ಮಂಗಳವಾರ, ಏಪ್ರಿಲ್ 20, 2021
31 °C
ಪದವಿ ಪೂರೈಸಿದ 95 ವಿದ್ಯಾರ್ಥಿಗಳು

ಇಎಸ್‌ಐಸಿ ಮೂರನೇ ಘಟಿಕೋತ್ಸವ ಸಮಾರಂಭ: ವೈದ್ಯ ಹುದ್ದೆಯ ಬೆನ್ನಲ್ಲೇ ಸೇವೆಯ ಪದವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿನ ಕಾರ್ಮಿಕರ ರಾಜ್ಯ ವಿಮಾ ಕಾರ್ಪೊರೇಷನ್‌ನ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ (ಇಎಸ್‌ಐಸಿ)ಯಲ್ಲಿ ಶನಿವಾರ ಸಂಭ್ರಮ ಮನೆ ಮಾಡಿತ್ತು. ಕಾಲೇಜಿನ ಮೂರನೇ ಬ್ಯಾಚ್‌ನ ಪದವಿ ಪ್ರದಾನ ಸಮಾರಂಭ ‘ಆದ್ಯಂತ’ ವೈಭವಕ್ಕೆ ಬೃಹತ್ತಾದ ಸಭಾಂಗಣ ಸಾಕ್ಷಿಯಾಯಿತು. ವೈದ್ಯ ಪದವಿ ಪೂರೈಸಿದ 95 ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಪದವಿ ಸ್ವೀಕರಿಸುತ್ತಿದ್ದರೆ ಪ್ರೇಕ್ಷಕರ ಗ್ಯಾಲರಿಯಿಂದ ನಿರಂತರ ಕರತಾಡನ, ಶಹಬ್ಬಾಷ್‌ಗಿರಿ ಮೊಳಗುತ್ತಿತ್ತು.

‘ಕನ್ನಡಿಗರು–2015’ ಎಂದು ವಿಶೇಷ ಹೆಸರಿನಿಂದ ಗುರುತಿಸಿದ ಈ ಬ್ಯಾಚ್‌ನ ವೈದ್ಯರು ಹಲವು ವೈಶಿಷ್ಟ್ಯಗಳಿಗೆ ಕಾರಣರಾದರು. 

’2015ರ ತಂಡದ ಕನ್ನಡಿಗರೇ ನಿಮಗೆ ಸ್ವಾಗತ...’ ಎಂದು ಕಾರ್ಯಕ್ರಮ ಆಯೋಜಕರು ಕೂಗುತ್ತಿದ್ದಂತೆಯೇ ಪದವೀಧರರು ಸಾಲಾಗಿ ಬಂದರು. ತಮ್ಮ ಮಕ್ಕಳು, ಸ್ನೇಹಿತರು, ಸಹೋದರ– ಸಹೋದರಿಯರು ವಿಶೇಷ ವಿನ್ಯಾಸದ ಕರಿ ಗೌನ್‌, ಹ್ಯಾಟ್‌ ಧರಿಸಿ ಬರುತ್ತಿರುವುದನ್ನು ಪಾಲಕರು, ಪೋಷಕರು ಕಣ್ತುಂಬಿಕೊಂಡರು. ಚಪ್ಪಾಳೆ ತಟ್ಟಿ, ಸಿಳ್ಳೆ ಹಾಕಿ ಅಭಿನಂದಿಸಿದರು.

ಪ್ರತಿಭೆಗಿಂತ ನಡವಳಿಕೆ ಮುಖ್ಯ: ಪದವಿ ಪ್ರಧಾನ ಮಾಡಿ ಮಾತನಾಡಿದ ಬೆಂಗಳೂರಿನ ಫೋರ್ಟೀಸ್‌ ಆಸ್ಪತ್ರೆಯ ಮುಖ್ಯಸ್ಥ ಡಾ.ವಿವೇಕ ಜವಳಿ, ‘ವೈದ್ಯ ವೃತ್ತಿಯಲ್ಲಿ ಪ್ರತಿಭೆಗಿಂತ ನಿಮ್ಮ ನಡವಳಿಕೆ ಹೆಚ್ಚು ಬೆಲೆ ಸಿಗುತ್ತದೆ. ನಿಮ್ಮ ವ್ಯಕ್ತಿತ್ವವನ್ನು ನೀವೇ ಪದೇಪದೇ ಫೀಲ್ಟರ್‌ ಮಾಡಿಕೊಳ್ಳುವ ಮೂಲಕ ನಡವಳಿಕೆ ತಿದ್ದಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ವೈದ್ಯಕೀಯ ಪದವಿ ಮುಗಿದ ಮೇಲೆ ಓದು, ಹುಡುಕಾಟ ಬಿಟ್ಟವರು ಯಶಸ್ವಿ ವೈದ್ಯರಾಗುವುದಿಲ್ಲ. ವೈದ್ಯನಲ್ಲಿ ಎಳೆ ಮಗುವನಂಥ ಮನಸ್ಸು ಇರಬೇಕು. ಕೈಗೆ ಸಿಕ್ಕ ಎಲ್ಲ ಹೊಸ ವಸ್ತುವನ್ನೂ ಭೇದಿಸಿ ಹುಡುಕುವ ಗುಣ ಬೇಕು. ಅವಕಾಶಗಳು ಎಲ್ಲರಿಗೂ ಸಮಾನವಾಗಿಯೇ ಸಿಗುತ್ತವೆ. ಆದರೆ, ಬಳಸಿಕೊಳ್ಳುವವರಲ್ಲಿ ವ್ಯತ್ಯಾಸವಾಗುತ್ತದೆ. ಭವಿಷ್ಯದ ವೈದ್ಯರಿಗೆ ಜೆನೆಟಿಕ್‌, ರೋಬಾಟಿಕ್‌, ಮಾಹಿತಿ ತಂತ್ರಜ್ಞಾನ ಹಾಗೂ ನ್ಯಾನೊ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಸವಾಲುಗಳು ಎದುರಾಗುತ್ತವೆ. ಈ ಕ್ಷೇತ್ರಗಳಲ್ಲಿ ಹೆಚ್ಚು ಗಮನ ಹರಿಸಿ’ ಎಂದೂ ಅವರು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಸ್‌. ಸಚ್ಚಿದಾನಂದ ಮಾತನಾಡಿ, ‘ವೈದ್ಯ ಎಂಬ ಪದವಿ ಜತೆಗೆ ‘ಸೇವೆ’ ಎಂಬ ಪದವಿಯೂ ನಿಮ್ಮ ಬೆನ್ನಿಗೇರುತ್ತದೆ. ಹಣ, ಹೆಸರು ಮಾಡುವ ಉದ್ದೇಶದಿಂದ ಅಡ್ಡದಾರಿ ಹಿಡಿದರೆ ಯಶಸ್ಸು ಸಿಗುವುದಿಲ್ಲ. ವೃತ್ತಿ ಬದುಕನ್ನು ಪ್ರೀತಿಸುತ್ತ, ರೋಗಿಗಳನ್ನು ಗೌರವಿಸುತ್ತ ನಡೆಯಿರಿ. ಹಣ, ಹೆಸರು, ಯಶಸ್ಸು ಎಲ್ಲವೂ ನಿಮ್ಮನ್ನೇ ಬೆನ್ನತ್ತಿ ಬರುತ್ತದೆ’ ಎಂದರು.

‘ಕಾಲೇಜಿನಲ್ಲಿ ನೀವು ಮಾಡುವ ತಪ್ಪುಗಳನ್ನು ತಿದ್ದಲು ಮಾರ್ಗದರ್ಶಕರು ಇರುತ್ತಾರೆ. ಆದರೆ, ನಾಳೇ ನೀವು ಕಾಲಿಡುತ್ತಿರುವುದು ಸಮಾಜವೆಂಬ ಸಾರ್ವಜನಿಕ ವಿಶ್ವವಿದ್ಯಾಲಯ. ಅಲ್ಲಿ ತಪ್ಪುಗಳಿಗೆ ಅವಕಾಶ ನೀಡಕೂಡದು. ಏಕೆಂದರೆ ತಿದ್ದಲು ಯಾರೂ ಇರುವುದಿಲ್ಲ’ ಎಂದೂ ಹೇಳಿದರು.

ಇಎಸ್‌ಐಸಿ ಡೀನ್‌ ಡಾ.ಇವಾನಾ ಲೋಬೊ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಡೀನ್ ಡಾ.ನಾಗರಾಜ, ವೈದ್ಯಕೀಯ ಅಧೀಕ್ಷಕ ಡಾ‌‌.ಸಿ. ಅರುಣಕುಮಾರ್, ಡಾ.ಅನಿಲ್ ದೊಡ್ಡಮನಿ, ಡಾ.ಐ.ಅಮೃತಾ ಸ್ವಾತಿ, ಡಾ‌.ಪವನ್‌ಕುಮಾರ್ ಇದ್ದರು.

ಪೊಲೀಸ್ ಕಾನ್‌ಸ್ಟೆಬಲ್‌ ಪುತ್ರನಿಗೆ ಏಳು ಪದಕ

ಕಲಬುರ್ಗಿಯ ತಾಜ್‌ಸುಲ್ತಾನ್‌ಪುರ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಆಗಿರುವ ಸುರೇಂದ್ರಕುಮಾರ್‌ ಹಾಗೂ ಗೃಹಿಣಿ ಅನುಸೂಯಾ ಅವರ ಪುತ್ರ ಅಕ್ಷಯ್‌ಕುಮಾರ್ ಅವರು ವೈದ್ಯ ಪದವಿ ಜತೆಗೆ ವಿವಿಧ ಏಳು ಪದಕಗಳನ್ನೂ ಪಡೆದು ಗಮನ ಸೆಳೆದರು. ಎಂ.ಎಸ್‌ ಮಾಡುವ ಕನಸು ಕಂಡಿರುವ ಅಕ್ಷಯ್‌ಕುಮಾರ್‌ ಮೂರನೇ ಬ್ಯಾಚ್‌ನಲ್ಲಿ ಸೆಕೆಂಡ್‌ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ‍‍ಒಬಿಜಿ, ಪಿಡಿಯಾಟ್ರಿಕ್, ಮೆಡಿಸಿನ್‌, ಫಾರ್ಮೆಕಾಲಜಿ, ಪಿಎಸ್‌ಎಂ ವಿಭಾಗಗಳಲ್ಲಿ ತೋರಿದ ಪ್ರತಿಭೆಗೆ ಅವರು ಪದಕ ಪಡೆದರು.

ತುಮಕೂರಿನ ಅನು ಎಸ್.ಟಿ. ಅವರು ಕೂಡ ಐದು ಪದಕಗಳನ್ನು ಪಡೆಯುವ ಮೂಲಕ ಮೂರನೇ ಟಾಪರ್‌ ಆಗಿ ಹೊರಹೊಮ್ಮಿದರು. ಶಿರಾ ಮೂಲದವರಾದ ಡಾ.ತಿಮ್ಮಣ್ಣ ಹಾಗೂ ಗೃಹಿಣಿ ವಸಂತಾ ಅವರ ಪುತ್ರಿಯಾದ ಅನು ಅವರಿಗೆ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಹಂಬಲವಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು