ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂವಾದ: ಸರ್ಕಾರಗಳಿಗೆ ತುರ್ತು ಪರಿಸ್ಥಿತಿ ಪಾಠವಾಗಲಿ

Last Updated 26 ಜೂನ್ 2021, 18:37 IST
ಅಕ್ಷರ ಗಾತ್ರ

ಬೆಂಗಳೂರು: 'ತುರ್ತು ಪರಿಸ್ಥಿತಿಯು ಭಾರತೀಯ ಇತಿಹಾಸದ ಕರಾಳ ಅಧ್ಯಾಯ. ಇದರಿಂದ ಆಳುವ ಸರ್ಕಾರಗಳು ಪಾಠ ಕಲಿಯಬೇಕು. ಸರ್ಕಾರದ ದಮನಕಾರಿ ನೀತಿಗಳ ವಿರುದ್ಧ ಜನ ಧ್ವನಿ ಎತ್ತಿದರೆ ಅದನ್ನು ದೇಶದ್ರೋಹ ಎನ್ನಲಾಗದು.ಇದನ್ನು ಅರಿತುಕೊಂಡರೆ ಪ್ರಜಾಪ್ರಭುತ್ವ ಉಳಿಯುತ್ತದೆ. . .’

‘ತುರ್ತು ಪರಿಸ್ಥಿತಿಯ ಹಿಂದೆ–ಮುಂದೆ’ ಎಂಬ ವಿಷಯ ಕುರಿತು ‘ಪ್ರಜಾವಾಣಿ’ ಶನಿವಾರ ಹಮ್ಮಿಕೊಂಡಿದ್ದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.

‘ಈಗ ತುರ್ತು ಪರಿಸ್ಥಿತಿ ಇಲ್ಲ’

‘ತುರ್ತು ಪರಿಸ್ಥಿತಿಯ ಕಲ್ಪನೆ ಯಾರಿಗೂ ಇರಲಿಲ್ಲ. ಇಂದಿರಾಗಾಂಧಿಯವರು ಭ್ರಷ್ಟಾಚಾರವನ್ನು ಪೋಷಣೆ ಮಾಡಿಕೊಂಡು ಬಂದಿದ್ದರು. ಹೀಗಾಗಿ ಜಯಪ್ರಕಾಶ್‌ ನಾರಾಯಣ್‌ ಅವರು ಸಮಗ್ರ ಕ್ರಾಂತಿಗೆ ಕರೆ ನೀಡಿದ್ದರು. ಅದಕ್ಕೆ ಲಕ್ಷಾಂತರ ಯುವಕರು ಬೆಂಬಲ ಸೂಚಿಸಿದ್ದರು.ಸಮಗ್ರ ಕ್ರಾಂತಿಯಿಂದ ದೇಶದಲ್ಲಿ ಬದಲಾವಣೆ ಸಾಧ್ಯ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಭ್ರಮನಿರಸನವಾಯಿತು. ಜನತಾ ಪಕ್ಷದವರು ಕುರ್ಚಿಗಾಗಿ ಕಿತ್ತಾಡಿಕೊಂಡರು. ಹೀಗಾಗಿ ಜನ ಬೇರೆ ಆಯ್ಕೆ ಇಲ್ಲದೆ ಮತ್ತೊಮ್ಮೆ ಕಾಂಗ್ರೆಸ್‌ ಪರವಾಗಿ ಮತ ಚಲಾಯಿಸಿದ್ದರು’.

‘ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಮ್ಮನ್ನು ಬಂಧಿಸಿದ್ದು ತಪ್ಪು, ಎಲ್ಲರನ್ನೂ ಬಿಡುಗಡೆ ಮಾಡಬೇಕು ಎಂಬ ಕೂಗು ಕೇಳಿಬಂದಿತ್ತು. ನ್ಯಾಯಾಲಯಗಳಲ್ಲಿ ವಾದ ಮಂಡಿಸಲಾಯಿತು. ನಮಗೆ ಜೀವಿಸುವ ಹಕ್ಕೇ ಇಲ್ಲ, ನಮ್ಮನ್ನೆಲ್ಲಾ ಕೊಂದರೂ ಯಾರು ಕೇಳುವಂತಿಲ್ಲ ಎಂದು ಅಂದಿನ ಸರ್ಕಾರ ಹೇಳಿತ್ತು’.

‘ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸುವುದು ತಪ್ಪಲ್ಲ. ಅದನ್ನು ದೇಶದ್ರೋಹ ಎಂದೂ ಹೇಳಲಾಗದು. ಆ ಕೆಲಸ ಈಗ ಆಗಿಲ್ಲ. ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು ಬಂಧಿಸಬೇಕಾಗುತ್ತದೆ. ಅದನ್ನು ತಪ್ಪು ಎಂದರೆ ಹೇಗೆ. ತುರ್ತುಪರಿಸ್ಥಿತಿ ವಿರೋಧಿಸಿ ಜೈಲುವಾಸ ಅನುಭವಿಸುತ್ತಿದ್ದವರ ಕಾನೂನು ಹೋರಾಟ ನಡೆಸುತ್ತಿದ್ದ ರಾಮಾ ಜೋಯಿಸರನ್ನು ಇಂದಿರಾಗಾಂಧಿ ಅವರು ಜೈಲಿಗೆ ಹಾಕಿಸಿದ್ದರು. ಆ ಕೆಲಸವನ್ನು ನರೇಂದ್ರ ಮೋದಿ ಮಾಡಿಲ್ಲ. ಮಾಡಲೂಬಾರದು. ಒಂದೊಮ್ಮೆ ಅಂತಹ ಕೆಲಸ ಮಾಡಿದರೆ ಅದನ್ನು ಖಂಡಿಸಬೇಕಾಗುತ್ತದೆ’.

- ಡಿ.ಎಚ್‌.ಶಂಕರಮೂರ್ತಿ,ಬಿಜೆಪಿ ನಾಯಕ

‘ಪ್ರಜಾಪ್ರಭುತ್ವದ ಹೆಸರಿನಲ್ಲಿ ತುರ್ತು ಪರಿಸ್ಥಿತಿ ಹೇರಲಾಗುತ್ತಿದೆ’

‘ಇಂದಿರಾಗಾಂಧಿ ಅವರು20 ಅಂಶಗಳ ಕಾರ್ಯಕ್ರಮ ಜಾರಿಗೆ ತಂದಿದ್ದರಿಂದ ಅನೇಕರಿಗೆ ಅನುಕೂಲವಾಯಿತು. ಭೂಮಾಲೀಕರು, ಬಂಡವಾಳಶಾಹಿಗಳು ಹಾಗೂ ಬಡ್ಡಿದಾರರ ಕೈಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕೋಟ್ಯಂತರ ಮಂದಿ ಅಸ್ಪೃಶ್ಯರ ಬಿಡುಗಡೆಯ ಆಶಾಕಿರಣವಾಗಿ ನಮಗೆ ತುರ್ತು ಪರಿಸ್ಥಿತಿ ಗೋಚರಿಸಿತ್ತು. ತುರ್ತು ಪರಿಸ್ಥಿತಿಯನ್ನು ಎರಡನೇ ಸ್ವಾತಂತ್ರ್ಯ ಹೋರಾಟ ಎಂದು ಕರೆಯಲಾಗುತ್ತದೆ. ಎರಡನೇ ಸ್ವಾತಂತ್ರ್ಯ ಹೋರಾಟದಲ್ಲಿ ಬಹಳ ಸಕ್ರಿಯವಾಗಿ ಭಾಗವಹಿಸಿದ್ದವರುಮೊದಲ ಸ್ವಾತಂತ್ರ್ಯ ಹೋರಾಟದಲ್ಲಿ ಇರಲಿಲ್ಲ’.

‘ತುರ್ತು ಪರಿಸ್ಥಿತಿಯಿಂದ ನಾವು ಪಾಠ ಕಲಿತಿದ್ದೇವೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. 2014ರಿಂದ 2019ರವರೆಗೆ ದೇಶದ್ರೋಹದ ಕಾನೂನಿನ ಅಡಿಯಲ್ಲಿ326 ಪ್ರಕರಣಗಳನ್ನು ದಾಖಲಿಸಲಾಗಿದೆ. 2019ರ ನವೆಂಬರ್‌ನಲ್ಲಿ ಜಾರ್ಖಂಡ್‌ನ ಕುಂತಿ ಜಿಲ್ಲೆಯಲ್ಲಿ 10 ಸಾವಿರ ಮಂದಿ ಆದಿವಾಸಿಗಳ ಮೇಲೆ ಐಪಿಸಿ ಸೆಕ್ಷನ್‌ 124–ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ತುರ್ತು ಪರಿಸ್ಥಿತಿಗಿಂತಲೂ ಭೀಕರವಾದದ್ದು. ಸುಧಾ ಭಾರದ್ವಾಜ್‌, ರೋನಾ ವಿಲ್ಸನ್‌, ವರವರರಾವ್‌ ಹೀಗೆ ಅನೇಕರನ್ನು ಭೀಮಾ ಕೋರೆಗಾಂವ್‌ ಪ್ರಕರಣದಡಿಯಲ್ಲಿ ಬಂಧಿಸಿ ಜೈಲಿಗಟ್ಟಲಾಗಿದೆ. ಇದು ತುರ್ತು ಪರಿಸ್ಥಿತಿಗಿಂತಲೂ ಬಹಳ ಭಿನ್ನವೇನಲ್ಲ’.

‘ಈಗಿನ ಸರ್ಕಾರ ಪ್ರಜಾಪ್ರಭುತ್ವದ ಹೆಸರಿನಲ್ಲಿ ತುರ್ತು ಪರಿಸ್ಥಿತಿ ಹೇರುತ್ತಿದೆ. ನ್ಯಾಯಾಂಗಕ್ಕೆ ಇದ್ದ ಪಾವಿತ್ರ್ಯತೆಯೇ ಮರೆಯಾಗಿದೆ.ಇನ್ನೊಂದು ತುರ್ತು ಪರಿಸ್ಥಿತಿ ಈ ದೇಶದಲ್ಲಿ ಬರಬಾರದು. ಇದಕ್ಕೆ ಹಿಂದಿನ ತುರ್ತು‍ ಪರಿಸ್ಥಿತಿ ಪಾಠವಾಗಬೇಕು’.

- ಎಲ್‌.ಹನುಮಂತಯ್ಯ,ರಾಜ್ಯಸಭೆಯ ಕಾಂಗ್ರೆಸ್ ಸದಸ್ಯ

‘ಜನರಿಗೆ ಕರಾಳತೆಯ ಬಿಸಿ ತಟ್ಟಿರಲಿಲ್ಲ’

‘ಸಂವಿಧಾನದ ಚೌಕಟ್ಟಿನ ಅಡಿಯಲ್ಲೇ ಸಂವಿಧಾನ ವಿರೋಧಿ ಕ್ರಮಗಳು ನಡೆಯುತ್ತಿರುತ್ತವೆ. ಅದು ಆಗಬಾರದು. ಆ ಪಾಠವನ್ನು ತುರ್ತುಪರಿಸ್ಥಿತಿಯಿಂದ ಕಲಿಯಬೇಕು.ತುರ್ತು ಪರಿಸ್ಥಿತಿಯ ವೇಳೆ ಜನ ನಿರಾಳರಾಗಿದ್ದರು. ಅವರಿಗೆ ಈ ಕರಾಳತೆಯ ಬಿಸಿ ತಟ್ಟಲಿಲ್ಲ. ನಾವು ಹಕ್ಕುಗಳ ಬಗ್ಗೆ ಮಾತನಾಡಿದ್ದೆವು. ಅವರು ಬದುಕುವ ಬಗ್ಗೆ ಆಲೋಚಿಸಿದ್ದರು.ತುರ್ತು ಪರಿಸ್ಥಿತಿಯನ್ನು ವಿರೋಧಿಸುತ್ತಿರುವಾಗಲೇ ಈ ಕರಾಳ ಮತ್ತು ನಿರಾಳಗಳ ನಡುವಣ ವೈರುಧ್ಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಅದು ನಿಜವಾದ ಭಾರತೀಯ ರಾಜಕಾರಣದ ಅರ್ಥೈಸುವಿಕೆ’.

‘1977ರಲ್ಲಿ ಇಂದಿರಾಗಾಂಧಿಯವರ ಜೊತೆ ಕಾಂಗ್ರೆಸ್‌ ಕೂಡ ಸೋತಿತ್ತು. ಆದರೆ 1980ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೇರಿತ್ತು. ಕಾಂಗ್ರೆಸ್‌ನ 353 ಮಂದಿ ಸಂಸದರಾಗಿ ಆಯ್ಕೆಯಾಗಿದ್ದರು. ಮೂರೇ ವರ್ಷದಲ್ಲಿ ಜನ ಏಕೆ ಕಾಂಗ್ರೆಸ್‌ಗೆ ಬಹುಮತ ನೀಡಿದ್ದರು. ಭಾರತೀಯ ರಾಜಕಾರಣದಲ್ಲಿ ಈ ಪ್ರಶ್ನೆಗಳೂ ಮುಖ್ಯವಾಗುತ್ತವೆ’.

‘ಕಾಂಗ್ರೆಸ್‌ನವರು ಉದಾರಿಕರಣ, ಜಾಗತೀಕರಣ ಎಂದುಕೊಂಡು ಬಂಡವಾಳಶಾಹಿ ಆರ್ಥಿಕ ನೀತಿಯನ್ನು ಜಾರಿಗೊಳಿಸಿದರು. ಅದು ಈಗ ಆಕ್ರಮಣಶೀಲವಾಗಿ ಅನುಷ್ಠಾನಗೊಳ್ಳುತ್ತಿರುವ ಹೊತ್ತಿನಲ್ಲಿ ವಿಭಜನೆ ಹೆಚ್ಚುತ್ತಿದೆ. ಒಂದು ಕಡೆ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಸಾಮಾನ್ಯ ಜನ ಸಮಾನತೆಯನ್ನು ಬಯಸುತ್ತಿದ್ದಾರೆ. ಇವೆರಡನ್ನು ಒಟ್ಟುಗೂಡಿಸುವುದು ಹೇಗೆ ಎಂಬುದರ ಬಗ್ಗೆ ಯೋಚಿಸಬೇಕಿದೆ. ಸರ್ಕಾರದ ವಿರುದ್ಧದ ಟೀಕೆಗಳನ್ನು ದೇಶದ್ರೋಹವೆಂದು ಭಾವಿಸಿಕೊಳ್ಳುವುದು ಹಾಗೂ ಆರೋಪಿಸುವುದು ತಪ್ಪು’.

- ಬರಗೂರು ರಾಮಚಂದ್ರಪ್ಪ,ಹಿರಿಯ ಸಾಹಿತಿ

ಪೂರ್ಣ ಸಂವಾದ ವೀಕ್ಷಿಸಲು: https://www.facebook.com/prajavani.net/videos/968366210663707/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT