ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ದಶಕದ ಹೋರಾಟ: ಐದೇ ವರ್ಷ ಅಧಿಕಾರದಾಟ- ಮುಗಿಯಿತೇ ಯಡಿಯೂರಪ್ಪ ಪರ್ವ?

Last Updated 26 ಜುಲೈ 2021, 19:39 IST
ಅಕ್ಷರ ಗಾತ್ರ

ತಪ್ಪು ಮಾಡುವುದು ಸಹಜ; ನಾಯಕ ಅದನ್ನು ತಿದ್ದಿಕೊಂಡು ನಡೆಯಬೇಕು. ಯಡಿಯೂರಪ್ಪ ಅವರು 2019ರಲ್ಲಿ ಅಧಿಕಾರ ಹಿಡಿದಾಗ ಮಾಡಿದ್ದ ತಪ್ಪನ್ನು ತಿದ್ದಿಕೊಂಡಿದ್ದರೆ ಪೂರ್ಣಾವಧಿ ಅವಕಾಶ ಅವರಿಗೆ ಸಿಗುತ್ತಿತ್ತು. ಈಗ ಅವರನ್ನು ಕುರ್ಚಿಯಿಂದ ಇಳಿಸಲು ವಯಸ್ಸಿನ ಜೊತೆಗೆ ಪ್ರಮುಖ ಅಸ್ತ್ರವಾಗಿದ್ದು ಯಡಿಯೂರಪ್ಪ ಅವರನ್ನು ‘ಕಟ್ಟಿ ಹಾಕಿದ್ದ’ ಧೃತರಾಷ್ಟ್ರ ಪ್ರೇಮವೇ ಎಂಬುದೇನೂ ಸುಳ್ಳಲ್ಲ.

'ಆಪರೇಷನ್ ಕಮಲ’ ಎಂಬ ಕೆಟ್ಟ ರಾಜಕೀಯ ಪರಂಪರೆಯನ್ನು ದೇಶದಲ್ಲೇ ಹುಟ್ಟುಹಾಕಿ, ದಕ್ಷಿಣದ ಭಾರತದಲ್ಲಿ ಎರಡು ಬಾರಿ ಕೇಸರಿ ಪತಾಕೆ ಹಾರಿಸಿದ್ದ ಬಿ.ಎಸ್‌.ಯಡಿಯೂರಪ್ಪ ಅವರ ‘ಹೋರಾಟ ಪರ್ವ’ದ ಪ್ರಧಾನ ಅಧ್ಯಾಯ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ.

ವರ್ಷದ ಹಿಂದೆ ಬಿಜೆಪಿಯ ‘1–2’ ಎಂದೇ ಬಿಂಬಿತರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಹೆಣೆದಿದ್ದ ‘ಆಪರೇಷನ್ ಯಡಿಯೂರಪ್ಪ’ ಎಂಬ ಕಾರ್ಯಾಚರಣೆ ತಾರ್ಕಿಕ ಅಂತ್ಯವನ್ನೂ ಕಂಡಿದೆ.

ವಿರೋಧ ಪಕ್ಷದಲ್ಲಿದ್ದಾಗ ಪ್ರಮುಖವಾಗಿ ರೈತರನ್ನೂ ಒಳಗೊಂಡಂತೆ ಜನರ ಪರವಾಗಿ ಹೋರಾಟ, ಸಾಮ–ದಾನ–ಭೇದ–ದಂಡ... ಹೀಗೆ ಸಕಲ ತಂತ್ರವನ್ನೂ ಬಳಸಿ ಅಧಿಕಾರ ಹಿಡಿದ ಮೇಲೆ ಅದನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕೆಂಬ ಹೋರಾಟ, ಸರ್ಕಾರ ನಡೆಸಲೂ ಹೋರಾಟ... ಹೀಗೆ ಜೀವಿತಾವಧಿಯ ಉದ್ದಕ್ಕೂ ನಾನಾ ಬಗೆಯ ಹೋರಾಟವನ್ನೇ ಮೈಕಸುವಾಗಿಸಿಕೊಂಡ ಯಡಿಯೂರಪ್ಪ ರಾಜಕೀಯ ವಿಶ್ರಾಂತಿಗೆ ತೆರಳಲಿದ್ದಾರೋ ಅಥವಾ ತಮ್ಮ ಎಂದಿನ ಅವಿಶ್ರಾಂತ ಹೋರಾಟಕ್ಕೆ ಮರಳಲಿದ್ದಾರೋ ಎಂಬುದನ್ನು ಮುಂದಿನ ದಿನಗಳ ವಿದ್ಯಮಾನಗಳೇ ನಿರ್ಧರಿಸಲಿವೆ.

ಒಂದು ಕಾಲದಲ್ಲಿ ಗುಡುಗುತ್ತಿದ್ದ ಯಡಿಯೂರಪ್ಪ ಅವರು ವಯೋಸಹಜ ಸಮಸ್ಯೆಗಳು, ಪಕ್ಷದ ರಾಷ್ಟ್ರೀಯ ಮಟ್ಟದಲ್ಲಿ ರೂಪುಗೊಂಡ ನಾಯಕರ ಧೋರಣೆಗಳ ಕಾರಣಕ್ಕೆ ತಮ್ಮ ಇಳಿಗಾಲದಲ್ಲಿ ನಡುಗುವ ಸ್ಥಿತಿ ತಲುಪಿದ್ದನ್ನು ದೇಶ ನೋಡಿದೆ. ನಾಲ್ಕು ದಶಕಗಳ ಹೋರಾಟ ನಡೆಸಿದರೂ ಅಧಿಕಾರ ಲಕ್ಷ್ಮಿಯೇನೂ ಅವರನ್ನು ಅರಸಿ ಬರಲಿಲ್ಲ. ಸಿಕ್ಕದ ಅಧಿಕಾರವನ್ನು ದಕ್ಕಿಸಿಕೊಳ್ಳುವ ಶೈಲಿಯನ್ನು ರೂಢಿಸಿಕೊಂಡರು. ಅಧಿಕಾರವನ್ನು ಬಿಡಲೊಲ್ಲೆ ಎಂಬ ಹಟ ಅವರನ್ನು ವಿಧಾನಸೌಧದ ಮೂರನೇ ಮಹಡಿಗೆ ಹತ್ತಿಸಿದ್ದು ಬಿಟ್ಟರೆ, ರಾಜ್ಯದ ಜನರು ಅವರಿಗೆ ಚಿನ್ನದ ತಟ್ಟೆಯಲ್ಲಿ ಅಧಿಕಾರವನ್ನು ಕೊಡಲಿಲ್ಲ. ಅಂತಹದೇ ಅವಕಾಶವಾದಿ ಸನ್ನಿವೇಶವನ್ನು ಅನುಕೂಲಕಾರಿಯಾಗಿ ಮಾಡಿಕೊಂಡ ಯಡಿಯೂರಪ್ಪ 2006ರಲ್ಲಿ ಉಪಮುಖ್ಯಮಂತ್ರಿಯೂ ಆದರು. ಶಾಸನಸಭೆಯಲ್ಲಿ ತಮಗೆ ಸಿಗದೇ ಇದ್ದ ಬಲವನ್ನು ಸೃಷ್ಟಿಸಿಕೊಂಡೇ ಅವರು 2008 ಹಾಗೂ 2019ರಲ್ಲಿ ಮುಖ್ಯಮಂತ್ರಿಯೂ ಆದರು.

2020ರ ಮಾರ್ಚ್‌ನಲ್ಲಿ ‘ಆಪರೇಷನ್ ಯಡಿಯೂರಪ್ಪ’ ಕಾರ್ಯಾಚರಣೆ ಶುರುವಾಗಿದೆ ಎಂದು ‘ಪ್ರಜಾವಾಣಿ’ ಸ್ಪಷ್ಟವಾಗಿ ಬರೆದಿತ್ತು. ಅದೀಗ, ನಿಜವಾಗಿದೆ.

ಬದಲಾಗದ ನಾಯಕ: 2008ರಲ್ಲಿ ಅಧಿಕಾರ ಹಿಡಿಯುವಷ್ಟು ಬಲ ಸಿಗದಾಗ ಪಕ್ಷೇತರರ ಬಲದ ಮೇಲೆ ಅಧಿಕಾರ ಹಿಡಿದ ಯಡಿಯೂರಪ್ಪ, ಅದನ್ನು ಶಾಶ್ವತವಾಗಿಸಲು ‘ಆಪರೇಷನ್ ಕಮಲ’ಕ್ಕೆ ಕೈ ಹಾಕಿದರು. ಆಗ ರಾಜಕಾರಣದಲ್ಲಿ ವಿಜೃಂಭಿಸುತ್ತಿದ್ದ ಗಾಲಿ ಜನಾರ್ದನ ರೆಡ್ಡಿ ಅದಕ್ಕೆ ಹಣವನ್ನೂ ಹೂಡಿದರು. ಬಂಡವಾಳ ಹೂಡಿದ್ದ ರೆಡ್ಡಿ ಸೋದರರು, ಸರ್ಕಾರವನ್ನು ಆಟವಾಡಿಸಲು ತೊಡಗಿದಾಗ ಯಡಿಯೂರಪ್ಪ ಅವರಿಗೆ ಹಣ ಇದ್ದರೆ ಏನನ್ನೂ ಸಾಧಿಸಬಹುದು ಎಂಬ ಆಲೋಚನೆ ಮೊಳತಿತು. ಅದು ವಿಕೋಪಕ್ಕೆ ಹೋಗಿ, ಕೊನೆಗೆ ಭ್ರಷ್ಟಾಚಾರದ ಆಪಾದನೆಯ ಸುಳಿಗೆ ಸಿಕ್ಕಿ ಅಧಿಕಾರವನ್ನು ತ್ಯಾಗ ಮಾಡಬೇಕಾಯಿತು.

ಈಗ ನಾಲ್ಕನೇ ಬಾರಿ ಯಡಿಯೂರಪ್ಪ ಅವರು ‘ಮಾಜಿ’ ಆಗಿದ್ದಾರೆ; ಆಗಿಸಲಾಗಿದೆ. ಏಕೆಂದರೆ ಯಡಿಯೂರಪ್ಪ ಅಷ್ಟು ಸುಲಭಕ್ಕೆ ಅಧಿಕಾರದಿಂದ ಇಳಿಯುವ ಜಾಯಮಾನದವರಲ್ಲ. ಅವರನ್ನು ಮಣಿಸಲು ಬಿಜೆಪಿ ವರಿಷ್ಠರು ಅನೇಕ ತಂತ್ರಗಳನ್ನು ಹೆಣೆದಿದ್ದಾರೆ ಎಂಬ ಮಾಹಿತಿಗಳು ದೆಹಲಿಯಿಂದಲೇ ಹೊರಬೀಳುತ್ತಿದ್ದವು. ಆ ಕಾರಣಕ್ಕಾಗಿಯೇ ಒಂದು ವಾರದಿಂದ ಯಡಿಯೂರಪ್ಪ ನಾನಾ ವಿಧದ ಆಟಗಳನ್ನು ಆಡಿದ್ದಾರೆ. ಮಠಾಧೀಶರ ಹೋರಾಟ ಇದರ ಭಾಗವೂ ಹೌದು. ಆ ಚೌಕಾಶಿಯಲ್ಲಿ ಯಡಿಯೂರಪ್ಪ ಯಶಸ್ವಿಯಾಗದೇ ಇರಲು ವರಿಷ್ಠರ ಬಳಿ ಇರುವ ಅಸ್ತ್ರವೇ ಕಾರಣ ಎನ್ನಲಾಗುತ್ತಿದೆ. ಸಿಬಿಐ, ಇ.ಡಿ ಬಳಸುವ ಭಯವೂ ಇದ್ದೀತು. ಇದರ ಜತೆಗೆ ಆಗಸ್ಟ್ 21ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಬರಲಿರುವ ಬೆಳ್ಳಂದೂರು ಭೂಮಿ ಡಿನೋಟಿಫೈ ಪ್ರಕರಣದಲ್ಲಿ ಯಡಿಯೂರಪ್ಪ ಅವರಿಗೆ ಸಮನ್ ಬರುವ ಸಾಧ್ಯತೆಯೂ ಇತ್ತು. ಇದು ಕೂಡ ಕೊನೆಗಳಿಗೆಯಲ್ಲಿ ಯಡಿಯೂರಪ್ಪ ಪದತ್ಯಾಗಕ್ಕೆ ಕಾರಣ ಎಂಬ ಮಾಹಿತಿಯೂ ದಟ್ಟವಾಗಿದೆ. ಇವೆಲ್ಲದರ ಜತೆಗೆಈಗ ವಯೋಸಹಜವಾಗಿ ಒದಗುವ ದೈಹಿಕ ಅಸಾಮರ್ಥ್ಯ ಅವರನ್ನು ಕಾಡುತ್ತಿದೆ.

ಅಧಿಕಾರಕ್ಕೇರಲು, ಅಧಿಕಾರ ಉಳಿಸಿಕೊಳ್ಳಲು ಯಡಿಯೂರಪ್ಪ ಶಕ್ತಿಯನ್ನು ಬಳಸಿಕೊಂಡ ಬಿಜೆಪಿ ನಾಯಕರು, ಕೇಂದ್ರ ಸಂಪುಟ ಪುನರ್ ರಚನೆ ವೇಳೆ ಕೈಗೊಂಡ ಗಟ್ಟಿ ತೀರ್ಮಾನಗಳನ್ನು ಗಮನಿಸಿದರೆ, ಕರ್ನಾಟಕದ ನೂತನ ಸರ್ಕಾರ ರಚನೆಯಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸಿದರೆ ಅಚ್ಚರಿಯಿಲ್ಲ.

ಬಿಎಸ್‌ವೈ ನಡೆ ?

l ಮುಖ್ಯಮಂತ್ರಿ ಆಯ್ಕೆಯಲ್ಲಿ ತಮ್ಮ ಸಲಹೆಗೆ ಮನ್ನಣೆ ಕೊಟ್ಟರೆ, ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಆಯಕಟ್ಟಿನ ಸ್ಥಾನ ಕೊಟ್ಟರೆ ಯಡಿಯೂರಪ್ಪ ಮತ್ತೆ ಎಂದಿನ ಉತ್ಸಾಹದಲ್ಲಿ ಚಿಮ್ಮಿ ನಡೆಯಬಹುದು

l ವಿಜಯೇಂದ್ರ ಅವರಿಗೆ ನೀಡದೇ ಸಂಸದರಾಗಿರುವ ಬಿ.ವೈ. ರಾಘವೇಂದ್ರ ಅವರನ್ನು ಉಪಮುಖ್ಯಮಂತ್ರಿ ಮಾಡಿದರೂ ಅದಕ್ಕೆ ಒಪ್ಪಿಕೊಂಡು ಉತ್ಸಾಹದಿಂದಲೇ ಕೆಲಸ ಮಾಡಬಹುದು

l ಯಡಿಯೂರಪ್ಪ ಬಯಸಿದವರು ಮುಖ್ಯಮಂತ್ರಿಯಾಗದೇ, ಪುತ್ರರಿಗೆ ಸ್ಥಾನ ಸಿಗದೇ ಇದ್ದರೆ ಅವರು ಸರ್ಕಾರವನ್ನು ಪರೋಕ್ಷವಾಗಿ ನಿಯಂತ್ರಿಸಲು ತಮ್ಮದೇ ಸಚಿವರು, ಶಾಸಕರ ಗುಂಪು ಕಟ್ಟಿಕೊಂಡು ಕಾರ್ಯಪ್ರವೃತ್ತರಾಗಬಹುದು

l ಬಿಜೆಪಿ ವರಿಷ್ಠರು ನಿರ್ಲಕ್ಷ್ಯ ಮಾಡಿದರೆ ಪಕ್ಷದ ಕಡೆ ಮುಖ ಕೂಡ ಹಾಕದೇ ಸುಮ್ಮನೇ ವಿಶ್ರಾಂತಿ ಪಡೆಯಬಹುದು

l ತಮ್ಮನ್ನು ಕುರ್ಚಿಯಿಂದ ಇಳಿಸಲು ಕಾರಣರಾದವರನ್ನೇ ಮುಖ್ಯಮಂತ್ರಿ ಮಾಡಿದರೆ ಕೆಲಕಾಲ ಸುಮ್ಮನಿದ್ದು ಪ್ರತಿತಂತ್ರ ಹೂಡಿ ಸರ್ಕಾರ ಕೆಡಹುವ ಕೆಲಸಕ್ಕೂ ಕೈಹಾಕಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT