ಸೋಮವಾರ, ಅಕ್ಟೋಬರ್ 18, 2021
24 °C

'ಅತ್ಯಾಚಾರ; ತ್ವರಿತ ನ್ಯಾಯಾಲಯ ಸ್ಥಾ‍ಪನೆ': ಮೈಸೂರು ಪ್ರಕರಣ ಕುರಿತು ಆರಗ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಾಲಯ (ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌) ಸ್ಥಾಪನೆಗೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರಿಗೆ ಮನವಿ ಮಾಡಲಾಗುವುದು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಮೈಸೂರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಯಮ 69ರಡಿ ವಿಧಾನಸಭೆಯಲ್ಲಿ ಬುಧವಾರ ನಡೆದ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರ ನೀಡಿದ ಅವರು, ‘ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಅವರಿಗೆ ಮನವಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆರೋ‍ಪಿಗಳಿಗೆ ಶೀಘ್ರ ಶಿಕ್ಷೆ ಕೊಡಿಸಲು ವಿಶೇಷ ವಕೀಲರ ನೇಮಕ ಮಾಡಲಾಗುವುದು’ ಎಂದರು.

‘ಅತ್ಯಾಚಾರಕ್ಕೆ ಒಳಗಾದ ಯುವತಿ ಮೈಸೂರಿಗೆ ಬಂದು ಮ್ಯಾಜಿಸ್ಟ್ರೇಟರ ಮುಂದೆ ಹೇಳಿಕೆ ನೀಡಿದ್ದಾರೆ. ಮುಂಬೈಗೆ ಹೋಗಿ ಯುವತಿಯನ್ನು ಕೌನ್ಸೆಲಿಂಗ್‌ ಮಾಡಿ ಮನವೊಲಿಸಿ ಕರೆ ತರುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಅತ್ಯಾಚಾರ ಆರೋಪಿಗಳನ್ನು ಆಂಧ್ರ ಮಾದರಿಯಲ್ಲೇ ಎನ್‌ಕೌಂಟರ್ ಮಾಡಬೇಕಿತ್ತು’ ಎಂದು ಜೆಡಿಎಸ್‌ನ ಸಾ.ರಾ.ಮಹೇಶ್‌ ಅಭಿಪ್ರಾಯಪಟ್ಟರು.

‘ಎನ್‌ಕೌಂಟರ್‌ ಮಾಡಿ ಎಂದು ನಾನು ಹೇಳಲು ಆಗುವುದಿಲ್ಲ’ ಎಂದು ಸಚಿವ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

‘ಅತ್ಯಾಚಾರ ಆರೋಪಿಗಳನ್ನು ಆಂಧ್ರ ಮಾದರಿಯಲ್ಲೇ ಎನ್‌ಕೌಂಟರ್ ಮಾಡಬೇಕಿತ್ತು’ ಎಂದು ಜೆಡಿಎಸ್‌ನ ಸಾ.ರಾ.ಮಹೇಶ್‌ ಅಭಿಪ್ರಾಯಪಟ್ಟರು.

‘ಎನ್‌ಕೌಂಟರ್‌ ಮಾಡಿ ಎಂದು ನಾನು ಹೇಳಲು ಆಗುವುದಿಲ್ಲ’ ಎಂದು ಸಚಿವ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

ಅತ್ಯಾಚಾರ ಪದ ಬಳಸದಿರಿ: ಶಾಸಕಿಯರ ಕೋರಿಕೆ
‘ಸದನದಲ್ಲಿ ಯಾವುದೇ ಸದಸ್ಯರು ರೇಪ್‌ (ಅತ್ಯಾಚಾರ) ಪದ ಬಳಸಬೇಡಿ. ಆ ಪದ ಕೇಳಿದ ಮನಸ್ಸಿಗೆ ನೋವಾಗುತ್ತದೆ’ ಎಂದು ಮಹಿಳಾ ಸದಸ್ಯರಾದ ರೂಪಕಲಾ ಶಶಿಧರ್‌, ಸೌಮ್ಯಾ ರೆಡ್ಡಿ, ಡಾ.ಅಂಜಲಿ ನಿಂಬಾಳ್ಕರ್‌ ಕೋರಿಕೊಂಡರು.

ಕಾಂಗ್ರೆಸ್‌ನ ರೂಪಕಲಾ ಶಶಿಧರ್‌, ‘ನನಗೂ ಮಗಳಿದ್ದಾಳೆ. ನಾವು, ಅಧಿಕಾರಿಗಳು, ಮಾಧ್ಯಮದವರು ರಾತ್ರಿ 8–9 ಗಂಟೆಯವರೆಗೂ ಇಲ್ಲಿದ್ದು ಮನೆಗೆ ಹೋಗುತ್ತೇವೆ. ಹೊರಗಡೆ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದೇ ಆ ಸಂದರ್ಭದಲ್ಲಿ ಗೊತ್ತಾಗುವುದಿಲ್ಲ. ಶಾಲೆಗೆ ಹೋದ ಮಗಳ ಬಗ್ಗೆ ಆತಂಕ ಸದಾ ಕಾಡುತ್ತಾ ಇರುತ್ತದೆ. ಸದನದಲ್ಲಿ ರೇಪ್‌ ಶಬ್ದ ಕೇಳಿದ ಕೂಡಲೇ ಆತಂಕ ಮತ್ತಷ್ಟು ಹೆಚ್ಚಾಗುತ್ತದೆ. ಇತ್ತೀಚಿನ ಘಟನೆಗಳನ್ನು ನೋಡಿದರೆ ಮಕ್ಕಳ ಸುರಕ್ಷತೆ ಬಗ್ಗೆ ಭಯವಾಗುತ್ತದೆ’ ಎಂದರು.

‘ಯಾದಗಿರಿ ಬೆತ್ತಲೆ ಪ್ರಕರಣದಲ್ಲಿ ದೌರ್ಜನ್ಯ ನಡೆಸಿದವರು ರಾಕ್ಷಸರು. ದೌರ್ಜನ್ಯ ನಡೆಸಿದ್ದು ಮಾತ್ರವಲ್ಲದೆ ಅದನ್ನು ವಿಡಿಯೊ ಮಾಡಿ ವಿಕೃತವಾಗಿ ವರ್ತಿಸಿದ್ದಾರೆ. ಅವರನ್ನು ಹುಡುಕಿಕೊಂಡು ಹೋಗಿ ಚಪ್ಪಲಿಯಿಂದ ಹೊಡೆಯಬೇಕು ಎಂದು ಅನಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿನಿಶಾ ನೆರೊ, ‘ಸಂಜೆ ಆರರ ನಂತರ ವಿಶ್ವವಿದ್ಯಾಲಯದ ಯುವತಿಯರು ಹೊರಗೆ ಅಡ್ಡಾಡಬಾರದು ಎಂದು ಮೈಸೂರು ವಿವಿ ಕುಲ‍‍ಪತಿ ಆದೇಶ ಹೊರಡಿಸಿದರು. ಇದು ಪುರುಷ ಮನಸ್ಥಿತಿ. ಹುಡುಗರನ್ನು ಒಳಗೆ ಕೂಡಿ ಹಾಕಿ ಹುಡುಗಿಯರನ್ನು ಹೊರಗೆ ಬಿಟ್ಟರೆ ದೌರ್ಜನ್ಯ ಪ್ರಕರಣಗಳಿಗೆ ಅವಕಾಶವೇ ಇರುವುದಿಲ್ಲ’ ಎಂದು ಪ್ರತಿಪಾದಿಸಿದರು.

*

ದೆಹಲಿಯ ನಿರ್ಭಯಾ ಪ್ರಕರಣದ ಮಾದರಿಯಲ್ಲೇ ಈ ಪ್ರಕರಣದಲ್ಲೂ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

*

ನಿರ್ಭಯ ಮತ್ತು ತೆಲಂಗಾಣದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕಿಂತಲೂ ಮೈಸೂರಿನ ಅತ್ಯಾಚಾರ ಪ್ರಕರಣ ಗಂಭೀರ ಸ್ವರೂಪದ್ದು. ಪೊಲೀಸರು ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು