ಆಧರಿಸಿ, ಈಶ್ವರಪ್ಪ ಅವರನ್ನು ಬಂಧಿಸಬೇಕೇ ಬೇಡವೇ ಎಂಬುದನ್ನು ಪೊಲೀಸರು ನಿರ್ಧರಿಸಲಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್‌ನವರು ತನಿಖಾಧಿಕಾರಿ ಆಥವಾ ನ್ಯಾಯಾಧೀಶ ಆಗುವ ಅವಶ್ಯಕತೆ ಇಲ್ಲ. ತನಿಖೆಗೆ ಮುಕ್ತ ಅವಕಾಶ ನೀಡಬೇಕು’ ಎಂದರು.

29 ಪಿಡಿಒಗಳ ವರ್ಗಾವಣೆಗೆ ಆದೇಶ

ಮೈಸೂರು ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 29 ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ ಆದೇಶ ಗುರುವಾರ ರಾತ್ರಿ ಹೊರಬಿದ್ದಿದೆ. ವರ್ಗಾವಣೆ ಆದೇಶಏಪ್ರಿಲ್‌ 12ರಂದು ಹೊರಡಿಸಲಾಗಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಈಶ್ವರಪ್ಪ ಗುರುವಾರ ಸಂಜೆ ಹೇಳಿಕೆ ನೀಡಿದ ಕೆಲ ಗಂಟೆಗಳ ಬಳಿಕ ಈ ಆದೇಶದ ಪ್ರತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತು.

ಮೊಮ್ಮಗನ ಮದುವೆಗೆ ಆಹ್ವಾನ

ಈಶ್ವರಪ್ಪ ಅವರ ಮೊಮ್ಮಗ ಪೃಥ್ವಿರಾಜ್‌ ಮದುವೆ ಇದೇ 21ರಂದು ಶಿವಮೊಗ್ಗ
ದಲ್ಲಿ ನಡೆಯಲಿದೆ. ಈಶ್ವರಪ್ಪ ರಾಜೀನಾಮೆ ಪತ್ರದ ಜತೆಯಲ್ಲೇ ಮೊಮ್ಮಗನ ಮದುವೆಯ ಆಹ್ವಾನ ಪತ್ರಿಕೆಯನ್ನೂ ಮುಖ್ಯಮಂತ್ರಿಗೆ ನೀಡಿದರು.

‘ಕುತಂತ್ರ ಬಯಲಿಗೆಳೆಯಲು ಮನವಿ’

‘ನನ್ನ ಮೇಲೆ ಆರೋಪ ಬಂದಿದೆ. ಈ ಕಾರಣಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಬಿಜೆಪಿ ವರಿಷ್ಠರ ಜತೆ ಮಾತನಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ಆದರೆ, ಸರ್ಕಾರ ಮತ್ತು ಸಂಘ ಪರಿವಾರಕ್ಕೆ ಮುಜುಗರ ಆಗಬಾರದು ಎಂಬ ಉದ್ದೇಶದಿಂದ ರಾಜೀನಾಮೆ ಸಲ್ಲಿಸಿದ್ದೇನೆ’ ಎಂದು ರಾಜೀನಾಮೆ ಬಳಿಕ ಕೆ.ಎಸ್‌. ಈಶ್ವರಪ್ಪ ಹೇಳಿದರು. ‘ಈಗ ನನ್ನ ಮೇಲೆ ಆರೋಪ ಬಂದಿದೆ. ಅದರಿಂದ ಮುಕ್ತನಾಗಬೇಕಿದೆ. ಈ ಪ್ರಕರಣದ ಹಿಂದೆ ಇರುವ ರಾಜಕೀಯ ಷಡ್ಯಂತ್ರವನ್ನುಬಯಲಿಗೆಳೆಯಲು ಸಮಗ್ರವಾದ ತನಿಖೆ ನಡೆಸುವಂತೆಯೂ ಮನವಿ ಮಾಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT