ಶುಕ್ರವಾರ, ಜೂನ್ 25, 2021
29 °C

ಮೈಸೂರು: ವೀರಪ್ಪನ್ ಸಹಚರ, ಪಾಲಾರ್ ಬಾಂಬ್ ಸ್ಫೋಟದ ಅಪರಾಧಿ ಬಿಲ್ವೇಂದ್ರನ್ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೀರಪ್ಪನ್ ಸಹಚರ ಬಿಲ್ವೇಂದ್ರನ್

ಮೈಸೂರು: ಕಾಡುಗಳ್ಳ‌ ವೀರಪ್ಪನ್ ಸಹಚರ, ಮೈಸೂರು ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಬಿಲ್ವೇಂದ್ರನ್ (70) ಅನಾರೋಗ್ಯದಿಂದ ಬುಧವಾರ ತಡರಾತ್ರಿ ಕೆ.ಆರ್‌.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಆರು ದಿನದ ಹಿಂದೆ ಜೈಲಿನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನರ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಾರ್ಟಳ್ಳಿಯ ಬಿಲ್ವೇಂದ್ರನ್, ಪಾಲಾರ್ ಬಾಂಬ್ ಸ್ಫೋಟ ಸೇರಿದಂತೆ ಇನ್ನೆರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಸೈಮನ್, ಜ್ಞಾನಪ್ರಕಾಶ್, ಮಾದಯ್ಯ ಜೊತೆ ಈ ಕೃತ್ಯ ಎಸಗಿದ್ದುದು ಪೊಲೀಸ್ ತನಿಖೆಯಲ್ಲಿ ಖಚಿತಪಟ್ಟಿತ್ತು.

ಪಾಲಾರ್ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಅಪರಾಧಿ ಎಂಬುದು ಸಾಬೀತಾಗಿದ್ದರಿಂದ, 2001ರ ಸೆ.29ರಂದು ಮೈಸೂರಿನ ಟಾಡಾ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ನಾಲ್ವರು ಅಪರಾಧಿಗಳು ಸುಪ್ರೀಂಕೋರ್ಟ್‌ ನಲ್ಲಿ ಪ್ರಶ್ನಿಸಿದ್ದರು.

2004ರ ಜ.29ರಂದು ಸುಪ್ರೀಂಕೋರ್ಟ್, ಶಿಕ್ಷೆಯನ್ನು ಮಾರ್ಪಡಿಸಿ ಮರಣ ದಂಡನೆ ವಿಧಿಸಿತ್ತು. 2004ರ ಫೆ.19ರಂದು ಗಲ್ಲಿಗೇರಿಸುವಂತೆ ತೀರ್ಪು ನೀಡಿತ್ತು. ಅಪರಾಧಿಗಳು ರಾಷ್ಟ್ರಪತಿಗೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದರು. ಎಂಟೂವರೆ ವರ್ಷ ಈ ಅರ್ಜಿ ನನೆಗುದಿಗೆ ಬಿದ್ದಿತ್ತು. 2013ರ ಫೆಬ್ರುವರಿಯಲ್ಲಿ ರಾಷ್ಟ್ರಪತಿ ಈ ಅರ್ಜಿಯನ್ನು ವಜಾಗೊಳಿಸಿದ್ದರು.

ತೀರ್ಪು ಪರಿಶೀಲಿಸುವಂತೆ ಈ ನಾಲ್ವರೂ ಮತ್ತೆ ಸುಪ್ರೀಂಕೋರ್ಟ್ ಮೊರೆ ಹೊಕ್ಕಿದ್ದರು. ಆಗ ಗಲ್ಲು ಶಿಕ್ಷೆ ಮತ್ತೆ ಜೀವಾವಧಿ ಶಿಕ್ಷೆಯಾಗಿ ಮಾರ್ಪಟ್ಟಿತ್ತು. 27 ವರ್ಷದಿಂದಲೂ ಬಿಲ್ವೇಂದ್ರನ್ ಜೈಲಿನಲ್ಲಿದ್ದ. ಸೈಮನ್‌ ಈಗಾಗಲೇ ಮೃತಪಟ್ಟಿದ್ದು, ಇನ್ನಿಬ್ಬರು ಕಾರಾಗೃಹದಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು