ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿಯದ ಪ್ರವಾಹ: ಹೊಳೆಯಲ್ಲಿ ಕಾರು ಬಿದ್ದು ಮೂವರು ಸಾವು

ಮಹಾರಾಷ್ಟ್ರದ ಅಣೆಕಟ್ಟೆಗಳಿಂದ ಭೀಮಾ ನದಿಗೆ 5.11 ಲಕ್ಷ ಕ್ಯುಸೆಕ್ ನೀರು
Last Updated 15 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ರಾಜ್ಯದ ಉತ್ತರ ಭಾಗದಲ್ಲಿ ಮಳೆ ಸುರಿಯುವುದು ತಗ್ಗಿದ್ದರೂ ಪ್ರವಾಹದ ಪರಿಸ್ಥಿತಿ ಕಡಿಮೆಯಾಗಿಲ್ಲ.

ಕಲ್ಯಾಣ ಕರ್ನಾಟಕದ ಕಲಬುರ್ಗಿ, ಯಾದಗಿರಿ, ಬೀದರ್‌ ಜಿಲ್ಲೆಗಳಲ್ಲಿ ಮಳೆ ಬಿಡುವು ಪಡೆದಿದ್ದರೂ ನದಿಗಳು ಉಕ್ಕಿ ಹರಿಯುತ್ತಿವೆ.

ಬೀದರ್‌ ಜಿಲ್ಲೆಭಾಲ್ಕಿ ತಾಲ್ಲೂಕಿನ ನೀಲಮನಳ್ಳಿ ಗ್ರಾಮದ ತಗ್ಗು ಪ್ರದೇಶದಲ್ಲಿ ಸಂಗ್ರಹವಾಗಿದ್ದ ಮಳೆ ನೀರಿನಲ್ಲಿ ಗುರುವಾರ ಮಧ್ಯಾಹ್ನ ಈಜಲು ತೆರಳಿದ್ದ ಹುಮನಾಬಾದ್‌ ತಾಲ್ಲೂಕಿನ ನಾಮದಾಪುರವಾಡಿಯ ಸುಮಿತ್‌ ಸುರೇಶ (15) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಹಳ್ಳದಪ‍್ರವಾಹಕ್ಕೆ ಸಿಲುಕಿ ಕಲಬುರ್ಗಿ ಜಿಲ್ಲೆ ಕಮಲಾಪುರ ತಾಲ್ಲೂಕಿನ ಜವಳಗಾ ಗ್ರಾಮದ ಕುಪೇಂದ್ರ ಬಾಬುರಾವ ಕಾಂಬಳೆ(30) ಸಾವಿಗೀಡಾಗಿದ್ದು, ಗುರುವಾರಅವರ ಮೃತದೇಹಪತ್ತೆಯಾಗಿದೆ.

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನ ಮುಳಸಾವಳಗಿಯಲ್ಲಿ ಹಳ್ಳ ದಾಟುತ್ತಿದ್ದ ರೈತ ಶಿವಪುತ್ರ ಹಣಮಂತ ನಾಟೀಕಾರ(38) ನೀರಿನ ಸೆಳವಿಗೆ ಸಿಲುಕಿ ಕೊಚ್ಚಿ ಹೋಗಿದ್ದು ಅರ್ಧ ಕಿ.ಮೀ ದೂರದಲ್ಲಿ ಅವರ ದೇಹ ಪತ್ತೆಯಾಗಿದೆ.

ತಾಳಿಕೋಟೆ–ಹಡಗಿನಾಳ ನೆಲಮಟ್ಟದ ಸೇತುವೆ ಡೋಣಿ ಪ್ರವಾಹದಲ್ಲಿ ಮುಳುಗಿದೆ. ದೂಳಖೇಡ, ಶಿರನಾಳ ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿರುವ 15 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಮಹಾರಾಷ್ಟ್ರದ ಉಜನಿ ಮತ್ತು ವೀರ್ ಅಣೆಕಟ್ಟೆಗಳಿಂದ ಗುರುವಾರ ಸಂಜೆ 5.11 ಲಕ್ಷ ಕ್ಯುಸೆಕ್ ನೀರನ್ನು ಭೀಮಾ ನದಿಗೆ ಬಿಟ್ಟಿದ್ದರಿಂದ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿಯ ಭೀಮಾತೀರದಲ್ಲಿ ಪ್ರವಾಹ ಹೆಚ್ಚುತ್ತಲೇ ಇದೆ.

ಮಹಾರಾಷ್ಟ್ರದ ಅಣೆಕಟ್ಟೆಗಳಿಂದಭೀಮಾ ನದಿಗೆ ಯಾವುದೇ ಕ್ಷಣದಲ್ಲಿ7.5 ಲಕ್ಷ ಕ್ಯುಸೆಕ್ ನೀರನ್ನು ಹರಿಸುವ
ಸಾಧ್ಯತೆ ಇರುವುದರಿಂದ ಕಲಬುರ್ಗಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳ 148ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದ್ದಾರೆ.

ಚಿತ್ತಾಪುರ ತಾಲ್ಲೂಕಿನ ಐತಿಹಾಸಿಕ ಸನ್ನತಿ ಗ್ರಾಮದಲ್ಲಿಯಬುದ್ಧ ಹಾಗೂ ಅಶೋಕನ ಶಾಸನಗಳಿರುವ ಸ್ಥಳದಲ್ಲಿ ನೀರು ಆವರಿಸಿಕೊಂಡಿದೆ.

ಶಹಾಬಾದ್ ಹತ್ತಿರ ಕಾಗಿಣಾ ನದಿ ಸೇತುವೆ ಗುರುವಾರವೂ ಮುಳುಗಿದ್ದರಿಂದ ಚಿತ್ತಾಪುರ ಪಟ್ಟಣವೂ ಎಲ್ಲಾ
ಮಾರ್ಗದಿಂದ ಕಲಬುರ್ಗಿಯ ಸಾರಿಗೆ ಸಂಚಾರ, ಸಂಪರ್ಕ ಕಡಿದುಕೊಂಡಿದೆ. ಕಾಳಗಿ ತಾಲ್ಲೂಕಿನ ಹಳೆ ಹೆಬ್ಬಾಳ ಗ್ರಾಮದ ಸುತ್ತ ಬೆಣ್ಣೆತೊರಾ ನದಿ ನೀರು ಆವರಿಸಿದ್ದರಿಂದ ನಡುಗಡ್ಡೆಯಾಗಿದೆ.

ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯದಿಂದ 1,40,300 ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ಇದರಿಂದ ಎರಡು ನದಿಗಳ ಅಕ್ಕಪಕ್ಕದ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ.

ಕರಾವಳಿ ಹಾಗೂ ಮಲೆನಾಡಿನಲ್ಲಿ ಗುರುವಾರ ಮಳೆಯ ಅಬ್ಬರ ತಗ್ಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಜೋರು ಮಳೆಯಾಗುತ್ತಿರುವುದರಿಂದ ಜಲಾಶಯಗಳಿಗೆ ಒಳಹರಿವು ಹೆಚ್ಚಿದೆ. ನೀರಿನ ಹರಿವು ಹೆಚ್ಚಳ ಕಾರಣ ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಸಂದರ್ಭದಲ್ಲಿ ನದಿಗೆ ನೀರನ್ನು ಬಿಡುವ ಸಾಧ್ಯತೆ ಇದೆ.

ಬುಧವಾರ ಬಿದ್ದ ಮಳೆಗೆ ಕೊಡಚಾದ್ರಿ ಬೆಟ್ಟಕ್ಕೆ ಹೋಗುವ ಸಂಪೆಕಟ್ಟೆ ಸಮೀಪದ ಕಟ್ಟಿನಹೊಳೆ ರಸ್ತೆ ಪಕ್ಕದ ಧರೆ ಕುಸಿದಿದೆ. ರಸ್ತೆಯ ತುಂಬೆಲ್ಲ ನೀರು ಹರಿದಿದೆ. ಹೆಚ್ಚಿನ ಅನಾಹುತ ಆಗಿಲ್ಲ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ‌ಕೃಷ್ಣಾ ಮತ್ತು ಉಪನದಿಗಳು ಮೈದುಂಬಿ ಹರಿಯುತ್ತಿವೆ.

ಹೊಳೆಯಲ್ಲಿ ಕಾರು ಬಿದ್ದು ಮೂವರು ಸಾವು

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹೆಗ್ಗರಣಿ ಸಮೀಪದ ಕೋಡನಮನೆ ಸೇತುವೆಯಿಂದ ಬುಧವಾರ ಸಂಜೆ ಹೊಳೆಗೆ ಕಾರು ಬಿದ್ದು ಮೂವರು ಮೃತಪಟ್ಟಿದ್ದಾರೆ. ಒಬ್ಬರು ಈವರೆಗೂ ಪತ್ತೆಯಾಗಿಲ್ಲ.

ಹುಬ್ಬಳ್ಳಿಯ ನಿಶ್ಚಲ ಹಿರೇಮಠ (20), ರೋಶನ್ (20), ಸುಷ್ಮಾ (20) ಎಂಬವರು ಮೃತರು. ಅಕ್ಷತಾ ಹಿರೇಮಠ (21)ಪತ್ತೆಯಾಗಿಲ್ಲ.

ರಕ್ಷಣಾ ಕಾರ್ಯಾಚರಣೆಗೆ ಎರಡು ಹೆಲಿಕಾಪ್ಟರ್: ಕಲಬುರ್ಗಿಯ ಭೀಮಾ ನದಿಯಲ್ಲಿ ಹೆಚ್ಚುತ್ತಿರುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಹಾಗೂ ವಿವಿಧೆಡೆ ಸಿಲುಕಿಕೊಂಡ ಜನರನ್ನು ರಕ್ಷಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎರಡು ಹೆಲಿಕಾಪ್ಟರ್‌ಗಳನ್ನು ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಕಳಿಸಿಕೊಡಲಿದ್ದಾರೆ.

ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಲು ಯಡಿಯೂರಪ್ಪ ಅವರು ಇದೇ 16ರಂದು ಬೆಳಿಗ್ಗೆ ಪ್ರವಾಹ ಪೀಡಿತ ಜಿಲ್ಲೆಗಳ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫ್‌ರೆನ್ಸ್ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT