ಹುಬ್ಬಳ್ಳಿ: ‘ಮಹದಾಯಿ ಯೋಜನೆ ಅನುಷ್ಠಾನಕ್ಕೆ ರಾಜ್ಯದ ಅರಣ್ಯ ಇಲಾಖೆಯ ಒಪ್ಪಿಗೆ ಪಡೆದು, ಎರಡು ತಿಂಗಳಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗುವುದು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಶನಿವಾರ ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ‘ಈಗಾಗಲೇ ಕೇಂದ್ರ ಸರ್ಕಾರ ಮಹದಾಯಿ ಯೋಜನೆಯ ಪರಿಷ್ಕೃತ ಡಿಪಿಆರ್‌ಗೆ ಒಪ್ಪಿಗೆ ನೀಡಿದೆ. ಕುಡಿಯುವ ನೀರಿನ ಯೋಜನೆ ಇದಾಗಿರುವುದರಿಂದ ಪರಿಸರ ಇಲಾಖೆಯ ಅನುಮತಿ ಅಗತ್ಯವಿಲ್ಲ. 60 ಎಕರೆ ಭೂಮಿ ಅಗತ್ಯವಾಗಿರುವುದರಿಂದ, ಅರಣ್ಯ ಇಲಾಖೆಯ ಒಪ್ಪಿಗೆ ಪಡೆಯುವುದೊಂದೇ ಬಾಕಿಯಿದೆ. ಈ ಕುರಿತು ಗೋವಾ ಸರ್ಕಾರದ ಯಾವ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ,. ನಮ್ಮ ಮಟ್ಟದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ’ ಎಂದರು.
‘ಡಿಪಿಆರ್‌ಗೆ ದಿನಾಂಕವಿಲ್ಲ’ ಎಂದು ಆರೋಪಿಸಿರುವ ಶಾಸಕ ಎಚ್.ಕೆ. ಪಾಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ‘ಕಾಂಗ್ರೆಸ್ ಮುಖಂಡ ಎಚ್.ಕೆ. ಪಾಟೀಲರಿಗೆ ರಾಜಕೀಯವಾಗಿ ದಿನಾಂಕ ಮುಕ್ತಾಯವಾಗಿದೆ. ಅದಕ್ಕಾಗಿ ಅವರು ದಿನಾಂಕದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಅವರು ರಾಜಕೀಯಕ್ಕಾಗೋ ಅಥವಾ ಮೂರ್ಖತನದಿಂದಲೋ ಹಾಗೆ ಹೇಳುತ್ತಿದ್ದಾರೋ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೂ ರಾಜಕೀಯವಾಗಿ ದಿನಾಂಕ ಮುಕ್ತಾಯವಾಗುತ್ತ ಬಂದಿದೆ. ಡಿ. 29ರಂದು ಆದೇಶವಾದ ದಿನಾಂಕ ಡಿಪಿಆರ್‌ನಲ್ಲಿದ್ದು, ಜಗಜ್ಜಾಹಿರಾಗಿದೆ’ ಎಂದು ಹೇಳಿದರು.
‘ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಭ್ರಷ್ಟರು ಎನ್ನುವುದು 2008ರಲ್ಲಿಯೇ ಜನತೆಗೆ ತಿಳಿದಿದೆ. ಅವರ ಪಕ್ಷದಲ್ಲಿ ಅಪ್ಪ, ಮಗ, ಪತ್ನಿ, ಅಣ್ಣ–ತಮ್ಮರದ್ದೇ ರಾಜಕೀಯ. ಪಂಚರತ್ನ ಯಾತ್ರೆಯಲ್ಲೂ ಅವರದ್ದೇ ಕಾರುಬಾರು. ದೇವೇಗೌಡರ ಮರಿಮೊಮ್ಮಗನಿಗೆ ಸ್ವಲ್ಪ ಬುದ್ಧಿ ಬಂದ ನಂತರ ಅವನು ಸಹ ರಾಜಕೀಯ ಸೇರಬಹುದು. ಅತ್ಯಂತ ಭ್ರಷ್ಟ ರಾಜಕಾರಣ ಅವರದ್ದು’ ಎಂದು ‘ಬಿಜೆಪಿ ಸುಳ್ಳಿನ ಎಟಿಎಂ’ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.