ಮಂಗಳವಾರ, ಮೇ 17, 2022
25 °C
ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ: ಸರ್ಕಾರಕ್ಕೆ ಸಂಗೀತ ನಿರ್ದೇಶಕ ಹಂಸಲೇಖ ಮನವಿ

ಜಾನಪದ ಶಾಸ್ತ್ರ ‌ಪಠ್ಯಕ್ಕೆ ಅನುಮತಿ ನೀಡಿ: ಸರ್ಕಾರಕ್ಕೆ ಸಂಗೀತ ನಿರ್ದೇಶಕ ಹಂಸಲೇಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಕರ್ನಾಟಕ ಸಂಗೀತ ಮಾದರಿಯಲ್ಲಿ ಜಾನಪದಕ್ಕೂ ಶಾಸ್ತ್ರ ಪಠ್ಯಕ್ರಮ ಸಿದ್ಧಪಡಿಸಿ, ಶಿಕ್ಷಣ ಸಂಸ್ಥೆಗಳ ಮೂಲಕ ಪಾಠ ಮಾಡಬೇಕಿದೆ. ಈ ಪಠ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಬೇಕು’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಭಾನುವಾರ ಇಲ್ಲಿ ಹೇಳಿದರು.

ನಗರದಲ್ಲಿ ನಡೆದ ಕರ್ನಾಟಕ ಜಾನಪದ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ, ತಜ್ಞ ಪ್ರಶಸ್ತಿ ‌ಮತ್ತು 2018 ಹಾಗೂ 2019ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

'ಜನಪದ ಎಂದರೆ ಸೊಗಡು ಶಾಸ್ತ್ರ. ಸ್ವರಗಳನ್ನು ಕಲಿಸುವುದಕ್ಕೆ ಶಾಸ್ತ್ರ ಮಾಡಬಹುದು. ಸೊಗಡನ್ನು ಕಲಿಸುವುದಕ್ಕೆ ಯಾವುದೇ ಶಾಸ್ತ್ರವಿಲ್ಲ. ಹೀಗಾಗಿ, ಜನಪದ ಸೊಗಡಿನ ಶಾಸ್ತ್ರ ಸಿದ್ಧಪಡಿಸಬೇಕಿದೆ' ಎಂದರು.

'ಈ ನಿಟ್ಟಿನಲ್ಲಿ 20 ವರ್ಷ ಸಂಶೋಧನೆ ಮಾಡಿ, ಹಿರಿಯರೊಂದಿಗೆ ಚರ್ಚಿಸಿ ಜನಪದ ನಾದಕ್ಕೆ ಐದನಿ ಶಾಸ್ತ್ರ, ತಾಳಕ್ಕೆ ದುಂದುಮೆ ಶಾಸ್ತ್ರ ಸಿದ್ಧಪಡಿಸ ಲಾಗಿದೆ. ಕರ್ನಾಟಕ ಸಂಗೀತಕ್ಕೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ. ಅದೇ ರೀತಿ ಐದನಿ, ದುಂದುಮಕ್ಕೆ ಅನು ಮೋದನೆ ನೀಡಿದರೆ, ಸಂಗೀತ ಕಲಿಸುವ ಶಾಲೆಗಳಲ್ಲಿ, ಜಾನಪದ ವಿಶ್ವವಿದ್ಯಾಲಯಗಳಲ್ಲಿ, ಪರೀಕ್ಷೆಗಳಲ್ಲಿ ಈ ಶಾಸ್ತ್ರವನ್ನು ಪರಿ ಚಯಿಸಬಹುದು’ ಎಂದು ಹೇಳಿದರು. 

ದೇಸಿ ಸಂಗೀತ ಲಿಪಿ: ‘ಜಾನಪದ ಸಂಗೀತ ಬರೆಯುವುದಕ್ಕೆ ದೇಸಿ ಸಂಗೀತ ಲಿಪಿಯನ್ನೂ ನಾನು ಕಂಡು ಹಿಡಿದಿ ದ್ದೇನೆ. ದೇಸಿ ಲಿಪಿ, ಐದನಿ ನಾದಶಾಸ್ತ್ರ, ಮತ್ತು ದುಂದುಮೆ ತಾಳಶಾಸ್ತ್ರ. ಈ ಮೂರೂ ಜಾರಿಗೆ ಬಂದರೆ ಜಾನ ಪದ ಇನ್ನಷ್ಟು ಗಟ್ಟಿಯಾಗುತ್ತದೆ’ ಎಂದು ತಿಳಿಸಿದರು.  

ಅನುದಾನ ಹೆಚ್ಚಳಕ್ಕೆ ಪ್ರಯತ್ನ: ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ‘ಅಕಾಡೆಮಿಗಳಿಗೆ ನೀಡುತ್ತಿರುವ ಅನುದಾನ ಸಾಕಾಗುತ್ತಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿಸಲು ಪ್ರಯತ್ನ ಪಡುತ್ತೇನೆ. ಇದೇ 9ರಂದು ಎಲ್ಲ ಅಕಾಡೆಮಿಗಳ ಅಧ್ಯಕ್ಷರ ಸಭೆ ಕರೆದಿದ್ದೇನೆ. ನಂತರ ಮುಖ್ಯಮಂತ್ರಿ ಭೇಟಿ ಮಾಡುತ್ತೇನೆ’ ಎಂದರು. 

ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ಎಲ್ಲ ಮೂವತ್ತು ಜಿಲ್ಲೆಗಳ ತಲಾ ಒಬ್ಬ ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಕ್ಷಿಣ ಕನ್ನಡದ ಗಾಯತ್ರಿ ನಾವಡ ಅವರಿಗೆ ಡಾ.ಜಿ.ಶಂ.ಪ ಪ್ರಶಸ್ತಿ, ಪ್ರೊ.ಬಸವರಾಜ ಸಬರದ ಅವರಿಗೆ ಡಾ.ಬಿ.ಎಸ್‌.ಗದ್ದಗೀಮಠ ಪ್ರಶಸ್ತಿ ಪ್ರದಾನ ಮಾಡಲಾಯಿತು. 

2018ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದ್ದ ‘ಜನಪದ ಸಾಹಿತ್ಯದಲ್ಲಿ ತವರುಮನೆ’ ಕೃತಿಯ ಲೇಖಕಿ ಡಾ.ಮಮ್ತಾಜ್‌ ಬೇಗಂ ಹಾಗೂ 2019ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದ್ದ ‘ಜಾನಪದ ಜ್ಞಾನವಿಜ್ಞಾನ’ ಕೃತಿಯ ಲೇಖಕ ಡಾ.ಎಚ್‌.ಡಿ.ಪೋತೆ ಅವರನ್ನೂ ಸನ್ಮಾನಿಸಲಾಯಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು