ಮಂಗಳವಾರ, ಮಾರ್ಚ್ 21, 2023
23 °C
0.8 ಹೆಕ್ಟೇರ್ ಭೂಪರಿವರ್ತನೆ ಪ್ರಸ್ತಾವಕ್ಕೆ ಪರಿಸರ ಹೋರಾಟಗಾರರ ವಿರೋಧ

ಜೋಗ ಬಳಿ ಹೋಟೆಲ್‌ಗೆ ಅರಣ್ಯ ಭೂಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತದ ಬಳಿ ಪರಿಸರ ಸೂಕ್ಷ್ಮ ವಲಯದಲ್ಲಿ ಪಂಚತಾರಾ ಹೋಟೆಲ್ ನಿರ್ಮಿಸುವ ಯೋಜನೆಗಾಗಿ ಅರಣ್ಯ ಭೂಮಿ ಪರಿವರ್ತನೆಗೆ ಪ್ರಸ್ತಾವನೆ ಸಲ್ಲಿಸಿರುವುದಕ್ಕೆ ವನ್ಯಜೀವಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

ಅರಣ್ಯ, ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಮಾರಕವಾಗಿ ಪರಿಣಮಿಸಲಿರುವ ಈ ಯೋಜನೆಗೆ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬಾರದು ಹಾಗೂ ತಕ್ಷಣ ಪ್ರಸ್ತಾವನೆಯನ್ನು ಹಿಂಪಡೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.

ಜೋಗ ಜಲಪಾತದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ₹165 ಕೋಟಿವೆಚ್ಚದ ಯೋಜನೆಯಲ್ಲಿ ಹೋಟೆಲ್‌ ನಿರ್ಮಾಣವೂ ಸೇರಿದೆ.  ಹೋಟೆಲ್‌ ನಿರ್ಮಾಣಕ್ಕಾಗಿ ಸಾಗರ ತಾಲ್ಲೂಕಿನ ನಾಡವಾಡ ತಲಕಳಲೆ ಗ್ರಾಮದ ಸರ್ವೆ ಸಂಖ್ಯೆ 151ರಲ್ಲಿರುವ 0.8536ಹೆಕ್ಟೇರ್ ಅರಣ್ಯ ಪ್ರದೇಶದ ಭೂಪರಿವರ್ತನೆ ಮಾಡಲು ಜೋಗ ನಿರ್ವಹಣಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೂ ಆದ ಶಿವಮೊಗ್ಗ ಜಿಲ್ಲಾಧಿಕಾರಿ ಅವರು ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಸಾಗರ ವಿಭಾಗದ ಡಿಸಿಎಫ್‌, ಶಿವಮೊಗ್ಗ ವೃತ್ತದ ಸಿಸಿಎಫ್‌ ಹಾಗೂ ಅರಣ್ಯ ಪಡೆಯ ಮುಖ್ಯಸ್ಥರು (ಪಿಸಿಸಿಎಫ್‌) ಅನುಮೋದನೆ ನೀಡಿದ್ದಾರೆ. ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಒಪ್ಪಿಗೆ ನೀಡಿದ ಬಳಿಕ ಕಡತವು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಹೋಗಲಿದೆ.

ಈ ಯೋಜನಾ ಪ್ರದೇಶವು ಶರಾವತಿ ಕಣಿವೆ ಸಿಂಗಳಿಕ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುವುದರಿಂದ ಪಂಚತಾರಾ ಹೋಟೆಲ್ ಯೋಜನೆ ಹಾಗೂ ಇತರೆ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೈಗೊಳ್ಳಲು ಅನುಮತಿ ನಿರಾಕರಿಸುವಂತೆ ವನ್ಯಜೀವಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

‘ಈ ಯೋಜನೆಯು ಅರಣ್ಯ (ಸಂರಕ್ಷಣಾ) ಕಾಯ್ದೆ 1980, ಪರಿಸರ (ಸಂರಕ್ಷಣಾ) ಕಾಯ್ದೆ 1986 ಸೇರಿದಂತೆ ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ ನೀಡಿರುವ ಆದೇಶಕ್ಕೆ ವಿರುದ್ಧ. ‘ಅರಣ್ಯ ಹಾಗೂ ವನ್ಯಜೀವಿ ಪ್ರದೇಶಗಳಲ್ಲಿ ಸುಸ್ಥಿರ ಪರಿಸರ-ಪ್ರವಾಸೋದ್ಯಮ ಕುರಿತು ಮಾರ್ಗದರ್ಶಿ ಸೂತ್ರಗಳು–2021ರ ಪ್ರಕಾರ, ಪರಿಸರ-ಪ್ರವಾಸೋದ್ಯಮ ಸೌಕರ್ಯ ಒದಗಿಸಲು ಅರಣ್ಯ ಭೂಮಿಯ ಮೇಲೆ ಯಾವುದೇ ಶಾಶ್ವತ ರಚನೆ/ ಕಟ್ಟಡ ಕಟ್ಟುವಂತಿಲ್ಲ. ಪರಿಸರ ಸೂಕ್ಷ್ಮ ವಲಯದಲ್ಲಿ ವಾಣಿಜ್ಯೋದ್ಯಮ ಉದ್ದೇಶಕ್ಕಾಗಿ ಹೋಟೆಲ್‌ಗಳನ್ನು ನಿರ್ಮಿ
ಸಲು ಅವಕಾಶವೇ ಇಲ್ಲ’ ಎಂಬುದು ಪರಿಸರ ಕಾರ್ಯಕರ್ತ ಸಹದೇವ್‌ ಶಿವಪುರ ಅವರ ‍‍ಪ್ರತಿಪಾದನೆ.

ಪ್ರಸ್ತಾವನೆ ತಿರಸ್ಕೃತವಾಗಿತ್ತು: ಇದೇ ಪ್ರದೇಶದಲ್ಲಿ ಆಯುರ್ವೇದ ಕೇಂದ್ರ ಆರಂಭಕ್ಕೆ 0.4 ಹೆಕ್ಟೇರ್‌ ಅರಣ್ಯ ಪ್ರದೇಶದ ಭೂ ಪರಿವರ್ತನೆ ಮಾಡುವ ಶಿವಮೊಗ್ಗ ಜಿಲ್ಲಾಧಿಕಾರಿ ಅವರ ಪ್ರಸ್ತಾವವನ್ನು ಕೇಂದ್ರ ಪರಿಸರ ಸಚಿವಾಲಯ 2015ರಲ್ಲಿ ತಿರಸ್ಕರಿಸಿತ್ತು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪಿಸಿಸಿಎಫ್‌ (ಅರಣ್ಯ ಪಡೆ ಮುಖ್ಯಸ್ಥ) ಸಂಜಯ್‌ ಮೋಹನ್‌ ಅವರಿಗೆ ಕರೆ ಮಾಡಲಾಯಿತು. ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು