ಶನಿವಾರ, ಸೆಪ್ಟೆಂಬರ್ 18, 2021
24 °C

ಕುಟುಂಬ ರಾಜಕಾರಣ ಪೋಷಿಸುತ್ತಿರುವ ಬಿಜೆಪಿ ಫ್ಯಾಮಿಲಿ ಪಾರ್ಟಿ ಅಲ್ಲವೇ? -ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕುಟುಂಬ ರಾಜಕಾರಣವನ್ನು ಪೋಷಿಸುತ್ತಾ ಇನ್ನೊಬ್ಬರತ್ತ ಕಲ್ಲೆಸೆಯುವ ಬಿಜೆಪಿಗೆ ಬದ್ಧತೆ ಪ್ರದರ್ಶಿಸಬೇಕೆನ್ನುವ ಕನಿಷ್ಠ ಪ್ರಜ್ಞೆ ಇಲ್ಲ’ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಅವರು, ತಂದೆ–ಮಗ ಇಬ್ಬರೂ ಮುಖ್ಯಮಂತ್ರಿಗಾದಿ ಅಲಂಕರಿಸಿದವರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.

ಬಸವರಾಜ ಬೊಮ್ಮಾಯಿಯವರ ತಂದೆ ಎಸ್.ಅರ್. ಬೊಮ್ಮಾಯಿಯವರು ಸಹ ಆಗಸ್ಟ್ 1988 ರಿಂದ ಏಪ್ರಿಲ್ 1989 ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಕುಟುಂಬ ರಾಜಕಾರಣವನ್ನು ಪ್ರಶ್ನಿಸಿ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್, ‘ರಾಜ್ಯ ಬಿಜೆಪಿ ನಾಯಕರೇ ಒಬ್ಬ ಮಾಜಿ ಸಿಎಂ ಪುತ್ರನನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಇನ್ನೊಬ್ಬ ಮಾಜಿ ಸಿಎಂ ಪುತ್ರನನ್ನು ಸಿಎಂ ಮಾಡಿದ್ದೀರಿ. ಬಿಜೆಪಿ ಎಂದರೇ ಫ್ಯಾಮಿಲಿ ಪಾರ್ಟಿ ಅಲ್ಲವೇ!? ಎಂದು ಪ್ರಶ್ನಿಸಿದೆ.

ತಾನೇ ‘ಕುಟುಂಬ ರಾಜಕಾರಣ’ ಎಂಬ ಗಾಜಿನ ಮನೆಯಲ್ಲಿ ಕುಳಿತು ಇತರರತ್ತ ಕಲ್ಲು ಎಸೆಯುವ ಬಿಜೆಪಿಗರ ನಡೆ ಬಂಡತನದ್ದಾಗಿದೆ. ಪುಂಖಾನುಪುಂಖವಾಗಿ ಭಾಷಣ ಬಿಗಿಯುವ ಪ್ರಧಾನಿ ನರೇಂದ್ರ ಮೋದಿಯವರೇ, ರಾಜ್ಯದ ಸಿಎಂ ಆಯ್ಕೆಯಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದೇಕೆ? ಮಾಜಿ ಸಿಎಂ ಪುತ್ರನನ್ನು ಸಿಎಂ ಮಾಡುವಾಗ ತಮ್ಮ ಮಾತು ನೆನಪಾಗಲಿಲ್ಲವೇ ಮೋದಿಯವರಿಗೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ನೆರೆಯಿಂದ ಜನತೆ ಮನೆಗಳನ್ನು ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಜವಾಬ್ದಾರಿಯುತ ಆಡಳಿತ ಪಕ್ಷವೊಂದು ನಡೆದುಕೊಳ್ಳುವ ರೀತಿಯೇ ಇದು? ಸಿಎಂ ಬದಲಾವಣೆ ಪ್ರಹಸನಕ್ಕೆ ಒಂದು ವಾರ, ಸಂಪುಟ ಲಾಭಿಗೆ 15 ದಿನ, ಸಂಪುಟ ಕಸರತ್ತಿಗೆ ಒಂದು ತಿಂಗಳು, ಸಂಪುಟ ರಚನೆಯಾಗಿ ಸಚಿವರು ಕಾರ್ಯಾರಂಭ ಮಾಡಲು ಇನ್ನೊಂದು ತಿಂಗಳು ಬೇಕಾಗಬಹುದು. ಅಷ್ಟರಲ್ಲಿ ಜನತೆ ಬದುಕುಳಿದರೆ ಪುಣ್ಯ’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

‘ಮಂಗಳೂರು ಗಲಭೆ ನಿಯಂತ್ರಣದಲ್ಲಿ ವೈಫಲ್ಯ, ದಲಿತ ಯುವಕನಿಗೆ ಮೂತ್ರ ಕುಡಿಸಿದ ಪೊಲೀಸರು, ಅತ್ಯಾಚಾರ ಆರೋಪಿ ಜಾರಕಿಹೊಳಿ ರಕ್ಷಣೆ, ಹಲ್ಲೆ ಆರೋಪಿ ಸಿದ್ದು ಸವದಿ ರಕ್ಷಣೆ, ಗಲಭೆಕೋರರ ಕೇಸ್ ಹಿಂತೆಗೆತ’ ವಿಚಾರಗಳಿಗೆ ಸಂಬಂಧಿಸಿ ವಿಫಲ ಹಾಗೂ ಪಕ್ಷಪಾತಿ ಗೃಹಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರ ಕೈಯಲ್ಲಿ ರಾಜ್ಯ ಅಧೋಗತಿಗೆ ಇಳಿಯಲಿದೆ ಎಂಬುದಕ್ಕೆ ಕೆಲವು ಸಾಕ್ಷಿಗಳಾಗಿವೆ’ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಇದನ್ನೂ ಓದಿ... ಬೊಮ್ಮಾಯಿ ನೂತನ ಸಿಎಂ: ಇಲ್ಲಿದೆ ಮುಖ್ಯಮಂತ್ರಿಗಾದಿಗೇರಿದ ಅಪ್ಪ–ಮಕ್ಕಳ ಪಟ್ಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು