ಗುರುವಾರ , ಆಗಸ್ಟ್ 18, 2022
24 °C
28ರಂದು ಡಿಸಿಗಳ ಜೊತೆ ವಿಡಿಯೊ ಸಂವಾದ, ಶಿಕ್ಷಕರ‌ ವರ್ಗಾವಣಾ ವೇಳಾಪಟ್ಟಿ ಶೀಘ್ರ

ಲಾಕ್‌ಡೌನ್ ಜಾರಿಯಲ್ಲಿರುವ ಜಿಲ್ಲೆಗಳ ಶಿಕ್ಷಕರಿಗೆ ವಿನಾಯಿತಿ: ಸುರೇಶ್‌ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪ್ರಸಕ್ತ ಸಾಲಿನ (2021–22) ಶೈಕ್ಷಣಿಕ ಮಾರ್ಗದರ್ಶಿ ಸೂತ್ರಗಳನ್ನು ಈಗಾಗಲೇ ಹೊರಡಿಸಲಾಗಿದ್ದರೂ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇನ್ನೂ ಲಾಕ್ ಡೌನ್ ಜಾರಿಯಲ್ಲಿದೆ. ಈ ಜಿಲ್ಲೆಗಳಲ್ಲಿ ಚಲನವಲನಕ್ಕೆ ತೊಂದರೆ ಇರುವುದರಿಂದ, ಅಲ್ಲಿನ ಶಿಕ್ಷಕರು ಲಾಕ್‌ಡೌನ್ ತೆರವಾದ ದಿನದಿಂದ ಶಾಲೆಗಳಿಗೆ ಹಾಜರಾಗಲು ಅವಕಾಶ ನೀಡಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ತಿಳಿಸಿದರು.

ಇಲಾಖೆಯ ಅಧಿಕಾರಿಗಳ ಜೊತೆ ಸೋಮವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಮಂಗಳವಾರದಿಂದ ಶಿಕ್ಷಕರು ಶಾಲೆಗಳಿಗೆ ಹಾಜರಾಗಿ ಮಕ್ಕಳ ನೋಂದಣಿ ಆರಂಭಿಸಬೇಕಾಗಿದೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಯಲಿದೆ. ಆ ಜಿಲ್ಲೆಗಳ ಶಿಕ್ಷಕರ ಚಲನವಲನಕ್ಕೆ ತೊಂದರೆ ಆಗಿರುವ ಕಾರಣ, ಅವರು ಲಾಕ್‌ಡೌನ್ ಪೂರ್ಣಗೊಂಡ ಬಳಿಕ ಶಾಲೆಗಳಿಗೆ ಹಾಜರಾಗುವಂತೆ ಸುತ್ತೋಲೆ ಹೊರಡಿಸಲಾಗಿದೆ‌’ ಎಂದರು.

ಮೌಲ್ಯಾಂಕನ ಅವಧಿ ವಿಸ್ತರಣೆ: ‘ಹಲವು ಉಪನ್ಯಾಸಕ ಸಂಘಟನೆಗಳ ಮನವಿ ಮಾಡಿದ್ದರಿಂದ ಮೊದಲ ಪಿಯುಸಿ ಮೌಲ್ಯಾಂಕನ ಪ್ರಕ್ರಿಯೆಯನ್ನು ಎಲ್ಲ ಜಿಲ್ಲೆಗಳ ಲಾಕ್‌ಡೌನ್ ಅವಧಿ ಪೂರ್ಣಗೊಳ್ಳುವವರೆಗೆ ಸಮಯ ವಿಸ್ತರಿಸಿ ಆದೇಶ ಹೊರಡಿಸಲಾಗುವುದು. ಈ ಕುರಿತಂತೆ ಪದವಿಪೂರ್ವ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ’ ಎಂದರು.

ಚೈಲ್ಡ್ ಪ್ರೊಫೈಲ್ ನಿಯಮಿತ ದಾಖಲೆ: ‘ಈ ಬಾರಿ ನಿಗದಿತ ಅವಧಿಯ ಮೌಲ್ಯಮಾಪನ ಪ್ರಕ್ರಿಯೆಯನ್ನು ಹೆಚ್ಚು ಸಮರ್ಥವಾಗಿ ಜಾರಿಯಲ್ಲಿಡುವ ಅವಶ್ಯಕತೆ ಇದೆ. ಪ್ರತಿ ಸೂಚಿತ ಅವಧಿಗೆ ವಿದ್ಯಾರ್ಥಿಗಳ ಚೈಲ್ಡ್ ಪ್ರೊಫೈಲ್‌ಗಳನ್ನು ನಿಯಮಿತವಾಗಿ ದಾಖಲಿಸುವ, ಕಲಿಕಾ ಸಾಮರ್ಥ್ಯಗಳನ್ನು ಅಳೆಯುವ ಮಾನದಂಡಗಳಾಗಿ ರೂಪಿಸುವ ಸದೃಢ ವ್ಯವಸ್ಥೆಯನ್ನು ಜಾರಿಯಲ್ಲಿಡುವ ಕ್ರಮ ರೂಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಅತ್ಯವಶ್ಯಕವಾಗಿದ್ದು, ಇಂಥ ಸಂದರ್ಭದಲ್ಲಿ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಿಯಾಯೋಜನೆ ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.

ವಿಡಿಯೊ ಸಂವಾದ: ‘ಈ ಬಾರಿಯ ಎರಡು ದಿನಗಳ ಎಸ್ಸೆಸ್ಸೆಲ್ಸಿ ಪರೀಕ್ಷೆ ನಿರ್ವಹಣೆ ಕುರಿತಂತೆ ಇದೇ 28ರಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ವಿಡಿಯೊ ಸಂವಾದ ಸಭೆ ನಡೆಸಲಾಗುವುದು’ ಎಂದರು.

ಶಿಕ್ಷಕರಿಗೆ ಕೋವಿಡ್ ಲಸಿಕೆ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೊಠಡಿಯ ಮೇಲ್ವಿಚಾರಕರಿಗೆ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆಯನ್ನು ಪರೀಕ್ಷೆಗೆ ಮೊದಲೇ ಪೂರ್ಣಗೊಳಿಸಲು ಜಿಲ್ಲಾಡಳಿತದೊಂದಿಗೆ ಸಮನ್ವಯತೆ ಸಾಧಿಸಿ ಕ್ರಮ ವಹಿಸುವಂತೆ ಸೂಚಿಸಲಾಗಿದೆ ಎಂದೂ ಹೇಳಿದರು.

ವೇಳಾಪಟ್ಟಿ ಶೀಘ್ರ: ಶಿಕ್ಷಕರ ವರ್ಗಾವಣಾ ಪ್ರಕ್ರಿಯೆ ಕುರಿತಂತೆ ನಿಯಮಗಳ ಆಕ್ಷೇಪಣಾ ಸಲ್ಲಿಕೆ ಅವಧಿ ಪೂರ್ಣಗೊಂಡ ತಕ್ಷಣ, ಅಧಿಸೂಚನೆ ಹೊರಡಿಸಿ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲಾಗುವುದು. ತಂತ್ರಜ್ಞಾನಾಧಾರಿತ ವರ್ಗಾವಣಾ ಪ್ರಕ್ರಿಯೆ ನಡೆಯಲಿದೆ’ ಎಂದರು.

ಪ್ಯಾಕೇಜ್ ಪರಿಹಾರ ನೇರ‌ ಶಿಕ್ಷಕರ‌ ಖಾತೆಗೆ: ಖಾಸಗಿ ಶಾಲಾ ಶಿಕ್ಷಕರಿಗೆ ಮುಖ್ಯಮಂತ್ರಿ ಘೋಷಿಸಿರುವ ಪ್ಯಾಕೇಜ್ ಪರಿಹಾರವನ್ನು ಫಲಾನುಭವಿಗಳಿಗೆ ನೇರವಾಗಿ ವಿತರಿಸುವ ಪ್ರಕ್ರಿಯೆಯನ್ನು ಕ್ಷಿಪ್ರಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಿಕ್ಷಕರ, ಶಿಕ್ಷಕೇತರರ ಹಾಗೂ ಅತಿಥಿ ಶಿಕ್ಷಕರ‌‌ ಬ್ಯಾಂಕ್‌ ಖಾತೆಗಳ‌ ವಿವರಗಳನ್ನು ಶೀಘ್ರ ಸಂಗ್ರಹಿಸಿ, ಅನುದಾನವನ್ನು ನೇರ ಶಿಕ್ಷಕರ ಖಾತೆಗಳಿಗೆ ವರ್ಗಾಯಿಸಲಾಗುವುದು’ ಎಂದರು.

ಶಿಕ್ಷಣ ಇಲಾಖೆಯ ಪ್ರಧಾನ‌ ಕಾರ್ಯದರ್ಶಿ‌ ಎಸ್.ಆರ್. ಉಮಾಶಂಕರ್, ಸಾರ್ವಜನಿಕ‌ ಶಿಕ್ಷಣ‌ ಇಲಾಖೆಯ ಆಯುಕ್ತ ಅನ್ಬುಕುಮಾರ್, ಪದವಿಪೂರ್ವ ಶಿಕ್ಷಣ ನಿರ್ದೇಶಕಿ‌ ಸ್ನೇಹಲ್ ಸಭೆಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು