ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಪಕ್ಷಗಳ 60 ಹಿರಿಯ ನಾಯಕರಿಂದ ಕಾಂಗ್ರೆಸ್ ಸೇರಲು ಅರ್ಜಿ: ಡಿ.ಕೆ. ಶಿವಕುಮಾರ್

ವಿಧಾನಪರಿಷತ್‌ ಮಾಜಿ ಸದಸ್ಯ, ಜೆಡಿಎಸ್‌ನ ರಮೇಶ್‌ ಬಾಬು ಕಾಂಗ್ರೆಸ್‌ ಸೇರ್ಪಡೆ
Last Updated 19 ಸೆಪ್ಟೆಂಬರ್ 2020, 11:42 IST
ಅಕ್ಷರ ಗಾತ್ರ

ಬೆಂಗಳೂರು: ‘ವಿವಿಧ ಪಕ್ಷಗಳ 60 ಹಿರಿಯ ನಾಯಕರು ಕಾಂಗ್ರೆಸ್‌ ಸೇರಲು ಬಯಸಿ ಅರ್ಜಿ ಹಾಕಿದ್ದಾರೆ. ಅರ್ಜಿಗಳನ್ನು ಪರಿಶೀಲಿಸಿ, ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ವಿಧಾನಪರಿಷತ್‌ ಮಾಜಿ ಸದಸ್ಯ, ಜೆಡಿಎಸ್‌ನ ರಮೇಶ್ ಬಾಬು ಅವರನ್ನು ಶನಿವಾರ ಕಾಂಗ್ರೆಸ್‌ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಅವರು ಮಾತನಾಡಿದರು.

‘ಬೇರೆ ಪಕ್ಷಗಳಿಂದ ಕಾಂಗ್ರೆಸ್‌ ಸೇರಲು ಬಯಸುವವರ ಬಗ್ಗೆ ನಿರ್ಧರಿಸಲು ಈಗಾಗಲೇ ಒಂದು ಸಮಿತಿ ರಚಿಸಿದ್ದೇವೆ. ಈ ಸಮಿತಿಗೆ 60 ಅರ್ಜಿಗಳು ಸಲ್ಲಿಕೆ ಆಗಿವೆ. ರಮೇಶ್ ಬಾಬು ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆಂದು ಅರ್ಜಿ ಹಾಕಿದ್ದರು’ ಎಂದರು.

‘ಸದ್ಯದಲ್ಲೇ ವಿಧಾನಪರಿಷತ್ ಚುನಾವಣೆ ಬರಲಿದೆ. ಹೀಗಾಗಿ, ನಾವು ರಮೇಶ್ ಬಾಬು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಒಪ್ಪಿಕೊಂಡೆವು’ ಎಂದರು.

ಇದೇ ವೇಳೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಶಿವಕುಮಾರ್‌, ‘ಕೊರೊನಾ ಸಮಯದಲ್ಲಿ ಮುಖ್ಯಮಂತ್ರಿ ₹ 1,600 ಕೋಟಿಯ ಪ್ಯಾಕೇಜ್ ಘೋಷಿಸಿದ್ದರು. ಆ ಮೊತ್ತ ಯಾವ, ಯಾವ ಕ್ಷೇತ್ರಗಳಿಗೆ ತಲುಪಿದೆ ಎಂದು ಅಧಿವೇಶನದ ಆರಂಭದಲ್ಲಿಯೇ ಮಾಹಿತಿ‌ ನೀಡಲಿ’ ಎಂದು ಆಗ್ರಹಿಸಿದರು.

‘ಕೇಂದ್ರದಿಂದ ಎಷ್ಟು ಅನುದಾನ ತಂದಿದ್ದಾರೆ. ಯಾವ, ಯಾವ ಮಂತ್ರಿಗಳನ್ನು ಭೇಟಿ ಮಾಡಿದ್ದರು. ಈ ಎಲ್ಲ ಮಾಹಿತಿಗಳನ್ನು ಮುಖ್ಯಮಂತ್ರಿ ಅಧಿವೇಶನದಲ್ಲಿ‌ ನೀಡಲಿ. ರಾಜ್ಯದಿಂದ 25 ಬಿಜೆಪಿ ಸಂಸದರಿದ್ದಾರೆ. ಅವರೆನ್ನೆಲ್ಲಾ ಕರೆದುಕೊಂಡು ಮುಖ್ಯಮಂತ್ರಿ ದೆಹಲಿಗೆ ಹೋಗಬೇಕಿತ್ತು. ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಿ ಎಂದು ನಾವು ಸಾಕಷ್ಟು ಮನವಿ ಮಾಡಿದ್ದೇವೆ. ಆದರೆ, ನಮ್ಮ ಮನವಿಗೆ ಮುಖ್ಯಮಂತ್ರಿ ಸ್ಪಂದಿಸಿಲ್ಲ’ ಎಂದು ದೂರಿದರು.

‘ಮುಖ್ಯಮಂತ್ರಿ ಒಬ್ಬರೇ ಕೇಂದ್ರದ ಮಂತ್ರಿಗಳು ಹಾಗು ಪ್ರಧಾನಿಯನ್ನು ಭೇಟಿ ಮಾಡಿದ್ದಾರೆ. ರಾಜ್ಯಕ್ಕೆ ಎಷ್ಟು ಅನುದಾನ ಬಂದಿದೆ ಎಂದು ಮುಖ್ಯಮಂತ್ರಿ ಹೇಳಲಿ’ ಎಂದೂ ಒತ್ತಾಯಿಸಿದರು.

ಕಾಂಗ್ರೆಸ್‌ ಸೇರಿದ ಬಳಿಕ ಮಾತನಾಡಿದ ರಮೇಶ್ ಬಾಬು, ‘ಸಿದ್ದರಾಮಯ್ಯ ಅವರು ಜನತಾದಳದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾಗ ನನ್ನನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಮಾಡಿದ್ದರು. ದೇಶದ ಎಲ್ಲ ಪಕ್ಷಗಳು ಕಾಂಗ್ರೆಸ್ ಪಕ್ಷದ ಅಂಗ ಪಕ್ಷಗಳು. ಚಳುವಳಿ ರೂಪದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ನಾನು ಸೇರ್ಪಡೆಯಾಗಿದ್ದೇನೆ’ ಎಂದರು.

‘ರಾಜ್ಯ ಹಾಗೂ ದೇಶಕ್ಕೆ ಕಾಂಗ್ರೆಸ್ ಪಕ್ಷ ಅನಿವಾರ್ಯವಾಗಿದೆ. ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತೇನೆ’ ಎಂದೂ ಹೇಳಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಬಿಜೆಪಿ, ಜೆಡಿಎಸ್, ಕಮ್ಯೂನಿಸ್ಟ್ ಹೀಗೆ ಅನೇಕ ಪಕ್ಷಗಳಿಗೆ ಕಾಂಗ್ರೆಸ್ ಪಕ್ಷವೇ ಮೂಲ. ಕಾಂಗ್ರೆಸ್ ಒಂದು ರೀತಿ ತಾಯಿ ಪಕ್ಷ ಇದ್ದಂತೆ. ನಾನು ಆರು ವರ್ಷ ಜೆಡಿಎಸ್ ಅಧ್ಯಕ್ಷನಾಗಿದ್ದೆ. ಆಗಿನಿಂದಲೂ ರಮೇಶ್ ಬಾಬು ಕ್ರಿಯಾಶೀಲ ನಾಯಕರಾಗಿದ್ದರು, ಅವರೊಬ್ಬ ಸಂಘಟನಕಾರ’ ಎಂದೂ ಬಣ್ಣಿಸಿದರು.

‘ಇತರ ಪಕ್ಷಗಳಲ್ಲಿ ಇರುವ ಬಹುತೇಕ ನಾಯಕರು ಕಾಂಗ್ರೆಸ್ ಪಕ್ಷದಿಂದ ಹೋದವರು. ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ಕೇವಲ ಅಧಿಕಾರಕ್ಕಾಗಿ ಹೋರಾಟ ಮಾಡಿಲ್ಲ. ಸಮಾಜದಲ್ಲಿ ಬದಲಾವಣೆ ತರಲು ಹೋರಾಟ ಮಾಡಿದೆ. ಕ್ರಾಂತಿಕಾರಿ ಹಾಗು ಮಹಾನ್ ನಾಯಕರು ಕಾಂಗ್ರೆಸ್ ಪಕ್ಷದಲ್ಲೇ ಹುಟ್ಟಿದವರು’ ಎಂದರು.

‘ಕಾಂಗ್ರೆಸ್ ಪಕ್ಷ ಕೇವಲ ರಾಜಕೀಯ ಪಕ್ಷ ಅಲ್ಲ. ಸಮಾನತೆಯ ವ್ಯವಸ್ಥೆ ನಿರ್ಮಾಣ ಮಾಡುವುದು ಕಾಂಗ್ರೆಸ್ ಧ್ಯೇಯ. ದೇವೇಗೌಡ ಅವರು ಕಾಂಗ್ರೆಸ್ ಪಕ್ಷದಲ್ಲಿ ತಾಲ್ಲೂಕು ಬೋರ್ಡ್ ಮೇಂಬರ್ ಆಗಿದ್ದವರು. ದೇವೇಗೌಡರು ಟಿಕೆಟ್ ಸಿಕ್ಕಿಲ್ಲ ಎಂದು ಪಕ್ಷೇತರ ಅಭ್ಯರ್ಥಿಯಾದರು. ರಾಮಕೃಷ್ಣ ಹೆಗಡೆ ಕೂಡ ಕಾಂಗ್ರೆಸ್ ಪಕ್ಷದವರು’ ಎಂದರು.

‘ಜೆಡಿಎಸ್ ಅವಕಾಶವಾದಿ ಪಕ್ಷ. ಜೆಡಿಎಸ್ ಸ್ವಾರ್ಥ ಇರುವವರು. ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದರೂ ಹೋಗುತ್ತಾರೆ. ಬಿಜೆಪಿ ಜೊತೆಯೂ ಹೋಗುತ್ತಾರೆ. ಆರ್‌ಎಸ್‌ಎಸ್‌ ಜೊತೆ ಸೇರಿದರೂ ಸೇರಿಕೊಳ್ಳಬಹುದು’ ಎಂದರು.

‘ಹಿಂದತ್ವ ಎಂಬ ಅಫೀಮನ್ನು ಯುವಕರಿಗೆ ನೀಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮೋದಿ ಜನ್ಮದಿನವನ್ನು ಯುವಕರು ನಿರುದ್ಯೋಗ ದಿನ ಎಂದು ಆಚರಣೆ ಮಾಡಿದ್ದಾರೆ. ಮೋದಿ, ದೇಶದ ಆರ್ಥಿಕ ವ್ಯವಸ್ಥೆ ಹಾಳು ಮಾಡಿದ್ದಾರೆ’ ಎಂದೂ ದೂರಿದರು.

‘ಬಿಜೆಪಿಯವರು ಒಂದು ವರ್ಷದ ಅವಧಿಯಲ್ಲಿ ಒಂದೂವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಸರ್ಕಾರದಲ್ಲಿ ದುಡ್ಡಿಲ್ಲದಿದ್ದರೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಸಾಲ ತೆಗೆದುಕೊಂಡಷ್ಟು ಬಡ್ಡಿ ಜಾಸ್ತಿ ಆಗುತ್ತಾ ಹೋಗುತ್ತದೆ. ನನ್ನ ಐದು ವರ್ಷದ ಅವಧಿಯಲ್ಲಿ ಆರ್ಥಿಕ ಶಿಸ್ತು ಕಾಪಾಡಿದ್ದೆ. ಆದರೆ, ಬಿಜೆಪಿ ಸರ್ಕಾರ ಆರ್ಥಿಕ ಶಿಸ್ತು ದಾಟಿದೆ’ ಎಂದರು.

‘ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಖಾಲಿ ಕೈಯಲ್ಲಿ ವಾಪಸ್ ಆಗಿದ್ದಾರೆ. ಇದನ್ನು ಮುಚ್ಚಿಡಲು ಮಂತ್ರಿ ಮಂಡಲ ವಿಸ್ತರಣೆ ಎಂದು ಹೇಳಿದ್ದರು’ ಎಂದರು.

‘ಇನ್ನೊಂದು ವರ್ಷದಲ್ಲಿ ಮತ್ತೊಂದು ಲಕ್ಷ ಕೋಟಿ ಸಾಲ ಮಾಡಿದರೆ ಯಾರು ಹೊಣೆ. ಬಿಜೆಪಿಯವರೇ ಇದ್ದರೆ ಸ್ವಾತಂತ್ರ್ಯ ಬಂದಾಗಿನಿಂದ ಎಷ್ಟು ಸಾಲ ಇತ್ತೋ ಅಷ್ಟು ಸಾಲ ಮಾಡಿ ಹೋಗುತ್ತಾರೆ’ ಎಂದರು.

‘ಕೊರೊನಾ ನಿಯಂತ್ರಣದಲ್ಲೂ ಸರ್ಕಾರ ವಿಫಲವಾಗಿದೆ. ಎರಡನೇ ಸ್ಥಾನಕ್ಕೆ ಕರ್ನಾಟಕ ಬಂದರೂ ಆಶ್ಚರ್ಯ ಪಡಬೇಕಿಲ್ಲ. ಅವರಿಗೇನು ನಾಚಿಕೆ ಮಾನ ಮಾರ್ಯಾದೆ ಇದ್ದಿದ್ದರೆ ಅಧಿಕಾರದಲ್ಲಿ ಇರಬಾರದು. ಅಧಿಕಾರ ನಡೆಸಲು ಸಾಧ್ಯ ಇಲ್ಲ ಎಂದಾದರೆ ಬಿಟ್ಟು ಬೇಡಬೇಕಿತ್ತು. ನಾನು ಜೋಕ್‌ ಮಾಡುತ್ತಿಲ್ಲ. ಅವರಿಗೆ ಮಾನ ಮಾರ್ಯಾದೆ ಇಲ್ಲ. ಸುಲಭವಾಗಿ ಅವರು ಅಧಿಕಾರ ಬಿಡುವುದಿಲ್ಲ. ಜನರೇ ಅಧಿಕಾರದಿಂದ ಕಿತ್ತು ಹಾಕಬೇಕು’ ಎಂದರು.

‘ವಿಧಾನಸಭೆ ಚುನಾವಣೆ ಯಾವಾಗ ನಡೆದರೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್ ಪಕ್ಷ ಒಂದೇ ಧ್ವನಿಯಲ್ಲಿ ಇರಬೇಕು. ಆಗ ಮಾತ್ರ ಅಧಿಕಾರಕ್ಕೆ ಬರುತ್ತೇವೆ. ಏನೇ ಅಸಮಾಧಾನ ಇದ್ದರೂ ಪಕ್ಷದ ಆಂತರಿಕವಾಗಿ ಚರ್ಚೆ ಮಾಡಬೇಕು’ ಎಂದು ಪಕ್ಷದ ನಾಯಕರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT